ADVERTISEMENT

ಬ್ರಿಟಿಷರಿಗೆ ಸಮವಸ್ತ್ರ ಒಪ್ಪಿಸಿದ್ದ RSS: ಕೆಪಿಸಿಸಿ ವಕ್ತಾರ ಎಂ.ಜಿ.ಹೆಗಡೆ

ಈಗ ಕಾನೂನು ಪಾಲಿಸಲು ಅಡ್ಡಿಯೇನು– ಕೆಪಿಸಿಸಿ ವಕ್ತಾರ ಎಂ.ಜಿ.ಹೆಗಡೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 6:17 IST
Last Updated 30 ಅಕ್ಟೋಬರ್ 2025, 6:17 IST
ಸುದ್ದಿಗೋಷ್ಠಿಯಲ್ಲಿ ಎಂ.ಜಿ.ಹೆಗಡೆ ಮಾತನಾಡಿದರು. ಪ್ರಕಾಶ್‌ ಸಾಲ್ಯಾನ್‌, ಮಂಜುಳಾ ನಾಯಕ್ ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಎಂ.ಜಿ.ಹೆಗಡೆ ಮಾತನಾಡಿದರು. ಪ್ರಕಾಶ್‌ ಸಾಲ್ಯಾನ್‌, ಮಂಜುಳಾ ನಾಯಕ್ ಭಾಗವಹಿಸಿದ್ದರು   

ಮಂಗಳೂರು: ‘ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು (ಆರ್‌ಎಸ್‌ಎಸ್‌) ಬ್ರಿಟಿಷರಿಗೆ ಶರಣಾಗತರಾಗಿ ತಮ್ಮ ಸೇನಾ ಸಮವಸ್ತ್ರವನ್ನು ಕಳಚಿ ಅವರ ಪದತಲದಲ್ಲಿಟ್ಟಿದ್ದರು. ಬ್ರಿಟಿಷರ ಕಾಲದಲ್ಲಿ ಕಾನೂನು  ಪಾಲನೆ ಮಾಡಿದವರಿಗೆ, ಈಗ ಕಾನೂನು ಪಾಲಿಸಲು  ಏಕೆ ಆಗುತ್ತಿಲ್ಲ’ ಎಂದು ಕೆಪಿಸಿಸಿ ವಕ್ತಾರ ಎಂ.ಜಿ. ಹೆಗಡೆ ಪ್ರಶ್ನಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ ನೇತೃತ್ವದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದ ಆರ್‌ಎಸ್‌ಎಸ್‌, ಸಾವರ್ಕರ್‌, ಕೇಳ್ಕರ್ ಅವರಂತಹ ಕ್ರಾಂತಿಕಾರಿಗಳ ಹೋರಾಟಕ್ಕೂ ಬೆಂಬಲ ನೀಡಿರಲಿಲ್ಲ. ಕರ ನಿರಾಕಣೆ ಕ್ವಿಟ್ ಇಂಡಿಯಾ, ಸ್ವದೇಶಿ ಚಳವಳಿಗಳ  ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ತಾರಕಕ್ಕೆ ಏರಿದ್ದಾಗ ಆರ್‌ಎಸ್ಎಸ್‌ ಸ್ವಯಂಸೇವಕರು ಶಾಖೆಗಳಲ್ಲಿ ಕಬಡ್ಡಿ ಆಡುತ್ತಿದ್ದರು. ಈಗ ಕಾಂಗ್ರೆಸ್‌ಗೆ ದೇಶ ಪ್ರೇಮ ಇಲ್ಲ ಎಂದು ಆರೋಪ ಮಾಡುತ್ತಾರೆ’ ಎಂದರು.  

‘ಯಾವುದೇ ಸೇನಾ ಸಮವಸ್ತ್ರ ಧರಿಸಬಾರದು ಎಂಬ ಬ್ರಿಟಿಷರ ಆದೇಶವನ್ನು ಆರ್‌ಎಸ್‌ಎಸ್ ಚಾಚೂತಪ್ಪದೇ ಪಾಲಿಸಿತ್ತು. ಮುಂಬೈ ಪ್ರಾಂತ್ಯದ ಸಿಐಡಿ ಅಧಿಕಾರಿಗಳು 19 ಜಿಲ್ಲೆಗಳಲ್ಲಿ ಆರ್‌ಎಸ್‌ಎಸ್‌ ಶಾಖೆಗಳಿಗೆ ಭೇಟಿ ನೀಡಿ ಸಲ್ಲಿಸಿದ್ದ ವರದಿಯಲ್ಲಿ ಇದರ ಉಲ್ಲೇಖ ಇದೆ. 1942ರಲ್ಲಿ ಕಾರ್ಯಕ್ರಮವೊಂದರಲ್ಲಿ ಸುಮಾರು 400 ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ್ದ ಗೊಲ್ವಾಲ್ಕರ್‌, ತಮ್ಮದು ಹಿಂದೂಗಳ ಹಿತ ರಕ್ಷಣೆಗಾಗಿ ಇರುವ ರಾಜಕೀಯೇತರ ಸಂಘಟನೆ’ ಎಂದು ಸ್ಪಷ್ಟಪಡಿಸಿದ್ದರು’ ಎಂದರು.

