ADVERTISEMENT

ಮೊಹಮ್ಮದ್‌ ಫಾಝಿಲ್: ಹತ್ಯೆ: ತನಿಖೆಯ ಹೊಣೆ ಎಸಿಪಿಗೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 7:52 IST
Last Updated 31 ಜುಲೈ 2022, 7:52 IST
ಮೊಹಮ್ಮದ್‌ ಫಾಝಿಲ್
ಮೊಹಮ್ಮದ್‌ ಫಾಝಿಲ್   

ಮಂಗಳೂರು: ಸುರತ್ಕಲ್‌ನಲ್ಲಿ ನಡೆದ ಮಹಮ್ಮದ್‌ ಫಾಝಿಲ್‌ ಹತ್ಯೆಯ ತನಿಣೆಯ ಹೊಣೆಯನ್ನು ಮಂಗಳೂರು ಪೊಲೀಸ್‌ ಕಮಿಷನರೇಟ್‌ನ ಎಸಿಪಿ ಮಹೇಶ್‌ ಕುಮಾರ್‌ ಅವರಿಗೆ ವಹಿಸಿ ನಗರ ಪೊಲೀಸ್‌ ಕಮಿನಷರ್‌ ಎನ್‌.ಶಶಿಕುಮಾರ್‌ ಅವರು ಭಾನುವಾರ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಸುರತ್ಕಲ್‌ ಠಾಣೆಯ ಇನ್‌ಸ್ಪೆಕ್ಟರ್‌ ಚಂದ್ರಪ್ಪ ಅವರು ಈ ಪ್ರಕರಣ ತನಿಖೆ ನಡೆಸುತ್ತಿದ್ದರು. ಪ್ರಕರಣದ ತನಿಖೆಯನ್ನು ಉನ್ನತ ಅಧಿಕಾರಿಗಳಿಂದ ನಿಕ್ಷ್ಪಕ್ಷಪಾತವಾಗಿ ನಡೆಸುವಂತೆ ಫಾಝಿಲ್‌ ಅವರ ತಂದೆ ಉಮರ್‌ ಫಾರೂಕ್‌ ಅವರು ಕೋರಿಕೆ ಸಲ್ಲಿಸಿದ್ದರು. ಆದ್ದರಿಂದ ಎಸಿಪಿ ಮಹೇಶ್‌ ಕುಮಾರ್‌ ಅವರನ್ನು ತನಿಖಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ ಎಂದು ಶಶಿಕುಮಾರ್‌ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಎಚ್‌ಪಿಸಿಎಲ್‌ನ ಬುಲೆಟ್‌ ಟ್ಯಾಂಕರ್‌ನಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡುತ್ತಿದ್ದ ಮಹಮ್ಮದ್‌ ಫಾಜಿಲ್‌ ಜುಲೈ 28ರಂದು ಸಂಜೆ ಸ್ನೇಹಿತ ಮೊಹಮ್ಮದ್‌ ಶಾಹಿಲ್‌ ಜೊತೆಗೆ ಸುರತ್ಕಲ್‌ಗೆ ತೆರಳಿದ್ದರು. ಸ್ನೇಹಿತನ ಜೊತೆ ಮಳಿಗೆಯೊಂದರ ಬಳಿ ನಿಂತು ಮಾತನಾಡುತ್ತಿದ್ದಾಗ ರಾತ್ರಿ 7.30ರ ಸುಮಾರಿಗೆ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ತಲವಾರಿನಿಂದ ಕಡಿದು ಪರಾರಿಯಾಗಿದ್ದರು. ಫಾಝಿಲ್‌ ಅವರ ರಕ್ಷಣೆಗೆ ಮೊಹಮ್ಮದ್‌ ಶಾಹಿಲ್‌ ಅವರು ಧಾವಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಸ್ಥಳದಲ್ಲಿದ್ದವರು ಗಾಯಾಳುವನ್ನು ಸುರತ್ಕಲ್‌ನ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಎ.ಜೆ.ಆಸ್ಪತ್ರೆಗೆ ಕರೆದೊಯ್ಯಗಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದರು.

ರಕ್ತದಾನ ಮಾಡುತ್ತಿದ್ದ ಫಾಝಿಲ್‌:

‘ನನ್ನ ಮಗ ಎಲ್ಲರೊಂದಿಗೂ ಸಾಮರಸ್ಯದಿಂದ ಬದುಕುತ್ತಿದ್ದ. ಜಾತಿ ಧರ್ಮ ನೋಡದೇ ರಕ್ತದಾನ ಮಾಡಿ ಅನೇಕ ಮಂದಿಗೆ ಜೀವದಾನ ಮಾಡಿದ್ದಾನೆ. ಅವನ ಮೇಲೆ ಮತೀಯ ದ್ವೇಷದಿಂದ ಕೊಲೆಗಡುಕರು ಮಾರಣಾಂತಿಕ ಹಲ್ಲೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮಗನನ್ನು ಅಮಾನವೀಯವಾಗಿ ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕು. ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಫಾಝಿಲ್‌ ಅವರ ತಂದೆ ಉಮ್ಮರ್‌ ಫಾರೂಕ್‌ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.

‘ನಮ್ಮ ಕುಟುಂನ ಬಹಳ ಕಷ್ಟದಿಂದ ಜೀವನ ನಡೆಸುತ್ತಿದೆ. ಮಗನೇ ಕುಟುಂಬಕ್ಕೆ ಆಧಾರಸ್ತಂಬವಾಗಿದ್ದ. ನನಗೆ 50 ವರ್ಷ ತುಂಬಿದೆ. ನಾನು ಹೃದಯ ಕಾಯಿಲೆಯಿಂದ ಬಳಲುತ್ತಿದ್ದೇನೆ. ಮಗನ ಸಾವಿನಿಂದ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ’ ಎಂದೂ ಉಮ್ಮರ್‌ ಫಾರೂಕ್‌ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.