ಮಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾದ ಕಟ್ಟಡ ಉಪವಿಧಿಯ (ಬೈಲಾ) ಕರಡು ರಚನೆಗೊಂಡ ಏಳು ವರ್ಷ ಪೂರ್ಣಗೊಂಡಿದ್ದರೂ, ಅದರ ಜಾರಿಗೆ ಕಾಲ ಕೂಡಿ ಬಂದಿಲ್ಲ. ಸರ್ಕಾರದಿಂದ ಪರಿಷ್ಕರಣೆಗೊಂಡ ಬಂದ ಕರಡನ್ನು ಮತ್ತೆ ಪಟ್ಟಣ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿಯಿಂದ ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಲು ಪಾಲಿಕೆ ಸಭೆಯಲ್ಲಿ ಗುರುವಾರ ನಿರ್ಣಯಕೈಗೊಳ್ಳಲಾಗಿದೆ.
ನಗರಾಭಿವೃದ್ಧಿ ಇಲಾಖೆಯು 2017ರ ಜುಲೈ 11ರಂದು ಕಟ್ಟಡ ಉಪವಿಧಿಯ ಮಾದರಿ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. 2018ರ ಜ.31ರ ಪಾಲಿಕೆಯಲ್ಲಿ ಮಂಡನೆಯಾದ ಈ ಕರಡನ್ನು ಪಟ್ಟಣ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಪರಿಶೀಲಿಸಿತ್ತು. ಕೆಲವೊಂದು ಅಂಶಗಳನ್ನು ಸೇರ್ಪಡೆಗೊಳಿಸಿತ್ತು. ಪಾಲಿಕೆಯು 2020ರ ಆ.13ರಂದು ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿಯ ನಿರ್ಣಯಕ್ಕೆ ಅನುಮೋದನೆ ನೀಡಿತ್ತು. 2023ರ ಸೆಪ್ಟೆಂಬರ್‌ನಲ್ಲಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿದ್ದ ಈ ಕರಡನ್ನು ‘ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತ’ರ ನೇತೃತ್ವದ ಸಮಿತಿ ಪರಿಶೀಲಿಸಿದೆ. ಕೆಲವೊಂದು ಮಾರ್ಪಾಡುಗಳೊಂದಿಗೆ ಈ ಬಗ್ಗೆ ಇಲಾಖೆಗೆ ವರದಿ ಸಲ್ಲಿಸಿದೆ. ಸಮಿತಿಯಿಂದ ಪರಿಷ್ಕೃತಗೊಂಡ ಕರಡನ್ನು ಮತ್ತೊಮ್ಮೆ ಪಾಲಿಕೆಯಲ್ಲಿ ಮಂಡಿಸಿ ಸ್ಪಷ್ಟ ಅಭಿಪ್ರಾಯವನ್ನು ಒಳಗೊಂಡ ಪ್ರಸ್ತಾವನೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯು 2024ರ ಜೂನ್ 27ರಂದು ಪಾಲಿಕೆಗೆ ಪತ್ರ ಬರೆದಿದೆ. ಈ ಕರಡನ್ನು ಸಭೆಯಲ್ಲಿ ಮಂಡಿಸಲಾಯಿತಾದರೂ, ಸ್ಥಾಯಿ ಸಮಿತಿ ಪರಿಶೀಲನೆ ಒಳಪಡಿಸಲು ನಿರ್ಣಯ ಕೈಗೊಳ್ಳಲಾಯಿತು.
ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕೃತ ಹಾಗೂ ಅನಧಿಕೃತ ಹೊರಾಂಗಣ ಜಾಹೀರಾತುಗಳನ್ನು ಸ್ಥಳಗಳ ಮಾಹಿತಿಯ ಜೊತೆ (ಜಿಯೋಟ್ಯಾಗ್) ಗುರುತಿಸಲು ಹಾಗೂ ಇವುಗಳ ಕುರಿತ ನಿಖರ ಮಾಹಿತಿ ಕ್ರೋಢೀಕರಿಸಲು ಹಾಗೂ ಈ ಕುರಿತ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಲು ಅವಕಾಶ ಕಲ್ಪಿಸುವ ತಂತ್ರಾಂಶ ರೂಪಿಸಲು ಇ ಟೆಂಡರ್ ಕರೆಯುವ ಪ್ರಸ್ತಾವಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸಾಕುಪ್ರಾಣಿಗಳ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನ ನಿರ್ಮಿಸಲು ನಂದಿಗುಡ್ಡೆ ಸ್ಮಶಾನದ ಒಂದು ಪಾರ್ಶ್ವದಲ್ಲಿ 20 ಸೆಂಟ್ಸ್ ಜಾಗ ಕಾಯ್ದಿರಿಸುವ ಪ್ರಸ್ತಾವವನ್ನೂ ಸ್ಥಾಯಿಸಮಿತಿಗೆ ಕಳುಹಿಸಲು ನಿರ್ಧರಿಸಲಾಯಿತು.
ಆಡಳಿತ ವೈಫಲ್ಯ– ಆರೋಪ: ಪಾಲಿಕೆ ಕೈಗೊಳ್ಳುವ ನಿರ್ಣಯಗಳು ಅನುಷ್ಠಾನಗೊಳ್ಳುತ್ತಿಲ್ಲ. ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಪ್ರವೀಣಚಂದ್ರ ಆಳ್ವ ಮೇಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.
‘ರಿವರ್ ಫ್ರಂಟ್ ಯೋಜನೆ ನನೆಗುದಿಗೆ ಬಿದ್ದಿದೆ. ಜಲಸಿರಿ ಕಾಮಗಾರಿ ಕುಂಟುತ್ತಾ ಸಾಗಿದೆ. ಡೆಂಗಿ ನಿಯಂತ್ರಣಕ್ಕೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ವಾರ್ಡ್‌ಗೆ ಒಬ್ಬರ್ ಸ್ಪ್ರೇಯರ್ ನೇಮಿಸುವ ಭರವಸೆಯೂ ಈಡೇರಿಲ್ಲ’ ಎಂದು ಟೀಕಿಸಿದರು.
‘ಸಂಚಾರ ದಟ್ಟಣೆ ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ. ಪಂಪ್‌ವೆಲ್‌ನಿಂದ ಸ್ಟೇಟ್‌ಬ್ಯಾಂಕ್ ತಲುಪಲು ಅರ್ಧ ದಿನ ಬೇಕಾಗುತ್ತಿದೆ. ಕಚೇರಿ ಕೆಲಸಕ್ಕೆ ಹೋಗುವವರ ಬವಣೆ ಕೇಳುವವರಿಲ್ಲ’ ಎಂದರು.
ಡೆಂಗಿ ಹರಡುವ ಸೊಳ್ಳೆಗಳ ಲಾರ್ವ ಪತ್ತೆಗೆ ಹಾಗೂ ಡಿಂಗಿ ನಿಯಂತ್ರಣ ಕುರಿತ ಜನಜಾಗೃತಿಗೆ ವಿವಿಧ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ಕೈಗೊಂಡ ಕ್ರಮಗಳ ಬಗ್ಗೆ ಮೇಯರ್ ವಿವರಿಸಿದರು. ವಾರ್ಡ್‌ಗೆ ಒಬ್ಬರು ಸ್ಪ್ರೇಯರ್ ಒದಗಿಸಲು ಕ್ರಮವಹಿಸಲಾಗಿದೆ ಎಂದರು.
