ಮಂಗಳೂರು: ಅವೈಜ್ಞಾನಿಕ ಲಾಕ್‌ಡೌನ್‌ನಿಂದ ನಾವು ಬೀದಿಗೆ ಬರುವಂತಾಗಿದೆ. ಜವಳಿ ಹಾಗೂ ಚಪ್ಪಲಿ ಕೂಡಾ ಅಗತ್ಯ ವಸ್ತುಗಳಲ್ಲಿ ಒಂದಾಗಿದ್ದು, ವ್ಯಾಪಾರಕ್ಕೆ ಅನುಮತಿ ನೀಡುವ ಮೂಲಕ ಗ್ರಾಹಕರ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲೆಯ ಚಪ್ಪಲಿ ಹಾಗೂ ಜವಳಿ ವ್ಯಾಪಾರಸ್ಥರು ಒತ್ತಾಯಿಸಿದರು.
ವ್ಯಾಪಾರಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಮೊದಲು ಜಿಲ್ಲಾಧಿಕಾರಿ ಕಚೇರಿ ಎದುರು ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.
ಜವಳಿ ವರ್ತಕ ಸಂತೋಷ್ ಕಾಮತ್ ಮಾತನಾಡಿ, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2ಸಾವಿರಕ್ಕೂ ಅಧಿಕ ಬಟ್ಟೆ ಅಂಗಡಿಗಳಿವೆ. ಸುಮಾರು 15ಸಾವಿರಕ್ಕೂ ಅಧಿಕ ಮಂದಿ ಕೆಲಸಕ್ಕಿದ್ದಾರೆ. ಕನಿಷ್ಠ ಪರ್ಯಾಯ ದಿನದಲ್ಲಾದರೂ ನಮಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ಮುಂದುವರಿಸಲಾಗುವುದು’ ಎಂದು ಎಚ್ಚರಿಸಿದರು.
ಮೂಡುಬಿದಿರೆಯ ಜವಳಿ ವ್ಯಾಪಾರಿ ಸದಾಶಿವ ರಾವ್ ಮಾತನಾಡಿ, ದೇಶಕ್ಕೆ ಜಿಎಸ್‌ಟಿ ನೀಡುವ, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಜವಳಿ ಉದ್ಯಮವನ್ನು ತಿರಸ್ಕರಿಸುವುದು ಸಮಂಜಸವಲ್ಲ ಎಂದರು.
ಜವಳಿ ಹಾಗೂ ಚಪ್ಪಲಿ ಉದ್ಯಮವನ್ನು ನಂಬಿದ 40ಸಾವಿರಕ್ಕೂ ಅಧಿಕ ಕುಟುಂಬಗಳು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿವೆ. ತಕ್ಷಣ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸುಳ್ಯದ ಎಂ.ಬಿ. ಸದಾಶಿವ ಆಗ್ರಹಿಸಿದರು.
ಗೋಪಾಲ್ ಎಂ.ಯು. ಪುತ್ತೂರು, ದಿನೇಶ್ ಮಂಗಳೂರು, ಟೆರೆನ್ಸ್ ಡಿಸೋಜ, ಸಯ್ಯದ್ ಇಸ್ಮಾಯಿಲ್, ರಹ್ಮಾನ್, ಬಿಪಿನ್ ರಾಜ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.