ಪುತ್ತೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ರೈತರು ಕೃಷಿ ಉತ್ಪನ್ನಗಳನ್ನು ವೃದ್ಧಿಸಿಕೊಳ್ಳಲು ಹಲವು ಸವಲತ್ತುಗಳಿದ್ದು, ರೈತರು ಬಳಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ನಾಗೇಶ ಎಂ. ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ.ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪುತ್ತೂರಿನಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ‘ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ರೈತರಿಗೆ ಸಿಗುವ ಸವಲತ್ತು’ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಅವರು ರೈತರೊಂದಿಗೆ ಸಂವಾದ ನಡೆಸಿದರು.
5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರು ದೊಡ್ಡ ರೈತರ ವರ್ಗಕ್ಕೆ ಸೇರುವುದರಿಂದ ಅವರಿಗೆ ಉದ್ಯೋಗ ಖಾತರಿಯಲ್ಲಿ ಕೆಲಸಕ್ಕೆ ಅವಕಾಶ ಸಿಗುವುದಿಲ್ಲ. ಉದ್ಯೋಗ ಖಾತರಿಯಲ್ಲಿ ತೊಡಗಿಸಿಕೊಳ್ಳುವ ರೈತರು ಏಕ ಬೆಳೆಯ ಬದಲು ಬಹುಬೆಳೆಯನ್ನು ಬೆಳೆಸಲು ಒತ್ತು ನೀಡಬೇಕು. ಅಡಿಕೆ ಗುಂಡಿ ನಿರ್ಮಿಸಲು ಯೋಜನೆಯಡಿ ಅವಕಾಶಗಳಿವೆ ಎಂದು ಮಾಹಿತಿ ನೀಡಿದರು.
ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಿರುವ ರಸ್ತೆಗಳನ್ನು ಬಳಿಕ ಮುಚ್ಚಲು ಯಾರಿಗೂ ಅವಕಾಶವಿಲ್ಲ. ರಸ್ತೆಗೆ ಸರ್ಕಾರಿ ಅನುದಾನ ಬಳಕೆಯ ಸಂದರ್ಭ ಜಾಗದ ಮಾಲೀಕರಿಗೆ ಅಕ್ಷೇಪ ಸಲ್ಲಿಸಲು ಅವಕಾಶಗಳಿವೆ. ಅನುದಾನ ಬಳಸಿದ ಬಳಿಕ ಅದು ಸಾರ್ವಜನಿಕ ಸ್ವತ್ತಾಗುತ್ತದೆ. ಕರಾವಳಿಯಲ್ಲಿ ಕೃಷಿ ಜಮೀನಿನಲ್ಲೇ ಮನೆ ಇದ್ದು, ಭೂ ಪರಿವರ್ತನೆ ಇಲ್ಲದೆ ಜೂನ್ 2ರವರೆಗೆ 11ಬಿ ಮೂಲಕ ಮನೆ ಸಂಖ್ಯೆ ಪಡೆಯಲು ಅವಕಾಶವಿತ್ತು. ಆದರೆ, ಇದೀಗ ಭೂ ಪರಿವರ್ತನೆ ಮಾಡದೆ ಮನೆ ಸಂಖ್ಯೆ ನೀಡಲು ಅವಕಾಶಗಳಿಲ್ಲ. ಭೂ ಪರಿವರ್ತನೆ ಮಾಡಿಸಿಕೊಳ್ಳದೆ ಮನೆ ನಿರ್ಮಿಸಿದವರಿಗೆ 94ಸಿ ಮೂಲಕ ಅರ್ಜಿ ಸಲ್ಲಿಸಿ ಖಾತೆ ಪಡೆದುಕೊಂಡು ಪರಿವರ್ತನೆ ಮಾಡಲು ಅವಕಾಶಗಳಿವೆ ಎಂದು ತಿಳಿಸಿದರು.
ಕೃಷಿ ಜಮೀನಿನಲ್ಲಿ ಕೋಳಿ ಸಾಕಣೆ ಕಟ್ಟಡ ಮಾಡಲು ಪಂಚಾಯಿತಿ ಪರವಾನಗಿಯಿಂದ ವಿನಾಯಿತಿ ನೀಡಲಾಗಿದೆ. ಆದರೆ, ಕೋಳಿ ಸಾಕಾಣಿಕೆ ಉದ್ಯಮ ಮಾಡುವವರು ವಾಸದ ಮನೆಯಿಂದ 200ಮೀ ದೂರದಲ್ಲಿ ನಿರ್ಮಾಣ ಮಾಡಬೇಕೆಂಬ ಷರತ್ತು ವಿಧಿಸಲಾಗಿದೆ. ಸಾರ್ವಜನಿಕರಿಗೆ ಸರ್ಕಾರಿ ದಾಖಲೆಗಳನ್ನು ಪಡೆಯಲು ಹಲವು ಅವಕಾಶಗಳಿದ್ದು, ಗ್ರಾಮ ಸಭೆಯ ವರೆಗೆ ಕಾಯಬೇಕಿಲ್ಲ ಎಂದು ತಿಳಿಸಿದರು.
ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಮನೋಹರ ಶೆಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಯುಕೆಟಿಸಿಎಲ್ ವಿರೋಧಿ ಯೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಕಾರ್ಯದರ್ಶಿ ಈಶ್ವರ ಭಟ್, ರೈತ ಸಂಘದ ಕುಂಬ್ರ ವಲಯ ಅಧ್ಯಕ್ಷ ಕೆ.ಶೇಖರ ರೈ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.