ADVERTISEMENT

ಗ್ಯಾರಂಟಿ ಯೋಜನೆಗಳಿಂದ ಗೌರವಯುತ ಬದುಕು: ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್

ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 6:22 IST
Last Updated 8 ಮಾರ್ಚ್ 2024, 6:22 IST

ಮಂಗಳೂರು: ‘ಜನರಿಗೆ ಬದುಕು–ಭಾವನೆ ಎರಡೂ ಮುಖ್ಯ. ಕೇವಲ ಭಾವನೆಯಿಂದ ದೇಶವನ್ನು ಕಟ್ಟಲಾಗದು. ಜನರು ಉತ್ತಮ‌ ಬದುಕು ರೂಪಿಸಿಕೊಳ್ಳಲು ಸಾಧ್ಯವಾದರೆ ಮಾತ್ರ ದೇಶವು ವಿಶ್ವಗುರು ಆಗಲಿದೆ. ಗೌರವಯುತ ಬದುಕು ರೂಪಿಸಿಕೊಳ್ಳಲು ಬೇಕಾದ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಒದಗಿಸಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಹರೀಶ್‌ ಕುಮಾರ್‌ ಹೇಳಿದರು.

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮಂಗಳೂರು ತಾಲ್ಲೂಕು ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಇಲ್ಲಿ ಬುಧವಾರ ಮಾತನಾಡಿದರು.

‘ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಾಧ್ಯವೋ ಎಂಬ ಅನುಮಾನ ನನಗೂ ಆರಂಭದಲ್ಲಿ ಕಾಡಿತ್ತು. ನೀಡಿದ್ದ ಭರವಸೆಯಂತೆ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳನ್ನು ಸರ್ಕಾರ ಅನುಷ್ಠಾನ ಮಾಡಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ‘ಗ್ಯಾರಂಟಿ ಯೋಜನೆಗಳಿಗೆ ವಾರಂಟಿ ಇಲ್ಲ. ಇದು ಕೇವಲ ಚುನಾವಣೆಗೆ ಸೀಮಿತ ಎಂದು ವಿರೋಧ ಪಕ್ಷಗಳ ನಾಯಕರು ಟೀಕಿಸಿದ್ದರು. ಅದನ್ನು ಜಾರಿಗೊಳಿಸಿದ ಬಳಿಕ ಈ ಯೋಜನೆಗಳಿಂದ ರಾಜ್ಯವು ದಿವಾಳಿ ಆಗಲಿದೆ ಎಂದರು. ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನಕ್ಕೇರಿದೆ. ದಿವಾಳಿ ಆಗಿದ್ದರೆ ಇದು ಸಾಧ್ಯವಾಗುತ್ತಿತ್ತಾ’ ಎಂದು ಪ್ರಶ್ನಿಸಿದರು. 

‘ವಿದ್ಯುತ್‌ ದರವನ್ನು ಕಡಿಮೆ ಮಾಡಿದ್ದೇವೆ. ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ. ಗ್ಯಾರಂಟಿ ಯೋಜನೆಗಳಿಂದಾದ ಬೆಳವಣಿಗೆ ಬಗ್ಗೆ ಪ್ರಪಂಚದ ಆರ್ಥಿಕ ತಜ್ಞರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ’ ಎಂದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ‘ಬಡ ಮಹಿಳೆಯರು ಮನೆ ನಿಭಾಯಿಸಲು ಸರ್ಕಾರ ಆರ್ಥಿಕ ಶಕ್ತಿ ನೀಡಿದೆ. ಕುಟುಂಬ ನಿರ್ವಹಣೆಗೆ ಹೆಣಗಾಡುತ್ತಿದ್ದ ಮಹಿಳೆಯರು ಸ್ವಾವಲಂಬಿಗಳಾಗಲು ಗ್ಯಾರಂಟಿ ಯೋಜನೆಗಳು ನೆರವಾಗಿವೆ’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ಫಲಾನುಭವಿಗಳ ವಿವರ ನೀಡಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರವೀಣ್ ಆಳ್ವ, ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ಭಾಸ್ಕರ ಮೊಯಿಲಿ, ನವೀನ್ ಡಿಸೋಜ, ವಿನಯರಾಜ್, ಅನಿಲ್ ಕುಮಾರ್, ಸಂಶುದ್ದೀನ್, ಅಶ್ರಫ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್‌ ಕೆ., ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ, ಪಾಲಿಕೆ ಆಯುಕ್ತ ಆನಂದ್, ಉಪವಿಭಾಗಾಧಿಕಾರಿ‌ ಹರ್ಷವರ್ಧನ್, ತಹಶೀಲ್ದಾರ್‌ ಪ್ರಶಾಂತ ವಿ.ಪಾಟೀಲ ಭಾಗವಹಿಸಿದ್ದರು.

ಮಹೇಶ್ ಸ್ವಾಗತಿಸಿದರು. ಪಾಲಿಕೆ ಅಧಿಕಾರಿ ಮಾಲಿನಿ ವಂದಿಸಿದರು.

ಕುರ್ಚಿಗಳು ಖಾಲಿ ಖಾಲಿ: ಸಭೆಯ ಆರಂಭದಲ್ಲಿ ಇದ್ದ ಅನೇಕರು ಅರ್ಧದಲ್ಲೇ ಎದ್ದು ಹೋಗಿದ್ದರಿಂದ ಬಹುಪಾಲು ಖಾಲಿ ಕುರ್ಚಿಗಳ ಎದರು ಗಣ್ಯರು ಭಾಷಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.