ADVERTISEMENT

ಮಂಗಳೂರು | ರಸ್ತೆ ಅಗೆಯುವ ಗೋಳು: ಮುಕ್ತಿ ಎಂದು?

ಇಲಾಖೆಗಳ ಸಮನ್ವಯದಿಂದ ಕಾಮಗಾರಿ ನಡೆಸಿ, ಸ್ಥಳೀಯರಿಗೆ ತೊಂದರೆ ಮಾಡಬೇಡಿ: ನಿವಾಸಿಗಳ ಆಗ್ರಹ

ಸಂಧ್ಯಾ ಹೆಗಡೆ
Published 14 ಮೇ 2025, 5:33 IST
Last Updated 14 ಮೇ 2025, 5:33 IST
ಜಲಸಿರಿ ಕಾಮಗಾರಿಗಾಗಿ ರಸ್ತೆ ಅಗೆದು, ಮಣ್ಣು ಮುಚ್ಚಿರುವುದು
ಜಲಸಿರಿ ಕಾಮಗಾರಿಗಾಗಿ ರಸ್ತೆ ಅಗೆದು, ಮಣ್ಣು ಮುಚ್ಚಿರುವುದು   

ಮಂಗಳೂರು: ‘ಹಲವಾರು ವರ್ಷ ಕಾದು ಅಂತೂ ರಸ್ತೆ ಆಯಿತೆಂದು ಖುಷಿಯಲ್ಲಿದ್ದೆವು. ಆದರೆ, ಆ ಖುಷಿಯನ್ನು ಸಂಭ್ರಮಿಸುವಷ್ಟರಲ್ಲೇ ಯಂತ್ರವೊಂದು ಬಂದು ದೊಡ್ಡ ಸದ್ದು ಮಾಡುತ್ತ ರಸ್ತೆಯನ್ನು ಅಗೆದು ಹಾಕಿತ್ತು’.

‘ಹೊಸ ರಸ್ತೆ ಮಾಡುವುದು, ಮತ್ತೆ ಅಗೆದು ಹಾಕುವುದು ನೋಡಿ ಬೇಸತ್ತಿದ್ದೇವೆ. ಇಲಾಖೆಗಳ ನಡುವೆ ಸಮನ್ವಯವೇ ಇಲ್ಲ..’ ಎನ್ನುತ್ತ ಮಾತಿಗಿಳಿದರು ಗುಂಡೂರಾವ್ ರಸ್ತೆಯ ನಿವಾಸಿಗಳು.

ನಗರದ ಮಧ್ಯೆ ಇರುವ ಮಣ್ಣಗುಡ್ಡ ವಾರ್ಡ್‌ನಲ್ಲಿ ಮನೆಗಳು, ಅಪಾರ್ಟ್‌ಮೆಂಟ್‌ಗಳು ಸಾಕಷ್ಟು ಇವೆ. ಮುಖ್ಯ ರಸ್ತೆಗಳೆಲ್ಲ ಕಾಂಕ್ರೀಟ್ ಅಥವಾ ಡಾಂಬರ್ ಹೊದ್ದು ಸುಂದರವಾಗಿವೆ. ಒಳ ರಸ್ತೆಗಳು, ಓಣಿಗಳಲ್ಲಿ ನಿರ್ವಹಣೆ ಕೊರತೆ ಢಾಳಾಗಿ ಕಾಣುತ್ತದೆ. 

ADVERTISEMENT

‘ಜಲಸಿರಿ ಪೈಪ್‌ಲೈನ್‌ಗಾಗಿ ರಸ್ತೆಯನ್ನು ಅಗೆದು ಹಾಕಿದ್ದಾರೆ. ಮತ್ತೆ ಅದನ್ನು ದುರಸ್ತಿ ಮಾಡಿಲ್ಲ. ರಸ್ತೆ ಅಗೆದ ಮೇಲೆ ದುರಸ್ತಿ ಮಾಡುವುದು ಅವರ ಹೊಣೆಯಲ್ಲವೇ? ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೆ, ಅವರು ಸ್ಥಳಕ್ಕೆ ಭೇಟಿ ನೀಡುತ್ತಾರೆಯೇ ವಿನಾ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ. ಸಮಸ್ಯೆ ಯಥಾಸ್ಥಿತಿಯಲ್ಲಿ ಇರುತ್ತದೆ’ ಎಂದು ಬೇಸರಿಸಿದರು ಸ್ಥಳೀಯ ಮಹಿಳೆಯೊಬ್ಬರು.

‘ಸಣ್ಣ ಓಣಿಯಾಗಿದ್ದ ನಮ್ಮ ಭಾಗದಲ್ಲಿ ರಸ್ತೆ ನಿರ್ಮಾಣ ಮಾಡುವುದಾಗಿ ಪಾಲಿಕೆಯವರು ಹೇಳಿದಾಗ, ನಮ್ಮಂತೆ ಹಲವರು ಜಾಗ (ಟಿಡಿಆರ್) ಬಿಟ್ಟುಕೊಟ್ಟರು. ದಾರಿ ಈಗ ಒಂದು ವಾಹನ ಹೋಗುವಷ್ಟು ಅಗಲವಾಗಿದೆ. ಆದರೆ, ರಸ್ತೆ ತುಂಬ ಅಗೆದು ಮುಚ್ಚಿರುವ ಹೊಂಡಗಳು, ತೋಡು ನಿರ್ಮಿಸದ ಕಾರಣ ಮಳೆಗಾಲದಲ್ಲಿ ರಸ್ತೆಯೇ ಹೊಳೆಯಂತಾಗುತ್ತದೆ’ ಎಂದು ನಿವಾಸಿಯೊಬ್ಬರು ಬೇಸರಿಸಿದರು.

