ADVERTISEMENT

ಎಂಸಿಸಿ ಬ್ಯಾಂಕ್: ₹ 8.27 ಕೋಟಿ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 10:04 IST
Last Updated 26 ಆಗಸ್ಟ್ 2022, 10:04 IST

ಮಂಗಳೂರು: ‘ಮಂಗಳೂರು ಕ್ಯಾಥೋಲಿಕ್‌ ಕೋ–ಆಪರೇಟಿವ್‌ (ಎಂಸಿಸಿ) ಬ್ಯಾಂಕ್‌ 2021–22 ನೇ ಸಾಲಿನಲ್ಲಿ ₹ 8.27 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಅನಿಲ್‌ ಕುಮಾರ್ ಲೋಬೊ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‌‘1912ರಲ್ಲಿ ಆರಂಭವಾದ ನಮ್ಮ ಬ್ಯಾಂಕ್‌ ಶತಮಾನೋತ್ತರ ದಶಮಾನೋತ್ಸವದ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ ಇತಿಹಾಸದಲ್ಲೇ ಅತಿ ಹೆಚ್ಚು ನಿವ್ವಳ ಲಾಭ ಗಳಿಸಿರುವುದು ಸಂತಸದ ವಿಷಯ. 2018ರಲ್ಲಿ ₹ 510 ಕೋಟಿಗಳಷ್ಟಿದ್ದ ಬ್ಯಾಂಕಿನ ವಾರ್ಷಿಕ ಸರಾಸರಿ ವಹಿವಾಟಿನ ಪ್ರಮಾಣ 2021–22ನೇ ಸಾಲಿನಲ್ಲಿ ₹ 861 ಕೋಟಿಗೆ ಹೆಚ್ಚಿದೆ’ ಎಂದರು.

‘ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಬ್ಯಾಂಕ್‌ ಅನೇಕ ಕ್ರಮಗಳನ್ನು ಕೈಗೊಂಡಿದೆ. ಹೆಚ್ಚಿನ ಶಾಖೆಗಳನ್ನು ವಾಹನ ನಿಲುಗಡೆಗೆ ಸುಸಜ್ಜಿತ ವ್ಯವಸ್ಥೆ ಇರುವ ಕಟ್ಟಡಗಳಿಗೆ ಸ್ಥಳಾಂತರಿಸಿದ್ದೇವೆ. ಸಿಬ್ಬಂದಿಗೆ ಕೌಶಲ ತರಬೇತಿ ಒದಗಿಸಿದ್ದೇವೆ. ಗ್ರಾಹಕರ ಕುಂದುಕೊರತೆ ಆಲಿಸಲು ನಡೆಸುತ್ತಿದ್ದ ಸಮಾವೇಶಗಳನ್ನು ಕೋವಿಡ್‌ ಕಾರಣದಿಂದ ಎರಡು ವರ್ಷ ಸ್ಥಗಿತಗೊಲಿಸಲಾಗಿತ್ತು. ಎಲ್ಲ ಶಾಖೆಗಳಲ್ಲೂ ಇದನ್ನು ಮತ್ತೆ ಆರಂಭಿಸಲಿದ್ದೇವೆ. ಇದೇ 28ರಂದು ಸಂಸ್ಥಾಪಕರ ಶಾಖೆಯಲ್ಲಿ ಗ್ರಾಹಕರ ಸಮಾವೇಶ ಏರ್ಪಡಿಸಲಾಗಿದೆ’ ಎಂದರು.

ADVERTISEMENT

ಸುದ್ದಿಗೋಷ್ಠಿ‌ಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್‌ ಜೂಡ್‌ ಡಿಸಿಲ್ವ, ಪ್ರಧಾನ ವ್ಯವಸ್ಥಾಪಕ ಸುನಿಲ್‌ ಮಿನೇಜಸ್‌, ನಿರ್ದೇಶರಾದ ಆಂಡ್ರ್ಯೂ ಡಿಸೋಜ, ಮಾರ್ಷಲ್‌ ಡಿಸೋಜ, ಐರಿನ್‌ ರೆಬೆಲ್ಲೊ, ಫ್ರೀಡಾ ರಾಡ್ರಿಗಸ್‌, ಡೇವಿಡ್‌ ಡೆನ್ನಿಸ್‌, ರೋಷನ್‌ ಡಿಸೋಜ, ಜೆರಾಲ್ಡ್‌ ಪಿಂಟೊ, ಅನಿಲ್‌ ಪತ್ರಾವೊ, ಸುಶಾಂತ್‌, ಹೆರಾಲ್ಡ್‌ ಮೊಂತೆರೊ, ಜೆ.ಪಿ.ರಾಡ್ರಿಗಸ್‌ ಪುತ್ತೂರು ಇದ್ದರು.

‘ವಸೂಲಾಗದ ಸಾಲ ಶೇ 1.60ಕ್ಕೆ ಇಳಿಕೆ’
‘ಬ್ಯಾಂಕಿನಲ್ಲಿ ದೀರ್ಘ ಕಾಲದಿಂದ ವಸೂಲಾಗದ ಸಾಲದ (ಎನ್‌ಪಿಎ) ನಿವ್ವಳ ಪ್ರಮಾಣ 2021–22ರಲ್ಲಿ ಶೇ 7.17ರಷ್ಟಿತ್ತು. ಅದನ್ನು ಶೇ 1.61ಕ್ಕೆ ಇಳಿಸಿದ್ದೇವೆ. ಇದು ಬ್ಯಾಂಕ್‌ನ ಅರ್ಥಿಕ ಸದೃಢತೆಯ ಸಂಕೇತ. ದೀರ್ಘ ಕಾಲದಿಂದ ವಸೂಲಾಗದಿರುವ ಸಾಲ ವಸೂಲಿಗೆ ವಿಭಾಗವೊಂದನ್ನು ಆರಂಭಿಸಿ, ಅದಕ್ಕೆ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಿದ್ದೇವೆ. ಇಂತಹ ಸಾಲಗಳ ವಸೂಲಾತಿಯ ವರದಿಯನ್ನು ಎಲ್ಲ ಶಾಖೆಗಳಿಂದ ನಿತ್ಯವೂ ಪಡೆಯುತ್ತಿದ್ದೇವೆ. ಎನ್‌ಪಿಎ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲು ಇಂತಹ ವೃತ್ತಿಪರ ಪ್ರಯತ್ನಗಲೇ ಕಾರಣ’ ಎಂದು ಅನಿಲ್‌ ಲೋಬೊ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.