ಆಸ್ತಿ ತೆರಿಗೆ ದರ ಶ್ರೇಣಿ– ಮೇಯರ್ ನಿರ್ಧಾರಕ್ಕೆ ಜಾಗದ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಪಾಲಿಕೆ ಪರಿಷ್ಕರಿಸಿದ್ದು ಈ ಕುರಿತ ಪ್ರಸ್ತಾವ ಸಭೆಯಲ್ಲಿ ಮಂಡನೆಯಾಯಿತು. ಈ ಪ್ರಸ್ತಾವವನ್ನು ತೆರಿಗೆ ಮತ್ತು ಅಪೀಲು ಸ್ಥಾಯಿ ಸಮಿತಿಗೆ ಕಳುಹಿಸಲು ಹಾಗೂ ಮೇಯರ್ ನೇತೃತ್ವದಲ್ಲಿ ಇನ್ನೊಮ್ಮೆ ಸಭೆ ನಡೆಸಿ ತೆರಿಗೆ ದರಗಳ ಶ್ರೇಣಿಯನ್ನು ಅಂತಿಮಗೊಳಿಸುವ ಬಗ್ಗೆ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತು.
ಆಡಳಿತ ಪಕ್ಷದಿಂದಲೇ ವಿರೋಧ: ಸುರತ್ಕಲ್‌ನ ಹಿಂದೂ ಸ್ಮಶಾನದ ಬಳಿ ಕಸ ಸಾಗಣೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವುದಕ್ಕೆ ಆಡಳಿತ ಪಕ್ಷದ ಸದಸ್ಯರೇ ವಿರೋಧ ವ್ಯಕ್ತಪಡಿಸಿದರು. ಹಿಂದೂ ಸ್ಮಶಾನದ ಭೂಮಿಯನ್ನು ವಾಹನ ನಿಲುಗಡೆಗೆ ಬಳಸಿದರೆ ಆಯುಕ್ತರ ಕಚೇರಿ ಎದುರು ಧರಣಿ ಕೂರುತ್ತೇನೆ ಎಂದು ಶ್ವೇತಾ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಕಸ ವಿಲೇವಾರಿಗೆ ಬಳಸುವ ವಾಹನಗಳ ಸುರಕ್ಷಿತ ನಿಲುಗಡೆಗೆ ಸುರತ್ಕಲ್ ಪರಿಸರದಲ್ಲಿ ಬೇರೆ ಕಡೆ ಸ್ಥಳಾವಕಾಶ ಸಿಗದ ಕಾರಣಕ್ಕೆ ಸ್ಮಶಾನದಲ್ಲಿ ನಿಲ್ಲಿಸಲು ಕ್ರಮ ವಹಿಸಲಾಗಿದೆ ಎಂದು ಆಯುಕ್ತರು ಸ್ಪಷ್ಟನೆ ನೀಡಿದರು. ಪರ್ಯಾಯ ಜಾಗ ಹುಡುಕಿಕೊಟ್ಟರೆ ಸ್ಮಶಾನದಲ್ಲಿ ವಾಹನ ನಿಲ್ಲಿಸುವುದಿಲ್ಲ ಎಂದು ಮೇಯರ್ ಭರವಸೆ ನೀಡಿದರು.
