ADVERTISEMENT

‘ಮತ್ಸ್ಯಾವತಾರ’, ‘ಕಾಳಿಂಗ ಮರ್ಧನ’ ಆಕರ್ಷಣೆ

ಶೋಭಾಯಾತ್ರೆ: ಸಜ್ಜಾಗುತ್ತಿದೆ ಪೇಟೆ ಶ್ರೀರಾಮಮಂದಿರ ದೇವಾಲಯ, ದೇಚೂರು ಶ್ರೀರಾಮಮಂದಿರದ ಮಂಟಪಗಳು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 6:46 IST
Last Updated 8 ಅಕ್ಟೋಬರ್ 2024, 6:46 IST
<div class="paragraphs"><p>ದೇಚೂರು ಶ್ರೀರಾಮಮಂದಿರವು ಕಳೆದ ವರ್ಷ ಶೋಭಾಯಾತ್ರೆಯಲ್ಲಿ ಪ್ರದರ್ಶಿಸಿದ ‘ಮಧು ಕೈಟಬರ ವಧಾ’ ಪ್ರಸಂಗವು ಸೂಜಿಗಲ್ಲಿನಂತೆ ಸೆಳೆದಿತ್ತು</p></div>

ದೇಚೂರು ಶ್ರೀರಾಮಮಂದಿರವು ಕಳೆದ ವರ್ಷ ಶೋಭಾಯಾತ್ರೆಯಲ್ಲಿ ಪ್ರದರ್ಶಿಸಿದ ‘ಮಧು ಕೈಟಬರ ವಧಾ’ ಪ್ರಸಂಗವು ಸೂಜಿಗಲ್ಲಿನಂತೆ ಸೆಳೆದಿತ್ತು

   

ಮಡಿಕೇರಿ: ‘ಬೆಳಕಿನ ದಸರೆ’ಯಲ್ಲಿ ಮೊದಲಿಗೆ ಹೊರಡುವ ಮಂಟಪ ಪೇಟೆ ಶ್ರೀರಾಮಮಂದಿರದ್ದು. ಸುಮಾರು 150ಕ್ಕೂ ಅಧಿಕ ವರ್ಷಗಳಷ್ಟು ಸುದೀರ್ಘ ಕಾಲದಿಂದ ವಿಜಯದಶಮಿಯಂದು ಮೆರವಣಿಗೆಯಲ್ಲಿ ಭಾಗಿಯಾಗುತ್ತಿರುವ ಈ ದೇಗುಲದ ಮಂಟಪ ಕಲೆ ಹಾಗೂ ಸಂಸ್ಕೃತಿಯ ಉಳಿಸುವಿಕೆಯಲ್ಲಿ ತನ್ನದೇಯಾದ ಮಹತ್ವವನ್ನುಪಡೆದಿದೆ.

ವಿಜಯದಶಮಿಯ ದಿನ ಪಲ್ಲಕ್ಕಿಯಲ್ಲಿ ದೇವರಪಟಗಳನ್ನು ಹೊತ್ತುಕೊಂಡು ನಗರದಲ್ಲಿ ಮೆರವಣಿಗೆ ಮಾಡುವ ಸಂಪ್ರದಾಯ ಆರಂಭವಾಯಿತು. ನಂತರ, ಚಲಿಸುವ ಮಂಟಪ ಮಾಡುವುದನ್ನು ಆರಂಭಿಸಲಾ ಯಿತು. ತದನಂತರ ಕ್ರಮೇಣ ಉಳಿದ ದೇಗುಲಗಳೂ ಮಂಟಪ ಹೊರಡಿಸಲು ಆರಂಭಿಸಿದವು.

ADVERTISEMENT

ಪೇಟೆ ಶ್ರೀರಾಮಮಂದಿರದ ಮಂಟಪವೇ ಮೊದಲು ಹೊರಟು 4 ಕರಗಗಳ ದೇವಸ್ಥಾನಕ್ಕೆ ಕಳಸದೊಂದಿಗೆ ಹೋಗುತ್ತದೆ. ತದನಂತರ, ಎಲ್ಲ ಮಂಟಪಗಳೂ ಹೊರಡುತ್ತವೆ.

