ಬೆಳ್ತಂಗಡಿ: ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ತಾಲ್ಲೂಕು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಉಚಿತವಾಗಿ ಹಾಲು, ಹಣ್ಣು–ಹಂಪಲು ವಿತರಿಸಲಾಯಿತು.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರಿದಾಸ್ ಎಸ್.ಎಂ., ‘ದೇಶದಲ್ಲಿ 28 ಕೋಟಿ ಜನ ಹಾಲು ಖರೀದಿಸಲು ಸಾಧ್ಯವಿಲ್ಲದೆ ಜೀವಿಸುತ್ತಿದ್ದಾರೆ. ಅಪೌಷ್ಟಿಕತೆಯ ಕೊರತೆಯಿಂದ ಮಕ್ಕಳು, ಮಹಿಳೆಯರ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಾಗರ ಪಂಚಮಿ ಹೆಸರಲ್ಲಿ ಕಲ್ಲು, ಹುತ್ತಗಳಿಗೆ ಹಾಲು ಚೆಲ್ಲುವ ಮೂಲಕ ದುರುಪಯೋಗ ಮಾಡುತ್ತೇವೆ. ಅದರ ಬದಲಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ, ರೋಗಿಗಳಿಗೆ ನೀಡಿದರೆ ಉತ್ತಮ’ ಎಂದರು.
‘ಜನಜಾಗೃತಿ ಮೂಡಿಸಲು ರೋಗಿಗಳಿಗೆ ಹಾಲು, ಹಣ್ಣು ವಿತರಿಸುತ್ತಿದ್ದೇವೆ. ಹಾವುಗಳು ಹಾಲು ಕುಡಿಯುವುದಿಲ್ಲ. ಹಾವಿನ ಹೆಸರಿನಲ್ಲಿ ಹಾಲನ್ನು ಪೋಲು ಮಾಡುವುದನ್ನು ನಿಲ್ಲಿಸಿ. ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ನೀಡಿದರೆ ಒಂದು ಜೀವ ಉಳಿಸಿದಂತಾಗುತ್ತದೆ’ ಎಂದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್ ಕೆ., ಹಿರಿಯ ಸುಶ್ರೂಷಕಿ ಪೊನ್ನಮ್ಮ, ರೆಡ್ ಕ್ರಾಸ್ ಸೊಸೈಟಿ ಕಾರ್ಯದರ್ಶಿ ಯಶವಂತ ಪಟವರ್ಧನ್, ಜಾನ್ ಅರ್ವಿನ್ ಡಿಸೋಜ, ನಿರ್ದೇಶಕಿ ಸುಕನ್ಯಾ ಎಚ್., ಸದಸ್ಯ ಶೇಖರ್ ಲಾಯಿಲ, ಎಕೆಜಿ ಸೊಸೈಟಿ ಸಿಬ್ಬಂದಿ ಸಂಜೀವ ಆರ್., ಕೀರ್ತನಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.