ADVERTISEMENT

ಗುಡ್ಡ ಕುಸಿತದ ಭೀತಿ: ಮನೆ ತೊರೆಯಲು ನೋಟಿಸ್‌, ಕುಟುಂಬಗಳು ಕಂಗಾಲು

163 ಕುಟುಂಬಗಳಿಗೆ ತೊರೆಯುವಂತೆ ಪಾಲಿಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 12:46 IST
Last Updated 18 ಜೂನ್ 2025, 12:46 IST
ದೇರೇಬೈಲ್‌ ಕೊಂಚಾಡಿಯ ಬೋರುಗುಡ್ಡೆಯಲ್ಲಿರುವ ಸಾಯಿರಾಬಾನು ಅವರ ಮನೆ 
ದೇರೇಬೈಲ್‌ ಕೊಂಚಾಡಿಯ ಬೋರುಗುಡ್ಡೆಯಲ್ಲಿರುವ ಸಾಯಿರಾಬಾನು ಅವರ ಮನೆ     

ಮಂಗಳೂರು: ಕತ್ತಲು ಆವರಿಸುತ್ತಿದ್ದಂತೆಯೇ ದೇರೇಬೈಲ್‌ ಬೋರುಗುಡ್ಡೆಯ ಸಾಯಿರಾ ಬಾನು ಮನೆಗೆ ಬೀಗ ಹಾಕಿ, ತನ್ನಿಬ್ಬರು ಮಕ್ಕಳ ಜೊತೆ ನೆರೆ ಕರೆಯಲ್ಲಿರುವ ಪರಿಚಯದವರ ಮನೆಗೆ ತೆರಳುತ್ತಾರೆ.

‘ಮನೆ ತೊರೆಯಬೇಕು’ ಎಂದು ಮಂಗಳೂರು ಮಹಾನಗರ ಪಾಲಿಕೆಯ ಇನ್ಸಿಟೆಂಡ್ ಕಮಾಂಡರ್‌ ಅವರು ನೋಟಿಸ್ ನೀಡಿದ ಬಳಿಕ ಇದು ಅವರ ದಿನಚರಿಯಾಗಿಬಿಟ್ಟಿದೆ. 

‘ಮೊಂಟೆಪದವಿನಲ್ಲಿ  ಮೇ 30ರಂದು ಗುಡ್ಡ ಕುಸಿದು ಕುಟುಂಬವೊಂದರ ಮೂವರು ಪ್ರಾಣ ಕಳೆದುಕೊಂಡ ದುರ್ಘಟನೆ ಸಂಭವಿಸಿದ ಬಳಿಕ ಮನೆ ತೊರೆಯುವಂತೆ ಸೂಚಿಸಿ ನನಗೆ ನೋಟಿಸ್ ಜಾರಿ ಮಾಡಲಾಗಿದೆ. ನನ್ನ ಮನೆ ಗುಡ್ಡದ ಅಂಚಿನಲ್ಲಿದೆ. ಗುಡ್ಡ ಕುಸಿದರೆ ಯಾವುದೇ ಸಂದರ್ಭದಲ್ಲಿ ಬೇಕಾದರೂ ಮನೆ ನೆಲಸಮವಾಗಬಹುದು’ ಎಂದು ಸಾಯಿರಾ ತಿಳಿಸಿದರು. ಇನ್ಸಿಡೆಂಟ್ ಕಮಾಂಡರ್‌ ಪ್ರಮೀಳಾ ನೀಡಿರುವ ನೋಟಸ್‌ ಅನ್ನು ಅವರು ತೋರಿಸಿದರು.

ADVERTISEMENT

‘ಕಳೆದ ಮಳೆಗಾಲದಲ್ಲಿ ಸಂಭವಿಸಿದ ಭೂಕುಸಿತದಿಂದ ಮನೆಯ ಹಿತ್ತಿಲಿನಲ್ಲಿದ್ದ ನಾಲ್ಕು ತೆಂಗಿನ ಮರಗಳು ನೆಲಕ್ಕುರುಳಿವೆ’ ಎಂದು ಮನೆಕೆಲಸಕ್ಕೆ ಹೋಗಿ ಬದುಕು ಸಾಗಿಸುತ್ತಿರುವ ಸಾಯಿರಾ ನೆನಪಿಸಿಕೊಂಡರು. ಬಡಾವಣೆ ನಿರ್ಮಾಣಕ್ಕಾಗಿ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕಡಿದಿರುವುದರಿಂದಲೇ ಭೂಕುಸಿತ ಉಂಟಾಗುತ್ತಿದೆ ಎಂದು ಅವರು ಆರೋಪಿಸಿದರು.

‘ಇನ್ನೂ ಮೂರು ಕುಟುಂಬಗಳಿಗೆ ಮನೆ ತೆರವು ಮಾಡುವಂತೆ ನೋಟಿಸ್ ಜಾರಿ ಮಾಡಿದ್ದೇವೆ’ ಎಂದು ದೇರೇಬೈಲ್ (ಪೂರ್ವ) ವಾರ್ಡ್‌ನ ಇನ್ಸಿಡೆಂಟ್ ಕಮಾಂಡರ್ ಪ್ರಮೀಳಾ ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ 163 ಕುಟುಂಬಗಳಿಗೆ ಮನೆ ತೊರೆಯುವಂತೆ ನೋಟಿಸ್ ಜಾರಿಗೊಳಿಸಲಾಗಿದ್ದು, ಅವುಗಳಲ್ಲಿ ಶೇ 90ಕ್ಕೂ ಅಧಿಕ ಕುಟುಂಬಗಳು ನೆರೆಕರೆಯವರ ಅಥವಾ ಸಂಬಂಧಿಕರ ಮನೆಗಳಲ್ಲಿ ಉಳಿದುಕೊಳ್ಳಲು ಬಯಸಿವೆ.

ಕಣ್ಣು ಕಾಣಿಸದ ತಾಯಿಯನ್ನು ಹಾಗೂ ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಕಾಳಜಿಕೇಂದ್ರಕ್ಕೆ ಹೋಗಿ ಆಶ್ರಯ ಪಡೆಯುವುದು ಸುರಕ್ಷಿತವೇ ಎಂಬ ಚಿಂತೆ ರಜನಿ ಅವರನ್ನು ಕಾಡುತ್ತಿದೆ. ಹಾಗಾಗಿ ಅವರು ಕಾಳಜಿ ಕೇಂದ್ರದಲ್ಲಿ ಆಶ್ರಯಪಡೆಯಲು ನಿರಾಕರಿಸಿದ್ದಾರೆ.  

ಪಾಲಿಕೆಯು ಪುರಭವನದಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರಕ್ಕೆ ತೆರಳಲು ಸಾಯಿರಾ ಅವರೂ ಒಪ್ಪುತ್ತಿಲ್ಲ. ಕಾಲೇಜಿಗೆ ಹೋಗುತ್ತಿರುವ ಮಗಳ ಜೊತೆ ಕಾಳಜಿ ಕೇಂದ್ರದಲ್ಲಿ ಉಳಿದುಕೊಳ್ಳುವುದು ಹೇಗೆ ಎಂಬುದು ಅವರ ಆತಂಕ. 

‘ಮನೆ ಜಲಾವೃತಗೊಂಡಿದ್ದ ಒಂಬತ್ತು ಕುಟುಂಬಗಳು ಕಾಳಜಿ ಕೇಂದ್ರಕ್ಕೆ ತೆರಳಲು ನಿರಾಕರಿಸಿವೆ. ಅದರೆ ಪಡಿತರ ಕಿಟ್ ನೀಡುವಂತೆ ಕೋರಿಕೆ ಸಲ್ಲಿಸಿವೆ’ ಎಂದು ಜೆಪ್ಪಿನಮೊಗರುವಿನ ಇನ್ಸಿಡೆಂಟ್ ಕಮಾಂಡರ್ ರೂಪಾ ಎಸ್‌. ಮಠ ತಿಳಿಸಿದರು.