ADVERTISEMENT

‘ರಾಷ್ಟ್ರಭಕ್ತಿಯ ಬಗ್ಗೆ ಮಾತನಾಡುವ ಆರ್‌ಎಸ್‌ಎಸ್‌ ಕಾರ್ಯಕ್ರಮ ಆಯೋಜಿಸುವಾಗ ಕಾನೂನು ಚೌಕಟ್ಟಿನಲ್ಲಿ ಅನುಮತಿ ಪಡೆಯಲು ಹಿಂದೇಟು ಹಾಕುವುದು ಏಕೆ. ಕೇಂದ್ರ ಸರ್ಕಾರದ ಅಧೀನದ ಜಾಗದಲ್ಲೂ ಆರ್‌ಎಸ್‌ಎಸ್ ಅನುಮತಿ ಪಡೆಯದೆಯೇ ಕಾರ್ಯಕ್ರಮ ನಡೆಸುತ್ತದೆಯೇ. ರೈಲು ನಿಲ್ದಾಣ, ಬಂದರು, ರಾಷ್ಟ್ರೀಯ ಹೆದ್ದಾರಿಗಳಲ್ಲೂ ಅವರು ಅನುಮತಿ ಪಡೆಯದೆಯೇ ಕಾರ್ಯಕ್ರಮ ಮಾಡಲು ಸಾಧ್ಯವೇ. ನಾಳೆ ಕಾಂಗ್ರೆಸ್ ಅಥವಾ ಇನ್ಯಾವುದೋ ಸಂಘಟನೆ ಬಂದರಿನಲ್ಲಿ ಅನುಮತಿ ಪಡೆಯದೆಯೇ ಕಾರ್ಯಕ್ರಮ ಮಾಡಿದರೆ ಕೇಂದ್ರ ಸರ್ಕಾರ ಸುಮ್ಮನಿರುತ್ತದೆಯೇ’ ಎಂದು ಪ್ರಶ್ನಿಸಿದರು.  

‘ಆಸ್ಟ್ರೇಲಿಯಾ, ಕೆನಡ, ಇಂಗ್ಲೆಂಡ್‌ ಸೇರಿದಂತೆ 70ಕ್ಕೂ ಹೆಚ್ಚು ದೇಶಗಳಲ್ಲಿ ನೋಂದಣಿ ಮಾಡಿಕೊಂಡಿರುವ ಆರ್‌ಎಸ್‌ಎಸ್‌ಗೆ ಭಾರತದಲ್ಲಿ ನೋಂದಣಿ ಮಾಡಿಕೊಳ್ಳಲು ಸಮಸ್ಯೆ ಏನು. ₹50 ಲಕ್ಷಕ್ಕಿಂತ ಹೆಚ್ಚಿನ ದೇಣಿಗೆ ಪಡೆದರೆ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರಬೇಕು. ಆರ್‌ಎಸ್‌ಎಸ್‌ನವರು ಗುರುದಕ್ಷಿಣೆ ಪಡೆಯುವ ಮೊತ್ತದ ಬಗ್ಗೆ ಲೆಕ್ಕ ಕೇಳುವುದರಲ್ಲಿ ತಪ್ಪೇನಿದೆ’ ಎಂದರು. 

ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ಸಾಲ್ಯಾನ್, ಎಸ್.ಅಪ್ಪಿ, ಮಂಜುಳಾ ನಾಯಕ್, ಉದಯ ಆಚಾರ್ಯ, ಶಶಿಕಲಾ ಪದ್ಮನಾಭ, ರವಿ ಪೂಜಾರಿ, ಸುನಿಲ್ ಬಜಿಲಕೇರಿ, ಸಜೀತ್ ಶೆಟ್ಟಿ, ಮಿಥುನ್ ಕುಮಾರ್  ಭಾಗವಹಿಸಿದ್ದರು.

‘ಆರ್‌ಎಸ್‌ಎಸ್‌ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಕ್ರಮ’

‘ಆರ್‌ಎಸ್‌ಎಸ್‌ ಚಟುವಟಿಕೆಯಲ್ಲಿ ಭಾಗವಹಿಸುವ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ. ಆರ್‌ಎಸ್‌ಎಸ್‌ ಚಟುವಟಿಕೆಯಲ್ಲಿ ಭಾಗವಹಿಸುವ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಭಾಷಣ ಹರಡುವ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪಕ್ಷದ ಪಕ್ಷದ ವರಿಷ್ಠರ ಗಮನ ಸೆಳೆಯುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.