ಮಂಗಳೂರು: ದೇಶವನ್ನು ದಿವಾಳಿ ಮಾಡಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಹೊರತು ನಾವಲ್ಲ. 2014ರ ವರೆಗೆ ದೇಶದ ಸಾಲ ₹53 ಲಕ್ಷ ಕೋಟಿ ಇತ್ತು. ಮೋದಿ ಪ್ರಧಾನಿ ಆದ 10 ವರ್ಷಗಳಲ್ಲಿ ದೇಶದ ಸಾಲ ₹185 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿಗರು ಚುನಾವಣೆ ವೇಳೆ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ, ಬದಲಾಗಿ ಪಾಕಿಸ್ತಾನ, ಮುಸಲ್ಮಾನ, ಅಪಘಾನಿಸ್ತಾನ ಇವುಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಬಸವಣ್ಣ, ಬುದ್ಧ, ಅಂಬೇಡ್ಕರ್, ಕಾಂಗ್ರೆಸ್ ಸಿದ್ಧಾಂತವುಳ್ಳ ಯುವಕರನ್ನು ಗುರುತಿಸಬೇಕು. ಕಟ್ಟೆ ಮೇಲೆ ನಿಂತು ಭಾಷಣ ಮಾತನಾಡುವ ಯುವಕರನ್ನು ಮುನ್ನೆಲೆಗೆ ತರಬೇಕು ಎಂದರು.
ಅಸಂಘಟಿತ ವರ್ಗದ ಕಾರ್ಮಿಕರಲ್ಲಿ ಖಾಸಗಿ ವಾಣಿಜ್ಯ ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರು ಸುಮಾರು 40 ಲಕ್ಷ ಇರುವುದಾಗಿ ಅಂದಾಜಿಸಲಾಗಿದ್ದು, ಅವರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಅಧಿನಿಯಮ ಜಾರಿಗೆ ತಂದಿದೆ. ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯನ್ನು ರಚಿಸಿದ್ದು, ಈ ಮಂಡಳಿಯ ಮೂಲಕ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಮುಖರಾದ ಸುರೇಶ್ ಬಳ್ಳಾಲ್, ಶಶಿಧರ್ ಹೆಗ್ಡೆ, ಸದಾಶಿವ್ ಉಳ್ಳಾಲ್, ಪದ್ಮರಾಜ್ ಪೂಜಾರಿ, ಟಿ.ಎಂ ಶಹೀದ್, ಎಂ.ಎ ಗಫೂರ್, ಲಾವಣ್ಯ ಬಲ್ಲಾಳ್, ಮಮತಾ ಗಟ್ಟಿ, ಅನಿಲ್ ತಡ್ಕಲ್ ಇದ್ದರು. ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸ್ವಾಗತಿಸಿದರು.