‘ಗುಡ್ಡ ಕುಸಿತದ ಆತಂಕ ಎದುರಿಸುತ್ತಿದ್ದ ಬಜಾಲ್‌ನ ಕೆಲ ಬಡ ಕುಟುಂಬಗಳು  ಕಾಳಜಿ ಕೇಂದ್ರಗಳಲ್ಲಿ ಆಶ್ರಯಪಡೆದಿವೆ’ ಎಂದು ಬಜಾಲ್‌ನ ಇನ್ಸಿಡೆಂಡ್ ಕಮಾಂಡರ್ ವಿಜಯ್ ತಿಳಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಂಗಳೂರಿನ ಪಂಪ್‌ವೆಲ್‌ ಜಂಕ್ಷನ್‌ಗೆ ಮಂಗಳವಾರ ಭೇಟಿ ನೀಡಿ ರಸ್ತೆಯಲ್ಲಿ ನೀರು ನಿಲ್ಲುವ ಸಮಸ್ಯೆ ನಿವಾರಿಸುವ ಬಗ್ಗೆ ಪಾಲಿಕೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ರವಿಚಂದ್ರ ನಾಯಕ್ ನರೇಶ್ ಶೆಣೈ ಮತ್ತಿತರರು ಜೊತೆಯಲ್ಲಿದ್ದರು

‘ಜಾಗ ನೀಡಿ– ಪುನರ್ವಸತಿ ಕಲ್ಪಿಸಿ’:

‘ನನಗೆ ಪರ್ಯಾಯ ಜಮೀನು ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಪಾಲಿಕೆ ಕಚೇರಿಯಲ್ಲಿ ದೂಳು ಹಿಡಿಯುತ್ತಿದೆ’ ಎಂದು ಸಾಯಿರಾ ದೂರಿದರು.‌ ‘ಭೂಕುಸಿತದ ಅಪಾಯವನ್ನು ಎದುರಿಸುತ್ತಿರುವ ಮನೆಗಳನ್ನು ಗುರುತಿಸಿ ಅದನ್ನು ತೊರೆಯುವಂತೆ ಪ್ರತಿ ಮಳೆಗಾಲದಲ್ಲಿ ನೋಟಿಸ್ ನೀಡುತ್ತಿರುವುದಕ್ಕೆ ಪಾಲಿಕೆಯ ಕೆಲಸ ಸೀಮಿತವಾಗಿದೆ.  ನಮಗೆ ಕನಿಷ್ಠ ಒಂದು ಸೆಂಟ್ಸ್‌ ಜಾಗವನ್ನಾದರೂ ನೀಡಿ ಪುನರ್ವಸತಿ ಕಲ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು. ‘ಹಂಚಿಕೆ ಮಾಡುವುದಕ್ಕೆ ಪಾಲಿಕೆ ಬಳಿ ಖಾಲಿ ಜಾಗವೇ ಇಲ್ಲ’ ಎನ್ನುತ್ತಾರೆ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌.

ಪಂಪ್‌ವೆಲ್ ಕೆತ್ತಿಕಲ್ಗೆ ಜಿಲ್ಲಾಧಿಕಾರಿ ಭೇಟಿ:

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ನಗರದ ಪಂಪ್‌ವೆಲ್ ಹಾಗೂ ಕೆತ್ತಿಕಲ್ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ತೀವ್ರ ಮಳೆಯಾದಾಗ ಪಂಪ್‌ವೆಲ್‌ ಜಂಕ್ಷನ್‌ನಲ್ಲಿ  ನೀರು ನಿಲ್ಲುವ ಸಮಸ್ಯೆ ನಿವಾರಿಸಲು ಚರಂಡಿಯಲ್ಲಿ ಮಳೆ ನೀರು ಸರಾಗ ಹರಿವಿ ಕ್ರಮ ವಹಿಸಬೇಕು. ಈ ಕುರಿತ ತಾಂತ್ರಿಕವಾಗಿ‌ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಕೆತ್ತಿಕಲ್‌ನಲ್ಲಿ ಭೂಕುಸಿತ ತಡೆಯಲು ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ತಾಂತ್ರಿಕ ಪರಿಹಾರ ಕಮಡುಕೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್ಎಐ ) ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು. ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಕಾರ್ಯಪಾಲಕ ಎಂಜಿನಿಯರ್ ನರೇಶ್ ಶೆಣೈ ಎನ್‌ಎಚ್ಎಐ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್  ಜೊತೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.