ADVERTISEMENT

ಮಂಗಳೂರು: ಪಾಲಿಕೆಯ ಶುಲ್ಕ, ಬಾಡಿಗೆ ಪಾವತಿ ವೆಬ್‌ಸೈಟ್ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 16:18 IST
Last Updated 13 ಫೆಬ್ರುವರಿ 2025, 16:18 IST
ಪಾಲಿಕೆಯ ಸಭಾಂಗಣಗಳ ಶುಲ್ಕ ಹಾಗೂ ಮಳಿಗೆಗಳ ಬಾಡಿಗೆಯ ಆನ್ಲೈನ್ ಪಾವತಿಗೆ ಅವಕಾಶ ಕಲ್ಪಿಸುವ ವೆಬ್‌ಸೈಟ್ ಅನ್ನು ಮೇಯರ್‌ ಮನೋಜ್ ಕುಮಾರ್ ಗುರುವಾರ ಲೋಕಾರ್ಪಣೆಗೊಳಿಸಿದರು. ಅಕ್ಷತಾ ಕೆ., ಪ್ರೇಮಾನಂದ ಶೆಟ್ಟಿ, ಮನೋಹರ್ ಶೆಟ್ಟಿ ಕದ್ರಿ, ಸುಮಿತ್ರಾ ಕರಿಯ ಭಾಗವಹಿಸಿದ್ದರು
ಪಾಲಿಕೆಯ ಸಭಾಂಗಣಗಳ ಶುಲ್ಕ ಹಾಗೂ ಮಳಿಗೆಗಳ ಬಾಡಿಗೆಯ ಆನ್ಲೈನ್ ಪಾವತಿಗೆ ಅವಕಾಶ ಕಲ್ಪಿಸುವ ವೆಬ್‌ಸೈಟ್ ಅನ್ನು ಮೇಯರ್‌ ಮನೋಜ್ ಕುಮಾರ್ ಗುರುವಾರ ಲೋಕಾರ್ಪಣೆಗೊಳಿಸಿದರು. ಅಕ್ಷತಾ ಕೆ., ಪ್ರೇಮಾನಂದ ಶೆಟ್ಟಿ, ಮನೋಹರ್ ಶೆಟ್ಟಿ ಕದ್ರಿ, ಸುಮಿತ್ರಾ ಕರಿಯ ಭಾಗವಹಿಸಿದ್ದರು   

ಮಂಗಳೂರು: ಪಾಲಿಕೆಯ ಕುದ್ಮುಲ್ ರಂಗರಾವ್‌ ಪುರಭವನ, ಅಂಬೇಡ್ಕ‌ರ್ ಭವನ ಹಾಗೂ ಎಲ್ಲಾ ಮೈದಾನಗಳನ್ನು ಕಾರ್ಯಕ್ರಮಗಳಿಗಾಗಿ ಕಾಯ್ದಿರಿಸುವ ಶುಲ್ಕ ಹಾಗೂ ವಾಣಿಜ್ಯ ಮಳಿಗೆಗಳ ಬಾಡಿಗೆಯ ಆನ್‌ಲೈನ್‌ ಪಾವತಿಗೆ ನೆರವಾಗುವ ವೆಬ್‌ಸೈಟ್‌ (www.mccportal.in) ಅನ್ನು ಮೇಯರ್ ಮನೋಜ್ ಕುಮಾರ್‌ ಗುರುವಾರ ಲೋಕಾರ್ಪಣೆಗೊಳಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪುರಭವನ, ಅಂಬೇಡ್ಕರ್ ಭವನ ಹಾಗೂ ಮೈದಾನಗಳನ್ನು ಆನ್‌ಲೈನ್‌ನಲ್ಲೇ ಕಾಯ್ದಿರಿಸುವ ವ್ಯವಸ್ಥೆಯನ್ನೂ ಶೀಘ್ರವೇ ಜಾರಿಗೊಳಿಸಲಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಾರ್ಯಕ್ರಮಗಳಿಗೆ ಇವುಗಳನ್ನು ರಿಯಾಯಿತಿ ದರದಲ್ಲಿ ಬಾಡಿಗೆಗೆ ಒದಗಿಸಲಾಗುತ್ತಿದೆ. ಇದರ ದುರುಪಯೋಗ ತಡೆಯಲು ವ್ಯವಸ್ಥೆ ರೂಪಿಸಲಾಗುತ್ತಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ಇವುಗಳ ಕಾಯ್ದಿರಿಸುವಿಕೆಯನ್ನೂ ಆನ್‌ಲೈನ್‌ನಲ್ಲೇ ನಿರ್ವಹಿಸಬಹುದು’ ಎಂದರು.

