ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಗ್ರಾಮದ ಅರಂಪಾದೆ ಎಂಬಲ್ಲಿ ಹಲವು ವರ್ಷಗಳಿಂದ ವಾಸ್ತವ್ಯ ಇದ್ದ ಒ.ಪಿ.ಜಾರ್ಜ್ ಎಂಬುವರ ರಬ್ಬರ್ ಕೃಷಿ ತೋಟವನ್ನು ಅರಣ್ಯ ಇಲಾಖೆಯವರು ತೆರವು ಮಾಡಿ ಗಿಡ ನೆಟ್ಟ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಮಾಹಿತಿ ಪಡೆದರು.
ಈ ಸಂಬಂಧ ನ್ಯಾಯಾಲಯದ ಮೂಲಕ ತಡೆಯಾಜ್ಞೆ ಪಡೆಯಲು ಸಹಕರಿಸುವುದಾಗಿ ಭರವಸೆ ನೀಡಿದರು.
ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಶಾಸಕ, 184 ಸರ್ವೆ ನಂಬರ್ ಜಾಗದಲ್ಲಿ ವಾಸ್ತವ್ಯ ಇರುವವರೆಲ್ಲರೂ ಒಟ್ಟಾಗಿ ತಮ್ಮ ದಾಖಲೆಗಳನ್ನು ನೀಡಿ. ಈ ಬಗ್ಯೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಆದೇಶ ಪಡೆಯಲು ಅವಕಾಶವಿದೆ. ಇದಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶಿಬಾಜೆಯ ಮುಖಂಡರಾದ ರತೀಶ್ ಬಿ., ವಿನಯಚಂದ್ರ ಜತೆಗಿದ್ದರು.
ಚಿನ್ನಾಭರಣ ಕಳವು
ಉಜಿರೆ: ನಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಲೂರು ಗ್ರಾಮದ ಮಂಜುಶ್ರೀನಗರ ನಿವಾಸಿ ಅವಿನಾಶ್ ಎಂಬುವರ ಮನೆಯ ಬೀಗ ಒಡೆದು, ಸುಮಾರು ₹9.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ.
ಮನೆಯವರೆಲ್ಲ ಅ.2ರಂದು ಮನೆಗೆ ಬೀಗ ಹಾಕಿ ಹೋಗಿದ್ದು ಅ.6ರಂದು ಬಂದು ನೋಡಿದಾಗ ಕಳವಾಗಿರುವುದು ಗೊತ್ತಾಗಿದೆ.
ಕಪಾಟಿನಲ್ಲಿಟ್ಟಿದ್ದ ಎರಡು ಎಳೆಯ ಚಿನ್ನದ ಕರಿಮಣಿಸರ, ಮುತ್ತಿನಹಾರ, ಬ್ರಾಸ್‌ಲೆಟ್, ಮಕ್ಕಳ ಎರಡು ಸರಗಳು, ಮೂರು ಚಿನ್ನದ ಉಂಗುರ ಸೇರಿ 149 ಗ್ರಾಂ. ಚಿನ್ನಾಭರಣ ಕಳವಾಗಿದೆ. ಅವಿನಾಶ್ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ನೆರಿಯ: ಮನೆ ಬೆಂಕಿಗಾಹುತಿ
ಉಜಿರೆ: ನೆರಿಯ ಗ್ರಾಮದ ನಿವಾಸಿ ಹರೀಶ್ ಎಂಬುವರ ಮನೆಗೆ ಸೋಮವಾರ ರಾತ್ರಿ ಬೆಂಕಿ ತಗುಲಿ ಮನೆಗೆ ಸಂಪೂರ್ಣವಾಗಿ ಹಾನಿಯಾಗಿದೆ.
ಮನೆಯವರೆಲ್ಲ ಬೇರೆ ಕಡೆ ಹೋಗಿದ್ದಾಗ ಅವಘಡ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಕಿರಣ್‌ಚಂದ್ರ ಪುಷ್ಪಗಿರಿ ಅವರು ಹಾನಿಯಾದ ಮನೆಯ ಕುಟುಂಬದವರಿಗೆ ₹ 25 ಸಾವಿರ ನೆರವು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.