ADVERTISEMENT

ಮೆಸ್ಕಾಂ: ಗ್ರಾಮಗಳಿಗೂ ಆನ್‌ಲೈನ್‌ ಬಿಲ್‌ ಪಾವತಿ ಸೌಲಭ್ಯ

ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಯ 16 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಅನುಕೂಲ

ಮಹೇಶ ಕನ್ನೇಶ್ವರ
Published 19 ಮೇ 2019, 19:34 IST
Last Updated 19 ಮೇ 2019, 19:34 IST
ಸ್ನೇಹಲ್‌ ಆರ್‌, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ
ಸ್ನೇಹಲ್‌ ಆರ್‌, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ   

ಮಂಗಳೂರು: ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು (ಮೆಸ್ಕಾಂ) ಗ್ರಾಮೀಣ ಭಾಗದ ವಿದ್ಯುತ್‌ ಗ್ರಾಹಕರಿಗೆ ಆನ್‌ಲೈನ್‌ ಹಾಗೂ ಪೇಟಿಯಂ ಮೂಲಕ ವಿದ್ಯುತ್‌ ಬಿಲ್‌ ಪಾವತಿ ಮಾಡುವ ಸೇವೆಯನ್ನು ಆರಂಭಿಸಿದೆ.

ನಗರದ ಪ್ರದೇಶದ ವಿದ್ಯುತ್‌ ಗ್ರಾಹಕರು ಮಾತ್ರ ಇದುವರೆಗೆ ಆನ್‌ಲೈನ್‌ ಹಾಗೂ ಪೇಟಿಯಂ ಮೂಲಕ ವಿದ್ಯುತ್‌ ಬಿಲ್‌ ಪಾವತಿ ಮಾಡುವ ಸೌಲಭ್ಯ ಹೊಂದಿದ್ದರು. ಈಗ ಮೆಸ್ಕಾಂ ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗದ ಗ್ರಾಹಕರಿಗೂ ಈ ಸೌಲಭ್ಯವನ್ನು ವಿಸ್ತರಣೆ ಮಾಡಿದೆ. ಮೆಸ್ಕಾಂ ವ್ಯಾಪ್ತಿಯ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ 16 ಲಕ್ಷಕ್ಕೂ ಹೆಚ್ಚು ಗ್ರಾಹಕರು ಈ ಸೌಲಭ್ಯದ ಉಪಯೋಗವನ್ನು ಪಡೆಯಲಿದ್ದಾರೆ.

ಗ್ರಾಮೀಣ ಭಾಗದ ವಿದ್ಯುತ್‌ ಬಳಕೆದಾರ ಗ್ರಾಹಕರು ಪಟ್ಟಣ ಪ್ರದೇಶಕ್ಕೆ ಬಂದು ಗಂಟಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಬಿಲ್‌ ಪಾವತಿ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮೆಸ್ಕಾಂ ಆನ್‌ಲೈನ್‌ ಪಾವತಿ ಸೇವೆಯನ್ನು ಆರಂಭಿಸಿದೆ. ಗ್ರಾಹಕರು ಮನೆಯಲ್ಲಿಯೇ ಆ್ಯಂಡ್ರಾಯ್ಡ್‌ ಪೋನ್‌ ಮೂಲಕ ಬಿಲ್‌ ಪಾವತಿ ಮಾಡುವ ಸರಳ ವಿಧಾನ ಪರಿಚಯಿಸಿದೆ.

ADVERTISEMENT

www.mesco.in ವೆಬ್‌ಸೈಟ್‌ಗೆ ಹೋದರೆ ಆಯ್ಕೆ ಪರದೆಯ ಮೇಲೆ ತೆರೆದುಕೊಳ್ಳುತ್ತವೆ. ಆನ್‌ಲೈನ್‌ ಪೇಮೆಂಟ್‌ ಸಿಸ್ಟಮ್‌ ಐಕಾನ್‌ ಕಾಣುತ್ತದೆ. ಅದನ್ನು ಕ್ಲಿಕ್‌ ಮಾಡಿದರೆ ಆರ್‌ಎಪಿಡಿಆರ್‌ ಪಟ್ಟಣ ಹಾಗೂ ಗ್ರಾಮಾಂತರ ಎಂಬ ಆಯ್ಕೆ ತೆರೆದುಕೊಳ್ಳುತ್ತದೆ. ಗ್ರಾಮೀಣ ಭಾಗದ ಗ್ರಾಹಕರು ‘ಗ್ರಾಮಾಂತರ’ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿದ್ಯುತ್‌ ಗ್ರಾಹಕರ ಆರ್‌ಆರ್‌ ಸಂಖ್ಯೆ ನಮೂದಿಸಿ ತ್ವರಿತ ಗತಿಯಲ್ಲಿ ಬಿಲ್‌ ಪಾವತಿ ಮಾಡಬಹುದು. ಪೇಟಿಯಂ ಮೂಲಕವೂ ಬಿಲ್‌ ಪಾವತಿ ಮಾಡುವ ಅವಕಾಶ ಇದೆ. ಗ್ರಾಹಕರು ಮೊಬೈಲ್‌ ಸಂಖ್ಯೆ ದಾಖಲು ಮಾಡಿದ್ದರೆ, ಪಾವತಿಸಿದ ಕೂಡಲೇ ಎಸ್‌ಎಂಸ್‌ ಸಂದೇಶ ಕಳುಹಿಸಿಕೊಡುವ ವ್ಯವಸ್ಥೆ ಇದೆ. ನಗರ ಪ್ರದೇಶದವರು ಭಾರತ್‌ ಬಿಲ್‌ ಪೇ ಸರ್ವಿಸ್‌ (ಬಿಬಿಪಿಎಸ್‌) ಮೂಲಕವೂ ಬಿಲ್‌ ಪಾವತಿಸಬಹುದಾಗಿದೆ. ಈ ಸೌಲಭ್ಯವು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಸದ್ಯಕ್ಕೆ ಸಿಗುತ್ತಿಲ್ಲ.

‘ಗ್ರಾಮೀಣ ಭಾಗದ ಗ್ರಾಹಕರು ಆನ್‌ಲೈನ್‌ ಮೂಲಕ ವಿದ್ಯುತ್‌ ಬಿಲ್‌ ಪಾವತಿಗೆ ಅವಕಾಶ ನೀಡುವಂತೆ ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದರು. ವೆಬ್‌ಡೈಸರ್‌ ಇರಲಿಲ್ಲ. ಈಗ ವೆಬ್‌ಡೈಸರ್‌ ಆಗಿರುವುದರಿಂದ ಗ್ರಾಮೀಣ ಭಾಗಕ್ಕೂ ಆನ್‌ಲೈನ್‌ ಬಿಲ್‌ ಪಾವತಿ ವ್ಯವಸ್ಥೆ ಆರಂಭಿಸಲಾಗಿದೆ. ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಮೇ 16 ರಿಂದ ಆನ್‌ಲೈನ್‌ ಪಾವತಿ ವ್ಯವಸ್ಥೆಯನ್ನು ಅಧಿಕೃತವಾಗಿ ಆರಂಭ ಮಾಡಲಾಗಿದೆ. ಒಟ್ಟು 24 ಲಕ್ಷ ಗ್ರಾಹಕರು ಇದ್ದು, 16 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಭಾಗದ ಗ್ರಾಹಕರು ಈ ಸೌಲಭ್ಯ ಪಡೆಯಲಿದ್ದಾರೆ. ಅನಾವಶ್ಯಕ ಓಡಾಟ, ವೆಚ್ಚ, ಸಮಯದ ಉಳಿತಾಯ ಈ ವ್ಯವಸ್ಥೆಯಿಂದ ತಪ್ಪಲಿದೆ. ಮೊಬೈಲ್‌ ಬಳಕೆ ಮಾಡಿಕೊಂಡು ಬಿಲ್‌ ಪಾವತಿ ಮಾಡಬಹುದು’ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್‌. ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮೀಣ ಭಾಗದ ಗ್ರಾಹಕರಿಗೆ ಈ ಸೌಲಭ್ಯ ಅನುಕೂಲವಾಗಲಿದೆ. ಮೆಸ್ಕಾಂ ವೆಬ್‌ಸೈಟ್‌ ಬಳಕೆ ಮಾಡಿಕೊಂಡು ಹಾಗೂ ಪೇಟಿಯಂ ಮೂಲಕವು ಬಿಲ್‌ ಪಾವತಿ ಮಾಡಬಹುದಾಗಿದೆ. ಗ್ರಾಮೀಣ ಭಾಗಕ್ಕೆ ಆರಂಭಿಸುವ ಚಿಂತನೆ ಈ ಹಿಂದೆಯೇ ಇತ್ತು. ಗ್ರಾಹಕರ ಡಾಟಾ ಬೇರೆ ಬೇರೆ ಉಪಕೇಂದ್ರಗಳಲ್ಲಿ ಇದ್ದವು. ಹೀಗಾಗಿ ಆನ್‌ಲೈನ್‌ ವ್ಯವಸ್ಥೆ ಸಾಧ್ಯ ಆಗಿರಲಿಲ್ಲ. ಡಾಟಾ ಕೇಂದ್ರವನ್ನು ಕಾರ್ಪೊರೇಟ್ ಕಚೇರಿಯಲ್ಲಿ ಆರಂಭಿಸಿದ್ದರಿಂದ ಆನ್‌ಲೈನ್‌ ವ್ಯವಸ್ಥೆಯಡಿ ಬಿಲ್‌ ಪಾವತಿಗೆ ಅವಕಾಶ ನೀಡುವುದು ಸಾಧ್ಯವಾಗಿದೆ ಎಂದು ಮೆಸ್ಕಾಂ ಐಟಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಲೋಹಿತ್‌ ಬಿ.ಎಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.