‘ಹೊಸ ಪೋರ್ಟಲ್‌ನಲ್ಲಿ ಸಾರ್ವಜನಿಕರು ತಾವಿರುವ ಜಾಗದಿಂದಲೇ ಶುಲ್ಕ ಅಥವಾ ಬಾಡಿಗೆಯನ್ನು ಆನ್‌ಲೈನ್, ಯುಪಿಐ ಮೂಲಕ ಪಾವತಿಸಲು ಸರಳ ವಿಧಾನಗಳನ್ನು ಅಳವಡಿಸಲಾಗಿದೆ. ಮಳಿಗೆಗಳ ತೆರಿಗೆ ಮೊತ್ತವನ್ನು ಪಾವತಿಸಲು ಅವಕಾಶವಿರುತ್ತದೆ. ಇದರಿಂದ ಸಾರ್ವಜನಿಕರ ಮತ್ತು ಕಚೇರಿ ಸಿಬ್ಬಂದಿಯ ಸಮಯ ಉಳಿತಾಯವಾಗುತ್ತದೆ. ಪಾವತಿಸಿದ ಶುಲ್ಕಗಳ ವಿವರ, ಮಳಿಗೆಗಳ ಬಾಡಿಗೆ ವಿವರ, ಸಭಾಂಗಣಗಳು ಕಾಯ್ದಿರಿಸುವಿಕೆಗೆ ಲಭ್ಯ ಇವೆಯೇ ಎಂಬ ಮಾಹಿತಿಗಳೂ ಸಾರ್ವಜನಿಕವಾಗಿ ಲಭ್ಯ ಇರಲಿವೆ. ಬಾಡಿಗೆ ಪಾವತಿಸಿದ ರಸೀದಿಯನ್ನೂ ವೆಬ್‌ಸೈಟ್‌ ಮೂಲಕವೇ ಪಡೆದುಕೊಳ್ಳಬಹುದು. ಬಾಡಿಗೆ ಮತ್ತು ಶುಲ್ಕವನ್ನು ಆಫ್‌ಲೈನ್‌ನಲ್ಲಿ (ಚಲನ್) ಪಾವತಿಸಲೂ ಅವಕಾಶವಿರಲಿದೆ’ ಎಂದರು.

ADVERTISEMENT

‘ಸಭಾಂಗಣಗಳ ಮುಂಗಡ ಕಾಯ್ದಿರಿಸುವಿಕೆಯನ್ನು ಶರ್ತಬದ್ಧವಾಗಿ ವಿಷಯ ನಿರ್ವಾಹಕರ ಮೂಲಕ ರದ್ದುಪಡಿಸುವುದಕ್ಕೂ ಅವಕಾಶವಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಜಾಹಿರಾತು ಫಲಕ ಅಳವಡಿಕೆಗೆ ಅನುಮತಿ ಪಡೆಯಲು ಹಾಗೂ ಶುಲ್ಕ ಪಾವತಿಸಲು ಇದೇ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ’ ಎಂದರು.

ಉಪಮೇಯರ್‌ ಭಾನುಮತಿ ಪಿ.ಎಸ್‌., ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮನೋಹರ ಶೆಟ್ಟಿ ಕದ್ರಿ, ಸುಮಿತ್ರಾ ಕರಿಯ, ಪಾಲಿಕೆಯ ಕಂದಾಯ ಉಪಾಯುಕ್ತರಾದ ಅಕ್ಷತಾ ಕೆ. ಮತ್ತಿತರರು ಭಾಗವಹಿಸಿದ್ದರು.

‘ಹೊಸ ಹೋರ್ಡಿಂಗ್‌ಗೆ ಅವಕಾಶ ಇಲ್ಲ’

‘ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಅನುಮತಿ ಪಡೆಯದೇ ಜಾಹೀರಾತು ಫ್ಲೆಕ್ಸ್ ಬ್ಯಾನರ್‌ ಅಥವಾ ಹೋರ್ಡಿಂಗ್‌ ಅಳವಡಿಕೆಗೆ ಅವಕಾಶವಿಲ್ಲ. ನಗರದಲ್ಲಿ1085  ಹೋರ್ಡಿಂಗ್‌ಗಳಿಗಷ್ಟೇ ಪರವಾನಗಿ ನೀಡಲಾಗಿದೆ. 2006ರ ಬಳಿಕ ಯಾವುದೇ ಹೊಸ ಹೋರ್ಡಿಂಗ್‌ಗಳಿಗೆ  ಪರವಾನಗಿ ನೀಡಿಲ್ಲ. ಅನುಮತಿ ಪಡೆಯದೆ ಅಳವಡಿಸಿರುವ ಹೋರ್ಡಿಂಗ್‌ಗಳನ್ನು ಆಗಾಗ ಪತ್ತೆಹಚ್ಚಿ ಕ್ರಮವಹಿಸಲಾಗುತ್ತಿದೆ’ ಎಂದು ಪಾಲಿಕೆಯ ಕಂದಾಯ ಉಪಾಯುಕ್ತರಾದ ಅಕ್ಷತಾ ಕೆ. ತಿಳಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ನಾಯಕರು ಹಾಗೂ ಇತರರು ರಾಜಾರೋಷವಾಗಿ ಫ್ಲೆಕ್ಸ್‌ ಅಳವಡಿಸಿದರೂ ತೆರವುಗೊಳಿಸುತ್ತಿಲ್ಲ  ಏಕೆ ಎಂಬ ಪ್ರಶ್ನೆಗೆ ‘ಪಾಲಿಕೆ ಇತ್ತೀಚೆಗಷ್ಟೇ ಇವುಗಳ ತೆರವಿಗೆ ಕಾರ್ಯಾಚರಣೆ ಹಮ್ಮಿಕೊಂಡಿತ್ತು. ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.