ADVERTISEMENT

ಅತಿಥಿ ಶಿಕ್ಷಕರ ಗೌರವಧನ ಪಾವತಿಸದಿದ್ದರೆ ಧರಣಿ: ಎಸ್.ಎಲ್. ಭೋಜೇಗೌಡ

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 2:53 IST
Last Updated 30 ಸೆಪ್ಟೆಂಬರ್ 2022, 2:53 IST

ಮಂಗಳೂರು: ದಸರಾ ಹಬ್ಬ ಮುಗಿಯುವುದರೊಳಗೆ ಅತಿಥಿ ಶಿಕ್ಷಕರ ಗೌರವಧನದ ಬಾಕಿ ಪಾವತಿಸದಿದ್ದರೆ ಅಕ್ಟೋಬರ್ 6ರಂದು ಬೆಂಗಳೂರಿನ ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಅತಿಥಿ ಶಿಕ್ಷಕರ ಗೌರವಧನವನ್ನು 10 ತಿಂಗಳಿನಿಂದ ಏಳು ತಿಂಗಳಿಗೆ ಕಡಿತಗೊಳಿಸಲಾಗಿದೆ. ಇದನ್ನು ