
ಮಂಗಳೂರು: ಎಂಸಿಎಫ್ ಹೆಸರು ಉಳಿಸಿ ವೇದಿಕೆ ಸದಸ್ಯರು ಗುರುವಾರ ಪಣಂಬೂರಿನ ಪಾರಾದೀಪ್ ಫಾಸ್ಫೇಟ್ಸ್ ಲಿಮಿಟೆಡ್ ಕಚೇರಿಗೆ ಭೇಟಿ ನೀಡಿ, ಸಂಸ್ಥೆಯ ಹೆಸರನ್ನು ಹಿಂದಿನಂದತೆ ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ (ಎಂಸಿಎಫ್) ಎಂದು ಉಳಿಸಬೇಕು ಎಂದು ಮನವಿ ಸಲ್ಲಿಸಿದರು.
ವೇದಿಕೆಯ ಮ್ಯಾಕ್ಸಿಂ ಆಲ್ಫ್ರೆಡ್ ಡಿಸೋಜ ಮಾತನಾಡಿ, 50 ವರ್ಷಗಳಿಂದ ಅಸ್ತಿತ್ವದಲ್ಲಿರುವ, ಸಾವಿರಾರು ಸ್ಥಳೀಯ ಯುವ ಜನರಿಗೆ ಉದ್ಯೋಗ ನೀಡುತ್ತಿದ್ದ, ಸಮುದಾಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಎಂಸಿಎಫ್ ಹೆಸರನ್ನು ತೆಗೆದಿದ್ದು ಸರಿಯಲ್ಲ ಎಂದರು.
ಶಿವರಾಂ ಶೆಟ್ಟಿ ಮಾತನಾಡಿ, ಇಲ್ಲಿಯ ಹೂಡಿಕೆದಾರರಿಂದ ಸ್ಥಾಪಿತವಾದ ಸಂಸ್ಥೆಯ ಆಡಳಿತವು ಹೊರಗಿನ ಇನ್ನೊಂದು ಸಂಸ್ಥೆಯ ನಿಯಂತ್ರಣಕ್ಕೆ ಹೋದರೆ ಸ್ಥಳೀಯ ಯುವ ಜನರು ಉದ್ಯೋಗ ವಂಚಿತರಾಗಲಿದ್ದಾರೆ. ಹೆಸರು ಬದಲಾವಣೆಯು ಸಂಸ್ಥೆಯನ್ನು ಜನರಿಂದ ಇನ್ನಷ್ಟು ದೂರ ಮಾಡಬಹುದು ಎಂದರು.
ಆಡಳಿತ ಮಂಡಳಿ ಪರವಾಗಿ ಎಚ್‌ಆರ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಚೇತನ್ ಮೆಂಡೋನ್ಸಾ ಮನವಿ ಸ್ವೀಕರಿಸಿ, ಮೇಲಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.
ವೇದಿಕೆಯ ವೈ.ಎಂ. ದೇವದಾಸ್, ದಯಾನಂದ ಶೆಟ್ಟಿ, ಮೊಹಮ್ಮದ್ ಅಲಿ, ಸಾಯಿನಾಥ್ ಸಾವಂತ್ ಇದ್ದರು.