ಕಳೆದ ವರ್ಷ ‘ವೈಕುಂಠ ದರ್ಶನ’ವನ್ನು ತನ್ನ ಮಂಟಪದಲ್ಲಿ ಪ್ರದರ್ಶಿಸಿ, ನೋಡುಗರ ಮೆಚ್ಚುಗೆ ಗಳಿಸಿತ್ತು. ಅದಕ್ಕೂ ಮುಂಚಿನ ವರ್ಷದಲ್ಲಿ ‘ಶಿವದರ್ಶನ’ವೂ ಸೂಜಿಗಲ್ಲಿನಂತೆ ಸೆಳೆದಿತ್ತು. ಈ ಬಾರಿ ಪೇಟೆ ಶ್ರೀರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿಯು ‘ವಿಷ್ಣುವಿನ ಮತ್ಸ್ಯಾವತಾರ’ ಕಥಾ ಹಂದರವನ್ನು ಆಯ್ದುಕೊಂಡಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮಿತಿಯ ಅಧ್ಯಕ್ಷ ಎಂ.ಚೇತನ್, ‘ಈ ಬಾರಿ ವಿಷ್ಣುವಿನ ಮತ್ಸ್ಯಾವತಾರ ಕಥೆಯನ್ನು ಮಂಟಪದಲ್ಲಿ ಬಿತ್ತರಿಸಲಾಗುವುದು. ಇದಕ್ಕಾಗಿ ₹ 10 ಲಕ್ಷವನ್ನು ವ್ಯಯಿಸಲಾಗುತ್ತಿದೆ. 2 ಟ್ರಾಕ್ಟರ್‌ಅನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಟ್ಟು 4 ಕಲಾಕೃತಿಗಳು ಮಂಟಪದಲ್ಲಿ ಇರಲಿವೆ. ಕಲಾಕೃತಿಗಳನ್ನು ಕೇರಳದ ಪಯ್ಯನೂರಿನ ಕಲಾವಿದ ಮಧುಕರ್ ಹಾಗೂ ತಂಡದವರು ತಯಾರಿಸುತ್ತಿದ್ದಾರೆ. ಲೈಟಿಂಗ್ ಬೋರ್ಡ್‌ಅನ್ನು ದಿಂಡಿಗಲ್‌ನ ಸೆಲ್ವಂ ಎಲೆಕ್ಟ್ರಿಕಲ್ಸ್‌ನವರು ರೂಪಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಎಂದಿನಂತೆ ನಮ್ಮ ಮಂಟಪ ಸಾಂಪ್ರದಾಯಿಕವಾಗಿ ಮೆರವಣಿಗೆಯಲ್ಲಿ ಸಾಗಲಿದೆ’ ಎಂದು ಅವರು ಹೇಳಿದರು.

ದೇಚೂರಿನಲ್ಲಿ ಈ ಬಾರಿ ‘ಕಾಳಿಂಗ ಮರ್ಧನ’

ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ 2ನೇಯದಾಗಿ ಹೊರಡುವ ದೇಚೂರು ಶ್ರೀರಾಮಮಂದಿರವು ಈಗಾಗಲೇ 105 ವಸಂತಗಳನ್ನು ಪೂರೈಸಿ 106ನೇ ವರ್ಷಕ್ಕೆ ಕಾಲಿಡುತ್ತಿದೆ.

ಕಳೆದ ಬಾರಿ ಪ್ರದರ್ಶಿಸಿದ್ದ ಮಧುಕೈಟಭರ ವಧಾ ಪ್ರಸಂಗವು ನೋಡುಗರಿಗೆ ರಸದೌತಣವನ್ನೇ ಉಣಬಡಿಸಿತ್ತು. ಈ ಬಾರಿ ಅತಿ ವಿಶಿಷ್ಟವಾಗಿರುವ ಹಾಗೂ ರಮಣೀಯ ಎನಿಸುವ ‘ಕಾಳಿಂಗ ಮರ್ಧನ’ದ ಕಥಾ ಹಂದರವನ್ನು ಪ್ರಸ್ತುತಪಡಿಸಲು ಭರದ ಸಿದ್ಧತೆ ನಡೆಸುತ್ತಿದೆ.

ಇದಕ್ಕಾಗಿ ಒಟ್ಟು 2 ಟ್ರಾಕ್ಟರ್‌ಗಳನ್ನು ಬಳಕೆ ಮಾಡಲಾಗುತ್ತಿದ್ದು, ಇದರಲ್ಲಿ ಒಟ್ಟು 28 ಕಲಾಕೃತಿಗಳು ತಮ್ಮ ಚಮತ್ಕಾರ ತೋರಲಿವೆ. ಮಡಿಕೇರಿಯ ಆರ್.ಬಿ.ಕ್ರಿಯೇಷನ್ಸ್‌ನವರು ಕಲಾಕೃತಿಗಳನ್ನು ರಚಿಸಲಿದ್ದಾರೆ.

ಒಟ್ಟು ₹ 25 ಲಕ್ಷ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಬೃಹತ್ ಮಂಟಪಕ್ಕೆ ದಿಂಡಿಗಲ್‌ನ ಜೇಮ್ಸ್ ಲೈಟಿಂಗ್‌ ಬೋರ್ಡ್‌ ಅಳವಡಿಸುತ್ತಿದ್ದಾರೆ. ಟ್ರಾಕ್ಟರ್‌ ವಿನ್ಯಾಸವನ್ನು ಗಣೇಶ್‌ ಬೆಳವಾಯಿ, ಕಿರಣ್ ರಾಜ್‌, ಸೋಮಶೇಖರ್, ನಿತೀಶ್ ತಂಡದವರು ಮಾಡುತ್ತಿದ್ದಾರೆ.

ಈ ಬಾರಿ ಕಾಳಿಂಗ ಮರ್ಧನ ನಿಜಕ್ಕೂ ಅಮೋಘವಾಗಿರಲಿದೆ, ಎಲ್ಲ ಬಗೆಯ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಮೊದಲ ಸ್ಥಾನಕ್ಕೆ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಮಿತಿ ಅಧ್ಯಕ್ಷ ಆರ್‌.ಪಿ.ಚಂದ್ರಶೇಖರ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.