ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ದೈನಂದಿನ ಹಾಲು ಶೇಖರಣೆಯಲ್ಲಿ ಈ ಆರ್ಥಿಕ ವರ್ಷದಲ್ಲಿ ಇಲ್ಲಿಯ ವರೆಗೆ ಶೇಕಡ 16ರಷ್ಟು ಪ್ರಗತಿ ಕಂಡದೆ. ಸದ್ಯ ನಿತ್ಯವೂ 3.97 ಲಕ್ಷ ಲೀಟರ್ ಹಾಲು ಸಂಗ್ರಹ ಆಗುತ್ತಿದ್ದು ಕಳೆದ ವರ್ಷ ಈ ಪ್ರಮಾಣ 3.42 ಲಕ್ಷ ಲೀಟರ್ ಆಗಿತ್ತು ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದರು.
ಒಕ್ಕೂಟದ ವ್ಯಾಪ್ತಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಿತ್ಯ ನಿತ್ಯ 5 ಲಕ್ಷ ಲೀಟರ್ ಹಾಲಿನ ಬೇಡಿಕೆ ಇದೆ. ಹೆಚ್ಚುವರಿ ಹಾಲನ್ನು ಹೊರ ಜಿಲ್ಲೆಗಳಿಂದ ತರಿಸಲಾಗುತ್ತಿದೆ. ಕಳೆದ ವರ್ಷ ನಿತ್ಯವೂ 4.2 ಲಕ್ಷ ಲೀಟರ್ ಹಾಲು ಮತ್ತು 81 ಸಾವಿರ ಕೆಜಿ ಮೊಸರು ಮಾರಾಟ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಒಕ್ಕೂಟ ₹ 1174 ಕೋಟಿ ಮೊತ್ತದ ವ್ಯವಹಾರ ಮಾಡಿದ್ದು ₹ 12.97 ಕೋಟಿ ಲಾಭ ಗಳಿಸಿದೆ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೊರ ಜಿಲ್ಲೆಗಳು ಮತ್ತು ತಮಿಳುನಾಡಿನ ಈರೋಡ್‌ನಿಂದ ಉತ್ತಮ ತಳಿಯ ರಾಸುಗಳನ್ನು ಖರೀದಿಸಿ ರೈತರಿಗೆ ನೀಡುವ ಯೋಜನೆ ಕಳೆದ ವರ್ಷದಿಂದ ಜಾರಿಗೆ ತಂದಿದ್ದು ಈ ವರ್ಷದ 130 ಸೇರಿದಂತೆ ಇಲ್ಲಿಯ ವರೆಗೆ ಒಟ್ಟು 359 ರಾಸುಗಳನ್ನು ತರಲಾಗಿದೆ. ಈರೋಡ್‌ನಲ್ಲಿ ನಡೆಯುವ ಸಂತೆಗೆ ಒಕ್ಕೂಟದ ಪಶುವೈದ್ಯರ ಜೊತೆ ರೈತರನ್ನು ಕರೆದುಕೊಂಡು ಹೋಗಿ ರಾಸು ಖರೀದಿಸಲಾಗುತ್ತದೆ. ಸಾಗಾಣಿಕೆ ಮತ್ತು ವಿಮೆ ವೆಚ್ಚವನ್ನು ಒಕ್ಕೂಟವೇ ಭರಿಸುತ್ತದೆ. ವಿಮೆ ಯೋಜನೆಯಲ್ಲಿ ಕಳೆದ ಸಾಲಿನಲ್ಲಿ ಒಟ್ಟು 30629 ರಾಸುಗಳಿಗೆ ವಿಮೆ ಮಾಡಿದ್ದು 1177 ಕ್ಲೇಮ್ ಕೂಡ ಆಗಿದೆ ಎಂದು ಅವರು ವಿವರಿಸಿದರು.
ಉತ್ಕೃಷ್ಟ ಹಸುವಿನ ಅಂಡಾಣು ಮತ್ತು ಉತ್ಕೃಷ್ಟ ತಳಿಯ ಲಿಂಗ ವರ್ಗೀಕೃತ ವೀರ್ಯಾಣುಗಳನ್ನು ಫಲಕಾರಿಯಾಗಿ ಮಾಡಿ ಆಯ್ದ ರಾಸುಗಳಿಗೆ ವರ್ಗಾಯಿಸುವ ಯೋಜನೆ ಸೆ.10ರಂದು ಜಾರಿಗೆ ತಂದಿದ್ದು 40 ರಾಸುಗಳಲ್ಲಿ ಇದನ್ನು ಪ್ರಯೋಗಿಸುವ ಗುರಿ ಇದೆ. ಇದರಲ್ಲಿ ಒಂದು ಹಸುವಿಗೆ ₹ 21 ಸಾವಿರ ವೆಚ್ಚ ಆಗಲಿದ್ದು ₹ 1 ಸಾವಿರವಷ್ಟೇ ರೈತರು ಪಾವತಿಸಬೇಕು ಎಂದು ರವಿರಾಜ ಹೆಗ್ಡೆ ತಿಳಿಸಿದರು.
ಒಕ್ಕೂಟದ ವ್ಯಾಪ್ತಿಯ 751 ಸಂಘಗಳ 55000 ಹೈನುಗಾರರಿಗಾಗಿ ಸ್ಥಾಪಿಸಿರುವ ರೈತ ಕಲ್ಯಾಣ ಟ್ರಸ್ಟ್ ಕಳೆದ ವರ್ಷ ರೈತರ ಸಾವು, ರಾಸುಗಳ ಸಾವು ಮತ್ತು ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿ ₹ 2.05 ಕೋಟಿ ಮೊತ್ತವನ್ನು ವ್ಯಯಿಸಿದೆ. ಹಾಸನ, ಧಾರವಾಡ ಮತ್ತು ಮೈಸೂರು ಜಿಲ್ಲೆಗಳಿಂದ ಪ್ರತಿ ತಿಂಗಳು 1000 ಟನ್‌ಗಳಷ್ಟು ರಸಮೇವು ಖರೀದಿಸಿ ಹಾಲು ಉತ್ಪಾದಕ ಸಂಘಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಹಸಿರು ಹುಲ್ಲು ಅಭಿವೃದ್ಧಿ, ಹುಲ್ಲು ಕತ್ತರಿಸುವ ಯಂತ್ರ ಖರೀದಿಗೆ ಅನುದಾನ, ಮಿನಿ ಡೇರಿ ಯೋಜನೆ, ಅನಿಲ ಸ್ಥಾವರ ಅಭಿವೃದ್ಧಿ, ಸ್ಲರಿ ಪಂಪು ಖರೀದಿಗೆ ಅನುದಾನ, ಹಾಲು ಕರೆಯುವ, ಹಟ್ಟಿ ತೊಳೆಯುವ ಯಂತ್ರ ಖರೀದಿಗೆ ಅನುದಾನ ಮುಂತಾದ ವಿವಿಧ ಯೋಜನೆಗಳಡಿ ಒಟ್ಟು ₹ 2.60 ಕೋಟಿ ವಿತರಿಸಲಾಗಿದೆ ಎಂದರು.
ಉಪಾಧ್ಯಕ್ಷ ಉದಯ್ ಕೋಟ್ಯಾನ್, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, ಸುಚರಿತ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.