
ಮಂಗಳೂರು: ಪ್ರಪಂಚದ 80 ರಾಷ್ಟ್ರಗಳು ಮಹಾತ್ಮ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಿ ಅವರಿಗೆ ಗೌರವ ಸಲ್ಲಿಸಿವೆ. ಆದರೆ, ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರವು, ದೇಶದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ಮನರೇಗಾ) ಹೆಸರಿನಲ್ಲಿ ಗಾಂಧೀಜಿ ಹೆಸರನ್ನು ಕೈಬಿಡಲು ಮುಂದಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಟೀಕಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುಪಿಎ ಸರ್ಕಾರ ನರೇಗಾ ಯೋಜನೆ ಜಾರಿಗೊಳಿಸುವ ಸಂದರ್ಭದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಅದನ್ನು ವಿರೋಧಿಸಿತ್ತು. ಗ್ರಾಮೀಣ ಜನರಿಗೆ ಉದ್ಯೋಗದ ಭರವಸೆ ನೀಡಿದ ನರೇಗಾ ಯೋಜನೆಯನ್ನು ಇಡೀ ಜಗತ್ತು ಮೆಚ್ಚಿದೆ. ರಾಷ್ಟ್ರಪಿತನ ಗೌರವಾರ್ಥ ನರೇಗಾ ಯೋಜನೆಯೊಂದಿಗೆ ಮಹಾತ್ಮ ಗಾಂಧಿ ಹೆಸರನ್ನು ಸೇರಿಸಲಾಗಿತ್ತು. ಪ್ರಸ್ತುತ ಕೇಂದ್ರ ಸರ್ಕಾರವು ಯೋಜನೆಯ ಹೆಸರು ಬದಲಾಯಿಸಲು ಹೊರಟಿರುವುದು ಖಂಡನೀಯ’ ಎಂದರು.
ಇದು ಗಾಂಧೀಜಿಗೆ ಮಾಡುವ ಅಪಮಾನವಷ್ಟೇ ಅಲ್ಲ, ಜನರ ಮನಸ್ಸಿನಿಂದ ಅವರ ಹೆಸರನ್ನು ದೂರ ಮಾಡುವ ಪ್ರಯತ್ನವಾಗಿದೆ. ಕೇಂದ್ರದ ಈ ಕ್ರಮ ಘೋರ ಅಪರಾಧವಾಗಿದೆ. ಗಾಂಧೀಜಿ ಯಾವತ್ತಿದ್ದರೂ ನಮಗೆ ಆದರ್ಶ ವ್ಯಕ್ತಿ. ನರೇಗಾ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದು ಆಗ್ರಹಿಸಿದರು.
‘ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಬಂದಾಗಿ ಗಾಂಧಿ ಪ್ರತಿಮೆಗೆ ನಮಸ್ಕರಿಸಿದ್ದಾರೆ. ಆದರೆ, ಬಿಜೆಪಿ ಹಾಗೂ ಸಂಘ ಪರಿವಾರದವರು ರಾಷ್ಟ್ರಪಿತ ಪುತ್ಥಳಿ ಮಾಡಿ, ಅದಕ್ಕೆ ಗುಂಡು ಹೊಡೆದು ಅವಮಾನಿಸುತ್ತಾರೆ. ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನು ವೈಭವೀಕರಿಸುತ್ತಾರೆ. ಇದು ಬಿಜೆಪಿಯವರ ಮನಃಸ್ಥಿತಿಯನ್ನು ತೋರಿಸುತ್ತದೆ’ ಎಂದು ಹೇಳಿದರು.
ಕಾಂಗ್ರೆಸ್ ಪ್ರಮುಖರಾದ ಶಶಿಧರ್ ಹೆಗ್ಡೆ, ಅಶ್ರಫ್ ಕೆ.ಇ, ಬಿ.ಎಲ್. ಪದ್ಮನಾಭ್ ಕೋಟ್ಯಾನ್, ಪ್ರಕಾಶ್ ಸಾಲ್ಯಾನ್, ಡೆನ್ನಿಸ್ ಡಿಸಿಲ್ವ, ಮಂಜುಳಾ ನಾಯಕ್, ಎಸ್. ಅಪ್ಪಿ, ದಿನೇಶ್ ಮುಳೂರ್, ಶುಭೋದಯ ಆಳ್ವ, ಜಯಶೀಲ ಅಡ್ಯಂತಾಯ, ಟಿ.ಕೆ. ಸುಧೀರ್, ಶಬೀರ್ ಸಿದ್ದಕಟ್ಟೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.