ADVERTISEMENT

ಶಿಕ್ಷಣದಿಂದ ಮಕ್ಕಳಲ್ಲಿ ಶಿಸ್ತು, ದೇಶಭಕ್ತಿ: ಶಾಸಕ ವೇದವ್ಯಾಸ ಕಾಮತ್

ಸರ್ಕಾರಿ ಪದವಿಪೂರ್ವ ಕಾಲೇಜಿನ ತರಗತಿ ಕೊಠಡಿ ಉದ್ಘಾಟಿಸಿದ ಕಾಮತ್‌

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 7:38 IST
Last Updated 10 ಅಕ್ಟೋಬರ್ 2021, 7:38 IST
ಹಂಪನಕಟ್ಟೆಯ ಸರ್ಕಾರಿ ಪದವಿಪೂರ್ವ ಕಾಲೇಜು ಬೊಕ್ಕಪಟ್ಣದ ನೂತನ ತರಗತಿ ಕೊಠಡಿಗಳನ್ನು ಶಾಸಕ ವೇದವ್ಯಾಸ ಕಾಮತ್‌, ಮಾಜಿ ಮೇಯರ್‌ ದಿವಾಕರ್‌ ಉದ್ಘಾಟಿಸಿದರು. ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಪ್ರಾಚಾರ್ಯ ಡಾ. ಸಿಪ್ರಿಯನ್ ಮೊಂತೇರೋ ಇದ್ದರು
ಹಂಪನಕಟ್ಟೆಯ ಸರ್ಕಾರಿ ಪದವಿಪೂರ್ವ ಕಾಲೇಜು ಬೊಕ್ಕಪಟ್ಣದ ನೂತನ ತರಗತಿ ಕೊಠಡಿಗಳನ್ನು ಶಾಸಕ ವೇದವ್ಯಾಸ ಕಾಮತ್‌, ಮಾಜಿ ಮೇಯರ್‌ ದಿವಾಕರ್‌ ಉದ್ಘಾಟಿಸಿದರು. ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಪ್ರಾಚಾರ್ಯ ಡಾ. ಸಿಪ್ರಿಯನ್ ಮೊಂತೇರೋ ಇದ್ದರು   

ಮಂಗಳೂರು: ಶಿಕ್ಷಣವು ಮಕ್ಕಳಲ್ಲಿ ಕಲಿಕೆಯ ಜೊತೆಗೆ ಶಿಸ್ತು, ದೇಶಭಕ್ತಿ, ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸುತ್ತದೆ. ಮಕ್ಕಳೂ ಇವೆಲ್ಲದಕ್ಕೂ ಬದ್ಧರಾಗಿರಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಹಂಪನಕಟ್ಟೆಯ ಸರ್ಕಾರಿ ಪದವಿಪೂರ್ವ ಕಾಲೇಜು ಬೊಕ್ಕಪಟ್ಣದ ನೂತನ ತರಗತಿ ಕೊಠಡಿಗಳನ್ನು ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಅವರು ಮಾತನಾಡಿದರು.

ಎಲ್ಲ ವಿದ್ಯಾರ್ಥಿಗಳು ಸದ್ಗುಣಗಳನ್ನು ಮೈಗೂಡಿಸಿಕೊಂಡು ತಂದೆ - ತಾಯಿಯರನ್ನು ಗೌರವಿಸಿ, ತಮ್ಮ ಜೀವನ ರೂಪಿಸುವೆಡೆಗೆ ಗಮನ ಹರಿಸಬೇಕು. ಶಿಸ್ತು, ಸಾಮರಸ್ಯ, ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಸದೃಢ ಭಾರತಕ್ಕೆ ನಾಂದಿ ಆಗಬೇಕು ಎಂದು ಸಲಹೆ ನೀಡಿದರು.

ADVERTISEMENT

ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹ ಶಿಕ್ಷಣವನ್ನು ಹೊಂದಿರುವ ಏಕೈಕ ಪದವಿಪೂರ್ವ ಕಾಲೇಜನ್ನು ಉನ್ನತೀಕರಿಸಲು ಸರ್ಕಾರದಿಂದ ₹4.80 ಕೋಟಿ ಅನುದಾನವನ್ನು ಈಗಾಗಲೇ ಒದಗಿಸಲಾಗಿದ್ದು, ಕಾಮಗಾರಿಯು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣ ಸ್ಥಳಾವಕಾಶದ ಕೊರತೆ ಎದುರಾಗಿದ್ದು, ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಅಡ್ಡಿಯಾಗದಂತೆ ಅತೀ ತ್ವರಿತಗತಿಯಲ್ಲಿ 100 ಮಕ್ಕಳಿಗೆ ಆಶ್ರಯವಾಗುವಂತಹ ವಿಶಾಲ ಕೊಠಡಿಯನ್ನು ಕಟ್ಟಡದ ಎರಡನೇ ಅಂತಸ್ತಿನಲ್ಲಿ ನಿರ್ಮಿಸಲಾಗಿದೆ ಎಂದರು.

ಹೆಚ್ಚಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದನ್ನು ಕಂಡು ಮಧ್ಯಾಹ್ನದ ದಾಸೋಹ ಯೋಜನೆಯನ್ನು ಕಾಲೇಜಿನಲ್ಲಿ ಆರಂಭಿಸಲು ಶ್ರಮಿಸುವುದಾಗಿ ಆಶ್ವಾಸನೆ ನೀಡಿದರು. ಕೊಠಡಿ ನಿರ್ಮಿಸಿಕೊಟ್ಟ ದತ್ತ ಪ್ರಸಾದ್ ಬಿಲ್ಡರ್ಸ್ ಮಾಲೀಕ ಅವಿನಾಶ್ ಅಂಚನ್ ಅವರ ಕಾರ್ಯಕ್ಷಮತೆ ಹಾಗೂ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದು ತಿಳಿಸಿದರು.

ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಿಪ್ರಿಯನ್ ಮೊಂತೇರೋ, ಅಭ್ಯಾಸಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಲತಾ ಬಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಅಂಟೋನಿ ಮಸ್ಕರೇನಸ್‌ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ನಾಗೇಶ್ ನಾಯ್ಕ್ ಬಿ. ಸಹಕರಿಸಿದರು. ಕನ್ನಡ ಉಪನ್ಯಾಸಕ ರಘು ಇಡ್ಕಿದು ವಂದಿಸಿದರು. ಉಪನ್ಯಾಸಕಿ ಮಲ್ಲಿಕಾ ಎಂ. ನಿರೂಪಿಸಿದರು. ಉಪನ್ಯಾಸಕಿಯರಾದ ಯೋಗಿತಾ ಜಿ.ಕೆ. ಹಾಗೂ ಪ್ರೇಮರಾಣಿ ಕಾರ್ಯಕ್ರಮ ಆಯೋಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.