ಮಠದ ಕಣಿ ಮುಖ್ಯ ರಸ್ತೆ ಸುಸಜ್ಜಿತವಾಗಿದೆ. ಒಳಭಾಗದಲ್ಲಿ ಇನ್ನೂ ಕೆಲವು ಕಚ್ಚಾ ರಸ್ತೆಗಳು ಇವೆ. ಗೇಲ್ ಗ್ಯಾಸ್‌ನವರು ಪೈಪ್ ಅಳವಡಿಸಿ ಹೋಗಿ, ಐದು ವರ್ಷಗಳು ಕಳೆದಿವೆ. ಪೈಪ್‌ಗಳು ಈಗ ತುಕ್ಕು ಹಿಡಿದಿವೆ. ವಿದ್ಯುತ್ ಕಂಬಗಳು ಕೇಬಲ್‌ಗಳ ಕಬಂಧಬಾಹುವಿಗೆ ಸಿಲುಕಿವೆ. ₹8 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಪುಟ್ಟ ಪಾರ್ಕ್ ನಿರ್ವಹಣೆ ಇಲ್ಲದೆ ಕಳೆಗಳಿಂದ ತುಂಬಿದೆ. ಇದು ನಮ್ಮ ವಾರ್ಡ್ ಸ್ಥಿತಿ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯ ನಿವಾಸಿಯೊಬ್ಬರು ಬೇಸರ ಹೊರಹಾಕಿದರು.

‘ಮನೆ–ಮನೆ ಕಸ ಸಂಗ್ರಹದ ವಾಹನ ನಿಯಮಿತವಾಗಿ ಬರುತ್ತದೆ. ಆದರೆ, ರಸ್ತೆ ಬದಿಯಲ್ಲಿ ರಾಶಿ ಹಾಕಿಡುವ ಕಸ ಎತ್ತಿಕೊಂಡು ಹೋಗುವವರೇ ಇಲ್ಲ. ಕೆಲವು ಕಡೆ ಕಸವನ್ನು ತೋಡಿಗೆ ದೂಡಿ ಬಿಡಲಾಗುತ್ತದೆ. ಇದರಿಂದ ಮಳೆಗಾಲದಲ್ಲಿ ನೀರು ಹರಿಯಲು ಸಮಸ್ಯೆಯಾಗುತ್ತದೆ. ಅನೇಕ ಅಪಾರ್ಟ್‌ಮೆಂಟ್‌ಗಳ ನೀರು ನೇರವಾಗಿ ಕಾಲುವೆಗೆ ಸೇರುತ್ತದೆ. ರಾಜಕಾಲುವೆಯ ಹೂಳು ತೆಗೆದು ಬದಿಯಲ್ಲಿ ಮಣ್ಣನ್ನು ರಾಶಿ ಹಾಕಲಾಗುತ್ತದೆ. ಅದು ಪುನಃ ಜಾರಿ ಕಾಲುವೆಯೊಳಗೆ ಸೇರುತ್ತದೆ. ಕಾಟಾಚಾರಕ್ಕೆ ಕೆಲಸ ಎಂಬಂತಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ಬಳ್ಳಾಲ್‌ಬಾಗ್ ಆರೋಪಿಸಿದರು.

ಬಳ್ಳಾಲ್‌ಬಾಗ್ ಸಮೀಪ ದೊಡ್ಡ ಕಾಲುವೆಯ ಹೂಳನ್ನು ತೆಗೆದು ದಡದ ಮೇಲೆ ರಾಶಿ ಹಾಕಿಡಲಾಗಿದೆ
ಒತ್ತುವರಿಯಾಗಿರುವ ರಾಜಕಾಲುವೆ ತೆರವುಗೊಳಿಸಬೇಕು. ವಾರ್ಡ್‌ನಲ್ಲಿ ಕೆಲಸ ಮಾಡುವಾಗ ನಿವಾಸಿಗಳಿಗೆ ಮಾಹಿತಿ ನೀಡಬೇಕು.
ಗಣೇಶ್ ಬಳ್ಳಾಲ್‌ಬಾಗ್ ಸಾಮಾಜಿಕ ಕಾರ್ಯಕರ್ತ

ಬೇಡಿಕೆಗಳು

  • ರಸ್ತೆ ಬದಿ ಸಂಗ್ರಹಿಸುವ ಕಸವನ್ನು ನಿಯಮಿತವಾಗಿ ಕೊಂಡೊಯ್ಯಬೇಕು

  • ವಸತಿ ಸಮುಚ್ಚಯಗಳ ಕೊಳಚೆ ನೀರು ನೇರವಾಗಿ ಕಾಲುವೆಗೆ ಸೇರುವುದನ್ನು ತಡೆಯಬೇಕು

  • ರಸ್ತೆ ನಿರ್ಮಿಸುವಾಗ ಕಡ್ಡಾಯವಾಗಿ ತೋಡು ನಿರ್ಮಿಸಬೇಕು

  • ದೊಡ್ಡ ಕಾಲುವೆ ಒತ್ತುವರಿ ತಡೆಯಬೇಕು ಸಮರ್ಪಕವಾಗಿ ಹೂಳು ತೆಗೆಯಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.