ADVERTISEMENT

‘ಅಲ್ಪಸಂಖ್ಯಾತರ ಒಗ್ಗಟ್ಟಿಗೆ ಮುಸ್ಲಿಮರ ನೇತೃತ್ವವಿರಲಿ’

ಮುಸ್ಲಿಂ ಜಸ್ಟಿಸ್ ಫೋರಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಕೀಲ್ ಮುಜಾಫರ್ ಅಹಮ್ಮದ್ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 11:28 IST
Last Updated 4 ಡಿಸೆಂಬರ್ 2022, 11:28 IST
ಮುಸ್ಲಿಂ ಐಕ್ಯತಾ ಸಂದೇಶ ಕಾರ್ಯಕ್ರಮದಲ್ಲಿ ವಕೀಲ ಮುಜಫರ್ ಅಹಮದ್ ಮಾತನಾಡಿದರು  –ಪ್ರಜಾವಾಣಿ ಚಿತ್ರ
ಮುಸ್ಲಿಂ ಐಕ್ಯತಾ ಸಂದೇಶ ಕಾರ್ಯಕ್ರಮದಲ್ಲಿ ವಕೀಲ ಮುಜಫರ್ ಅಹಮದ್ ಮಾತನಾಡಿದರು  –ಪ್ರಜಾವಾಣಿ ಚಿತ್ರ   

ಮಂಗಳೂರು: ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗದೆ ಆಡಳಿತದ ವಿರುದ್ಧ ಬೆರಳು ತೋರಿಸಿಕೊಂಡು ಕುಳಿತುಕೊಳ್ಳುವುದರಿಂದ ಪ್ರಯೋಜನವಿಲ್ಲ. ಭಾರತದಲ್ಲಿ ಮುಸ್ಲಿಮರು ಸದ್ಯ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಇತರ ಅಲ್ಪಸಂಖ್ಯಾತ ಸಮುದಾಯದವರ ಜೊತೆ ಕೈಜೋಡಿಸಬೇಕು. ಅದಕ್ಕೆ ಮುಸ್ಲಿಮರೇ ನೇತೃತ್ವ ವಹಿಸಬೇಕು ಎಂದು ವಕೀಲ ಮುಜಫರ್ ಅಹಮ್ಮದ್ ಸಲಹೆ ನೀಡಿದರು.

ಕಂಕನಾಡಿಯ ಜಮಿಯತ್ ಉಲ್ ಫಲಾಹ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಜಸ್ಟಿಸ್ ಫೋರಂ ಆಯೋಜಿಸಿದ್ದ ಮುಸ್ಲಿಂ ಏಕತಾ ಸಂದೇಶ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು ಮುಸ್ಲಿಮರು ಯಾವುದೇ ಸಂಘಟನೆ ಅಥವಾ ಪಕ್ಷದ ಗುಲಾಮರಾಗದೆ ಸುಶಿಕ್ಷಿತರಾಗಿ ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದರು.

‘ಜಗತ್ತಿನ ವಿವಿಧ ದೇಶಗಳಲ್ಲಿ ಮುಸ್ಲಿಮರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಮುಸ್ಲಿಮರಾಗಿ ಜನಿಸಿದ್ದು ಅದೃಷ್ಟ. ಇಲ್ಲಿಯೂ ಸಮಸ್ಯೆಗಳು ಇವೆ. ಅವುಗಳನ್ನು ಮೀರಿ ನಿಲ್ಲಲು ಪ್ರಯತ್ನಿಸುವ ಬದಲು ಬಹುತೇಕರು ಅವುಗಳನ್ನು ಕಾನೂನಿನ ಹಿನ್ನೆಲೆಯನ್ನಷ್ಟೇ ನೋಡುತ್ತಾರೆ. ರಾಜಕೀಯ ಆಡಳಿತ ಶಾಶ್ವತವಲ್ಲ ಎಂಬುದನ್ನು ಅರಿತು ದೌರ್ಜನ್ಯ ಸಹಿಸುವ ಶಕ್ತಿಯನ್ನು ಪ್ರದರ್ಶಿಸುತ್ತ ಕಾದು ನೋಡುವ ತಂತ್ರ ಅನುಸರಿಸಬೇಕು. ಸಮಸ್ಯೆ ಸೃಷ್ಟಿಯಾದ ನಂತರ ಪ್ರತಿಕ್ರಿಯಿಸುವ ಬದಲು ಮೊದಲೇ ಎಚ್ಚೆತ್ತುಕೊಳ್ಳಬೇಕು. ಸಮುದಾಯವನ್ನು ಗುರಿಯಾಗಿರಿಸಿ ಸುಳ್ಳು ಪ್ರಕರಣಗಳು ದಾಖಲಾಗದಂತೆ ನೋಡಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ಸಮುದಾಯದ ಒಳಗಿನ ದೌರ್ಬಲ್ಯಗಳಿಗೂ ಪರಿಹಾರ ಕಂಡುಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

