
ಬೆಳ್ತಂಗಡಿ: ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಗ್ಯಾರಂಟಿ ಗ್ರಾಮೀಣ (ವಿಬಿಜಿ ರಾಮ್ ಜಿ)ಯ ಕುರಿತು ಜನಜಾಗೃತಿ ಮೂಡಿಸಲು ಬೆಳ್ತಂಗಡಿ ಶಾಸಕರ ಕಚೇರಿಯಿಂದ ಸಮಾಜ ಮಂದಿರದವರೆಗೆ ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಜಾಥಾ ನಡೆಯಿತು.
ಸಮಾಜ ಮಂದಿರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ, ‘ವಿಬಿಜಿ ರಾಮ್ ಜಿ ಯೋಜನೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಈ ಯೋಜನೆಗೆ ಕೇಂದ್ರ ಶೇ 60ರಷ್ಟು ಅನುದಾನ ನೀಡಿದರೆ ರಾಜ್ಯ ಸರ್ಕಾರ ಶೇ 40ರಷ್ಟು ಭರಿಸಬೇಕಾಗುತ್ತದೆ. ಆದರೆ, ಖಜಾನೆ ಖಾಲಿಯಾಗಿರುವ ಸರ್ಕಾರಕ್ಕೆ ಇನ್ನೂ ಎರಡೂವರೆ ವರ್ಷ ಅನುದಾನ ನೀಡಲು ಸಾಧ್ಯವಿಲ್ಲದಂತಾಗಿದೆ. ರಾಜ್ಯದ ಗ್ರಾಮ ಪಂಚಾಯಿತಿಗಳು ಕೇಂದ್ರ ಸರ್ಕಾರದ ಅನುದಾನದಿಂದ ಮಾತ್ರ ಜನಸೇವೆ ಮಾಡುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಕೇಂದ್ರದಿಂದ ಬಂದಿರುವ ₹ 1,200 ಕೋಟಿ ಎಲ್ಲಿಗೆ ವಿನಿಯೋಗ ಆಗಿದೆ, ಯಾರು ತಿಂದಿದ್ದಾರೆ? ಎಂಬುದೇ ಗೊತ್ತಿಲ್ಲ’ ಎಂದರು.
ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ಭ್ರಷ್ಟಾಚಾರ ನಡೆಯುತ್ತಿದೆ ಎಂದರು.
ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಕೇಂದ್ರ ಸರ್ಕಾರದ ಈ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಆದರೆ, ಅವರಿಗೆ ವಿಬಿಜಿ ರಾಮ್ ಜಿಯ ಬಗ್ಗೆ ಗೊತ್ತಿರಲು ಸಾಧ್ಯವಿಲ್ಲ. ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿಗಾಗಿ ಪೈಪೋಟಿ ನಡೆಯುತ್ತಿದೆ. ಅದರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಪ್ರತಿಭಟನೆಯ ನಾಟಕವಾಡುತ್ತಿದೆ’ ಎಂದರು.
ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ಶ್ರೀನಿವಾಸ್ ರಾವ್, ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜೋಯಲ್ ಮೆಂಡೋನ್ಸ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಮಹಿಳಾ ಕಾರ್ಯದರ್ಶಿ ವಸಂತಿ ಮಚ್ಚಿನ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಮನ್ ಕಿ ಬಾತ್ ಜಿಲ್ಲಾ ಪ್ರಮುಖ್ ಸೀತಾರಾಮ್ ಬೆಳಾಲ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಭಾಗವಹಿಸಿದ್ದರು.
ಲಾಯಿಲ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ ಲಾಯಿಲ, ರಾಜೇಶ್ ಪೆರ್ಮುಡ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.