ADVERTISEMENT

mid day meal: ದುರಸ್ತಿಗೆ ಕಾಯುತ್ತಿವೆ ಅಡುಗೆ ಕೋಣೆ

174 ಕೊಠಡಿಗಳ ಪ್ರಸ್ತಾವ ಸಲ್ಲಿಕೆ, ನರೇಗಾ ಅಡಿ 40 ಕೊಠಡಿ ನಿರ್ಮಾಣಕ್ಕೆ ಅನುಮೋದನೆ

ಸಂಧ್ಯಾ ಹೆಗಡೆ
Published 21 ಅಕ್ಟೋಬರ್ 2025, 6:22 IST
Last Updated 21 ಅಕ್ಟೋಬರ್ 2025, 6:22 IST
<div class="paragraphs"><p>mid day meal</p></div>

mid day meal

   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟದ ಅಡುಗೆ ಕೊಠಡಿಗಳಲ್ಲಿ 174 ಕೊಠಡಿಗಳು ದುರಸ್ತಿಗೆ ಕಾಯುತ್ತಿವೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಶಿಥಿಲಗೊಂಡಿರುವ 40 ಕೊಠಡಿಗಳ ಮರುನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದರೂ, ಇನ್ನೂ ಕಾರ್ಯಾನುಷ್ಠಾನಗೊಂಡಿಲ್ಲ.

ಪ್ರಧಾನಮಂತ್ರಿ ಪೋಷಣ್ ಯೋಜನೆಯಡಿ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ಅಡುಗೆ ತಯಾರಿಸಲು ಪ್ರತ್ಯೇಕ ಕೊಠಡಿಗಳು ಇವೆ. ಜಿಲ್ಲೆಯಲ್ಲಿ ವಿವಿಧ ಹಂತಗಳಲ್ಲಿ ಮಂಜೂರು ಆಗಿರುವ ಒಟ್ಟು 1,169 ಅಡುಗೆ ಕೊಠಡಿಗಳು ಇವೆ. ದಶಕದ ಹಿಂದೆ ನಿರ್ಮಾಣವಾಗಿರುವ ಇವುಗಳಲ್ಲಿ ಹೆಚ್ಚಿನ ಕೊಠಡಿಗಳು ಕರಾವಳಿಯ ಹವಾಗುಣಕ್ಕೆ ಶಿಥಿಲಗೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಕಳೆದ ವರ್ಷ 174 ಕೊಠಡಿಗಳ ದುರಸ್ತಿ ಅಥವಾ ಮರು ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅವುಗಳಲ್ಲಿ 77 ಕೊಠಡಿಗಳ ಅಂದಾಜು ವೆಚ್ಚದ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಲಾಗಿದೆ. 40 ಕೊಠಡಿಗಳನ್ನು ನರೇಗಾ ಅಡಿಯಲ್ಲಿ ನಿರ್ಮಿಸಲು ಅನುಮೋದನೆ ದೊರೆತಿದೆ ಎಂದು ಅವರು ಮಾಹಿತಿ ನೀಡಿದರು.

2023–24ನೇ ಸಾಲಿನಲ್ಲಿ ಅಡುಗೆ ಪಾತ್ರೆಗಳ ಬದಲಾವಣೆ, ಇನ್ನಿತರ ಸೌಲಭ್ಯ ಒದಗಿಸಲು ಒಟ್ಟು ₹70.95 ಲಕ್ಷ ಅನುದಾನ ಮಂಜೂರು ಆಗಿತ್ತು. ಶಾಲೆಯ ಅಗತ್ಯ, ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ 372 ಶಾಲೆಗಳಿಗೆ ಇವನ್ನು ಹಂಚಿಕೆ ಮಾಡಲಾಗಿದೆ. ಕೊಠಡಿ ನಿರ್ಮಾಣವಾದ ವರ್ಷ ಆಧರಿಸಿ, ದುರಸ್ತಿ ಅಗತ್ಯವಿದ್ದಲ್ಲಿ ಅನುದಾನದ ಲಭ್ಯತೆ ಮೇಲೆ ಪ್ರತಿ ಶಾಲೆಗೆ ತಲಾ ₹10 ಸಾವಿರ ನೀಡಲಾಗುತ್ತದೆ ಎಂದು ವಿವರಿಸಿದರು.

ಅಡುಗೆ ಕೋಣೆ ಮರು ನಿರ್ಮಾಣದ ತುರ್ತು ಅಗತ್ಯವಿರುವ 40 ಶಾಲೆಗಳ ಪಟ್ಟಿ ಮಾಡಿ ನರೇಗಾ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಕಳೆದ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇವುಗಳಲ್ಲಿ ಮಂಗಳೂರು ಶೈಕ್ಷಣಿಕ ಬಾಕ್‌ನಲ್ಲಿ 12, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಬ್ಲಾಕ್‌ಗಳ ತಲಾ 7 ಕೊಠಡಿಗಳು ಒಳಗೊಂಡಿವೆ. ಸರ್ಕಾರದಿಂದ ಕೊಠಡಿ ನಿರ್ಮಾಣಕ್ಕೆ ಅನುಮೋದನೆ ದೊರೆತರೂ ಕಾಮಗಾರಿ ಪ್ರಾರಂಭಕ್ಕೆ ವಿಳಂಬವಾಗುತ್ತಿದೆ. ಇವುಗಳ ಹೊರತಾಗಿ 16 ಹೊಸ ಅಡುಗೆ ಕೋಣೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.