ಮಂಗಳೂರು: ಚಳಿಗಾಲ ಕಳೆದು ಬೇಸಿಗೆ ಅಡಿ ಇಡುತ್ತಿದ್ದಂತೆಯೇ ಬಿಸಿಲ ಧಗೆ ವಿಪರೀತ ಜಾಸ್ತಿಯಾಗಿದೆ. ಫೆಬ್ರುವರಿ ತಿಂಗಳಲ್ಲೇ ಕರಾವಳಿಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಂಟಿಗ್ರೇಡ್ ದಾಡಿದೆ. ಪಣಂಬೂರಿನಲ್ಲಿ ಬುಧವಾರ ಗರಿಷ್ಠ ಉಷ್ಣಾಂಶ 38.3 ಡಿಗ್ರಿವರೆಗೆ ತಲುಪಿತ್ತು ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇದೇ 27ರವರೆಗೆ ‘ಬಿಸಿ ಗಾಳಿ’ಯಿಂದ ಕೂಡಿದ ಆರ್ದ್ರ ವಾತಾವರಣ ಸೃಷ್ಟಿಯಾಗಲಿದ್ದು, ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಣೆ ಮಾಡಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
2017ರಲ್ಲಿ ಪಣಂಬೂರಿನಲ್ಲಿ 38.7 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ದಾಖಲಾಗಿತ್ತು. ಜಿಲ್ಲೆಯಲ್ಲಿ ಫೆಬ್ರುವರಿ ತಿಂಗಳಲ್ಲಿ ಇದುವರೆಗೆ ದಾಖಲಾಗಿರುವ ಗರಿಷ್ಠ ಉಷ್ಣಾಂಶವಿದು. 2012ರಲ್ಲಿ ಮಂಗಳೂರು ವಿಮಾನನಿಲ್ದಾಣದಲ್ಲಿ 38.2 ಸೆಂಟಿಗ್ರೇಡ್ ಉಷ್ಣಾಂಶ ದಾಖಲಾಗಿತ್ತು.
‘ಬೇಸಿಗೆಯಲ್ಲಿ ನಿರ್ಜಲೀಕರಣಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಸಾಕಷ್ಟು ದ್ರವ ಪದಾರ್ಥ ಅಥವಾ ಪಾನೀಯಗಳನ್ನು ಹೆಚ್ಚಾಗಿ ಸೇವಿಸಬೇಕು. ಕಾರ್ಬೊನೇಟೆಡ್ ಪಾನೀಯಗಳಲ್ಲಿ ಸಕ್ಕರೆ ಅಂಶ ಜಾಸ್ತಿ ಇರುವುದರಿಂದ ಅವು ಸೇವೆನೆಗೆ ಸೂಕ್ತವಲ್ಲ. ಅತಿಯಾದ ಬಿಸಿಲಿಗೆ ಒಡ್ಡಿಕೊಂಡರೆ ಚರ್ಮದಲ್ಲಿ ಗುಳ್ಳೆಗಳು ಏಳಬಹುದು. ಉರಿ ಕಾಣಿಸಿಕೊಳ್ಳಬಹುದು. ಹಾಗಾಗಿ ಬಿಸಿಗಾಳಿಯ ವಾತಾವರಣವಿರುವಾಗ ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಇರಬೇಕು. ಬಿಸಿಲಿಗೆ ಅಥವಾ ಬಿಸಿಗಾಳಿಗೆ ನೇರವಾಗಿ ಒಡ್ಡಿಕೊಳ್ಳಬಾರದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಸಲಹೆ ನೀಡಿದರು.
‘ಬಿಸಿಲಿಗೆ ಅನಿವಾರ್ಯವಾಗಿ ಹೊರಗಡೆ ಹೋಗಬೇಕಾದರೆ ಕೊಡೆಗಳನ್ನು, ಹತ್ತಿಯ ಟೋಪಿಗಳನ್ನು ಬಳಸಬೇಕು. ಸಾಧ್ಯವಾದಷ್ಟು ಹತ್ತಿಯ ಉಡುಪುಗಳನ್ನು ಧರಿಸಬೇಕು. ಕಪ್ಪು ಅಥವಾ ಗಾಢ ಬಣ್ಣದ ಉಡುಪು ಹಾಗೂ ಸಿಂಥೆಟಿಕ್ ಉಡುಪುಗಳನ್ನು ಧರಿಸಬಾರದು. ಬಿಸಿಲು ತೀವ್ರವಾಗಿರುವ ಅವಧಿಯಲ್ಲಿ ವಿಶ್ರಾಂತಿ ಪಡೆಯಬೇಕು. ಶ್ರಮದಾಯಕ ದೈಹಿಕ ಕೆಲಸಗಳನ್ನು ಮಾಡಬಾರದು. ಸಾಕಷ್ಟು ನೀರು, ಮಜ್ಜಿಗೆ ಕುಡಿಯಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.