ವಸತಿ ಯೋಜನೆ: ಭೂಸ್ವಾಧೀನಕ್ಕೆ ಟಿಡಿಆರ್ ಬಡವರಿಗೆ ವಸತಿ ಕಲ್ಪಿಸಲು ಕಾವೂರು ಸಮೀಪ ಮರಕಡದಲ್ಲಿ 9 ಎಕರೆ 19 ಸೆಂಟ್ಸ್ ಜಾಗವನ್ನು ಟಿಡಿಆರ್ ನೀಡುವ ಮೂಲಕ ಸ್ವಾಧೀನ ಪಡಿಸಿಕೊಳ್ಳುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಯಿತು. ಕಾಂಗ್ರೆಸ್ ಸದಸ್ಯರಾದ ಅಬ್ದುಲ್ ರವೂಫ್ ಹಾಗೂ ಎ.ಸಿ.ವಿನಯರಾಜ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸುಮಾರು ₹ 50 ಕೋಟಿ ಬೆಲೆ ಬಾಳುವ ಈ ಜಮೀನಿನಲ್ಲಿ ಒಂದೋ ನಿವೇಶನ ಹಂಚಿಕೆ ಮಾಡುವ ಅಥವಾ ನಾಲ್ಕು ಅಂತಸ್ತುಗಳ ವಸತಿ ಸಂಕೀರ್ಣ ನಿರ್ಮಿಸಿ ಮನೆಗಳನ್ನು ಹಂಚುವ ಪ್ರಸ್ತಾವ ಪಾಲಿಕೆ ಮುಂದಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು. ತನಿಖೆಗೆ ಆಗ್ರಹ: ನಾಲ್ಕು ಭಾಗಗಳಲ್ಲಿಯೂ ಇಳಿಜಾರಿನಿಂದ ಕೂಡಿದ ಮರಕಡ ಜಾಗವನ್ನು ಟಿಡಿಆರ್ ನೀಡಿ ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ತನಿಖೆಗೆ ಒಳಪಡಿಸಬೇಕು ಎಂದು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ‘ಈ ಜಾಗವು ರಿಯಲ್ ಎಸ್ಟೇಟ್ ಲಾಬಿಯ ಪಾಲಿಗೆ ನಿರುಪಯುಕ್ತವಾಗಿದೆ. ಈ ಜಮೀನನ್ನು ವರ್ಷಗಳ ಹಿಂದೆ ಐ.ಟಿ ಪಾರ್ಕ್ ನೆಪದಲ್ಲಿ ಟಿಡಿಆರ್ ನೀಡಿ ಖರೀದಿಸಲು ಶಾಸಕ ಭರತ್ ಶೆಟ್ಟಿ ಪ್ರಸ್ತಾಪ ಸಲ್ಲಿಸಿದ್ದರು. ಆಗ ವಿರೋಧ ವ್ಯಕ್ತವಾಗಿದ್ದರಿಂದ ರಾಜ್ಯ ಸರ್ಕಾರ ಅದಕ್ಕೆ ಅನುಮೋದನೆ ನೀಡಲಿಲ್ಲ. ಈಗ ಬಡವರಿಗೆ ಮನೆಗಳನ್ನು ಒದಗಿಸುವ ಯೋಜನೆಯ ನೆಪದಲ್ಲಿ ಟಿಡಿಆರ್ ಅಡಿ ಖರೀದಿಸಲು ಪ್ರಬಲ ರಿಯಲ್ ಎಸ್ಟೇಟ್ ಲಾಬಿ ಹಾಗೂ ಬಿಜೆಪಿ ಆಡಳಿತದ ಪಾಲಿಕೆ ಸಂಚು ಹೂಡಿವೆ. ಇದರಿಂದ ಪಾಲಿಕೆಯ ಬೊಕ್ಕಸಕ್ಕೆ ಸುಮಾರು ₹ 80 ಕೋಟಿ ನಷ್ಟ ಉಂಟಾಗಲಿದೆ’ ಎಂದು ಒಕ್ಕೂಟದ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ‘ಪಾಲಿಕೆಯ ಜೂನ್ ತಿಂಗಳ ಸಭೆಯ ಕಾರ್ಯಸೂಚಿಯಲ್ಲೂ ಈ ಪ್ರಸ್ತಾವ ಇತ್ತು. ಅದಕ್ಎಕ ಪ್ರಬಲ ವಿರೋಧ ವ್ಯಕ್ತವಾಗಿದ್ದರಿಂದ ಅದನ್ನು ಮಂಡಿಸಿರಲಿಲ್ಲ. ಈ ಟಿಡಿಆರ್ ಕಡತಕ್ಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತೀರಾ ತುರ್ತಿನ ಕಡತ ಎಂಬಂತೆ ಪೂರ್ವಾನ್ವಯ ಅನುಮತಿ ನೀಡಿರುವುದು ಈ ಪ್ರಕ್ರಿಯೆ ಹಿಂದೆ ಭ್ರಷ್ಟಾಚಾರ ನಡೆದಿರುವ ಅನುಮಾನವನ್ನು ಮೂಡಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.