ADVERTISEMENT

ವಲಸೆ ಕಾರ್ಮಿಕರ ಪ್ರಯಾಣಕ್ಕೆ ರೈಲು ವ್ಯವಸ್ಥೆ: ನಳಿನ್‌ಕುಮಾರ್ ಕಟೀಲ್

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸದ ನಳಿನ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ಮೇ 2020, 9:15 IST
Last Updated 9 ಮೇ 2020, 9:15 IST
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸದ ನಳಿನ್‌ಕುಮಾರ್‌ ಮಾತನಾಡಿದರು.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸದ ನಳಿನ್‌ಕುಮಾರ್‌ ಮಾತನಾಡಿದರು.   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹೊರರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ಸ್ವಂತ ರಾಜ್ಯಕ್ಕೆ ಹೋಗಲು ಅಗತ್ಯ ಇರುವಷ್ಟು ರೈಲುಗಳನ್ನು ಒದಗಿಸಲು ಸಿದ್ಧರಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಈ ಸಂಬಂಧ ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರೊಂದಿಗೆ ಮಾತನಾಡಿದ್ದು, ಮಂಗಳೂರಿಗೆ ಅಗತ್ಯ ವಿರುವಷ್ಟು ರೈಲುಗಳನ್ನು ಒದಗಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ಆಯಾ ರಾಜ್ಯದ ಕಾರ್ಮಿಕರನ್ನು ಸಂಬಂಧಪಟ್ಟ ರಾಜ್ಯಗಳು ಸ್ವೀಕರಿಸಲು ಒಪ್ಪಿಗೆ ನೀಡಬೇಕಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಾತನಾಡಿ, ಸೇವಾ ಸಿಂಧೂ ವ್ಯವಸ್ಥೆಯಲ್ಲಿ ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಹೋಗಲು ಸುಮಾರು 20ಸಾವಿರ ಮಂದಿ ನೋಂದಣಿ ಮಾಡಿದ್ದಾರೆ. ಇದರಲ್ಲಿ 5ಸಾವಿರ ಮಂದಿ ಜಾರ್ಖಂಡ್‌, 3ಸಾವಿರ ಜನ ಉತ್ತರ ಪ್ರದೇಶ, 4ಸಾವಿರ ಜನ ಬಿಹಾರ ರಾಜ್ಯಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹೊರರಾಜ್ಯದ ಕಾರ್ಮಿಕರು ಸಂಚರಿಸಲು ರೈಲ್ವೆ ವ್ಯವಸ್ಥೆ ಮಾಡುವ ಸಂಬಂಧ ಈಗಾಗಲೇ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿರುವುದಾಗಿ ಹೇಳಿದರು.

ಆದಾಗ್ಯೂ ಸಲ್ಲದ ಅಪಪ್ರಚಾರ ಮಾಡಿ ಕಾರ್ಮಿಕರ ಹೆಸರಿನಲ್ಲಿ ಜಿಲ್ಲಾಡಳಿತದ ಮೇಲೆ ಆಪಾದನೆ ಮಾಡುತ್ತಿರುವ ಮುಖಂಡರ ಹೇಳಿಕೆ ನೋವು ತಂದಿದೆ ಎಂದು ಹೇಳಿದರು.

ಶಾಸಕ ವೇದವ್ಯಾಸ ಕಾಮತ್, ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಇದ್ದರು.

ಮದ್ಯ; ಹೆಚ್ಚು ದರ ಪಡೆದರೆ ಲೈಸನ್ಸ್ ರದ್ದು

ಜಿಲ್ಲೆಯ ಮದ್ಯದಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಅಬಕಾರಿ ಅಧಿಕಾರಿಗಳು ಎಲ್ಲಾ ಮದ್ಯದಂಗಡಿಗಳ ಮೇಲೆ ನಿಗಾ ವಹಿಸಬೇಕು. ಅಧಿಕ ದರ ವಸೂಲಿ ಮಾಡುವ ಪ್ರಕರಣ ಕಂಡು ಬಂದರೆ ಅಂತಹ ಮದ್ಯದಂಗಡಿಗಳ ಪರವಾನಗಿ ರದ್ದುಪಡಿಸುವಂತೆ ಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಬಕಾರಿ ಉಪ ಆಯುಕ್ತೆ ಶೈಲಜಾ ಕೋಟೆ ಮಾತನಾಡಿ, ಮದ್ಯದಂಗಡಿಗಳಲ್ಲಿ ಅಧಿಕ ದರ ವಸೂಲಿ ಪ್ರಕರಣ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.