ADVERTISEMENT

ಗಣಿಗಾರಿಕೆ: ಉನ್ನತ ಮಟ್ಟದ ತನಿಖೆ ಆಗಲಿ

ರಮಾನಾಥ ರೈ ಆರೋಪಕ್ಕೆ ರಾಜೇಶ್‌ ನಾಯ್ಕ್‌ ತಿರುಗೇಟು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 2:49 IST
Last Updated 20 ಅಕ್ಟೋಬರ್ 2020, 2:49 IST
ರಾಜೇಶ್‌ ನಾಯ್ಕ್
ರಾಜೇಶ್‌ ನಾಯ್ಕ್   

ಮಂಗಳೂರು: ‘ಮುಡಿಪು ಪ್ರದೇಶ ಬಂಟ್ವಾಳ ತಾಲ್ಲೂಕಿನಲ್ಲಿದ್ದರೂ, ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ವ್ಯಾಪ್ತಿಯಲ್ಲಿದೆ. ಅದು ನನ್ನ ಕ್ಷೇತ್ರದಲ್ಲಿ ಇಲ್ಲ, ಅಲ್ಲಿ ನಾನು ಕೆಂಪು ಕಲ್ಲು ಗಣಿಗಾರಿಕೆಯನ್ನೂ ಮಾಡುತ್ತಿಲ್ಲ. ನನ್ನ ಸಂಬಂಧಿಕರೂ ಅಂತಹ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ’ ಎಂದು ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಸ್ಪಷ್ಟಪಡಿಸಿದರು.

ಸೋಮವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಜಿ ಸಚಿವ ಬಿ.ರಮಾನಾಥ ರೈ ಕೆಲವು ದಿನಗಳ ಹಿಂದೆ ಆಡಳಿತ ಪಕ್ಷದ ಶಾಸಕರೊಬ್ಬರು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಅವರ ಸಂಬಂಧಿಗಳು ಕೂಡಾ ಇದ್ದಾರೆ ಎಂದು ಆರೋಪಿಸಿದ್ದರು. ಅಧಿಕೃತ ಪರವಾನಗಿ ಪಡೆದು ಪಟ್ಟಾ ಜಮೀನಿನಲ್ಲಿ ನಾನು ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದೇನೆ’ ಎಂದರು.

‘ನಾನು ಹಿಂದಿನಿಂದಲೂ ಕಾನೂನುಬದ್ಧವಾಗಿಯೇ ಗಣಿಗಾರಿಕೆ ಮಾಡಿಕೊಂಡು ಬಂದಿದ್ದೇನೆ. ಎಲ್ಲರೂ ಹಾಗೆ ಮಾಡುತ್ತಾರೆ ಎಂದು ಹೇಳಲಾಗದು. ಅಕ್ರಮವಾಗಿ ಗಣಿಗಾರಿಕೆ ಮಾಡುವವರೂ ಇರಬಹುದು. ಉನ್ನತ ಮಟ್ಟದ ತನಿಖೆ ನಡೆಯಲಿ. ಆಗ ಕಾನೂನು
ರೀತಿಯಲ್ಲಿ ಗಣಿಗಾರಿಕೆ ಮಾಡುತ್ತಿರುವವರಿಗೆ ಮಾನ್ಯತೆ ಬರುತ್ತದೆ’ ಎಂದು ತಿಳಿಸಿದರು.

ADVERTISEMENT

‘ಕೋವಿಡ್ ಮತ್ತು ರಾಯಧನವನ್ನು ಹೆಚ್ಚಳ ಮಾಡಿರುವುದರಿಂದ ಎಂಟು ತಿಂಗಳಿನಿಂದ ಕೆಂಪು ಕಲ್ಲು ಗಣಿಗಾರಿಕೆಯನ್ನು ಮಾಡಿಲ್ಲ. ಸರ್ಕಾರ ರಾಯಧನವನ್ನು ಟನ್‌ಗೆ ₹92 ರಿಂದ ₹252ಕ್ಕೆ ಹೆಚ್ಚಿಸಿದೆ. ಆದರೆ ಕೆಂಪು ಮಣ್ಣಿಗೆ ಲಭಿಸುವ ದರ ₹600. ಅದು ಆರ್ಥಿಕವಾಗಿ ನಷ್ಟದ ದಾರಿ’ ಎಂದರು.

ವಿಧಾನ ಪರಿಷತ್‌ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ಸುಧೀರ್ ಶೆಟ್ಟಿ, ವಕ್ತಾರ ರಾಧಾಕೃಷ್ಣ ಇದ್ದರು.

‘ಖಾದರ್ ಸಂಬಂಧಿಗಳು ಭಾಗಿ’

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಸುದರ್ಶನ ಮಾತನಾಡಿ, ‘ರಮಾನಾಥ ರೈ ಅವರು ಆರೋಪಕ್ಕೆ ದಾಖಲೆ ಒದಗಿಸಬೇಕು. ತಮ್ಮದೇ ಪಕ್ಷದ ಶಾಸಕ ಯು.ಟಿ.ಖಾದರ್ ಅವರನ್ನು ಎದುರು ಹಾಕಿಕೊಳ್ಳುವುದು ಸಾಧ್ಯವಾಗದೇ ಈ ರೀತಿ ಸುಳ್ಳು ಆರೋಪ ಮಾಡಿದ್ದಾರೆ. ಮುಡಿಪು ಭಾಗದಲ್ಲಿ ಅಕ್ರಮ ಗಣಿಗಾರಿಕೆ ಕಂಪನಿಯಲ್ಲಿ ತೊಡಗಿರುವವರು ಖಾದರ್ ಸಂಬಂಧಿಗಳು’ ಎಂದು ತಿರುಗೇಟು ನೀಡಿದರು.

ಉಪ ವಿಭಾಗಾಧಿಕಾರಿ ಮದನ್ ಮೋಹನ್ ವರ್ಗಾವಣೆ ಕೆಎಟಿ ಮತ್ತು ಹೈಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಆಗಿದೆ. ಅವರನ್ನೇ ಮುಂದುವರಿಸಲು ನಾವೇ ಸಿಎಂಗೆ ಮನವಿ ಮಾಡಿದ್ದೇವೆ.

ರಾಜೇಶ ನಾಯ್ಕ್, ಬಂಟ್ವಾಳ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.