ಮಸೀದಿ ಪ್ರಾರ್ಥನೆಗಷ್ಟೇ ಸೀಮಿತ ಆಗದಿರಲಿ

ಕಾರ್ಯಕ್ರಮ ಉದ್ಘಾಟಿಸಿದ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್‌ ರಶೀದ್ ಅವರು ಮಸೀದಿ ಮತ್ತು ಮದ್ರಸಾಗಳು ಪ್ರಾರ್ಥನೆ ಮತ್ತು ಧಾರ್ಮಿಕ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ ಚಿಂತನಾಗೋಷ್ಠಿಗಳು ನಡೆಯುವ ಸ್ಥಳಗಳಾಗಬೇಕು ಎಂದರು.

‘ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಮುಸ್ಲಿಮರು ಅಧೋಗತಿಯತ್ತ ಸಾಗುತ್ತಿದ್ದಾರೆ. ನಮ್ಮವರು ಸಮಸ್ಯೆ ಹೇಳುತ್ತ ಕುಳಿತುಕೊಳ್ಳುವುದರಲ್ಲಿ ಮುಂದಿದ್ದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಸಮುದಾಯವು ಹತ್ತು ಹಲವು ಸಂಘಟನೆಗಳಲ್ಲಿ ಹಂಚಿಹೋಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಯಾವುದೇ ಆಶಯದ ಹಿನ್ನೆಲೆಯವರಾಗಿರಲಿ, ಯಾವುದೇ ಗುಂಪಿಗೆ ಸೇರಿದವರು ಆಗಿರಲಿ ಎಲ್ಲರೂ ಭಾರತೀಯರು, ಸಹೋದರರು ಎಂದು ತಿಳಿದು ಪರಸ್ಪರ ಸಹಕಾರ ಮನೋಭಾವದಿಂದ ಬಾಳಬೇಕು’ ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಸ್ಲಿಂ ಲೀಗಲ್ ಫೋರಂ ಅಧ್ಯಕ್ಷ ಇರ್ಶಾದ್ ಯು.ಟಿ ಮಾತನಾಡಿ, ಸಮಸ್ಯೆ ಸೃಷ್ಟಿಸಲು ಮತ್ತು ಸಲಹೆ ನೀಡಲು ನಾವೆಲ್ಲರೂ ನಿಸ್ಸೀಮರಾಗಿದ್ದು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗುವುದಿಲ್ಲ ಎಂದು ದೂರಿದರು.

ಫೋರಂ ಸ್ಥಾಪಕ ಅಧ್ಯಕ್ಷ ರಫೀಯುದ್ದೀನ್ ಕುದ್ರೋಳಿ, ಲೇಖಕ ಜಿ. ಮೆಹಬೂಬ್, ಜಿಲ್ಲಾ ವಕ್ಫ್‌ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಮುಖಂಡರಾದ ಬಶೀರ್ ಶಾಲಿಮಾರ್, ಹನೀಫ್‌, ಕೆ.ಅಶ್ರಫ್‌, ಮುಸ್ತಾಫ ಕೆಂಪಿ, ಇಕ್ಬಾಲ್ ಎಲಿಮಲೆ, ಎಂ.ಎಸ್.ಮುಹಮ್ಮದ್, ಬಿ.ಎ.ನಜೀರ್ ಬೆಳ್ತಂಗಡಿ, ಯಾಸೀನ್ ಕುದ್ರೋಳಿ, ಅಬ್ಬಾಸ್ ಸುನೈನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.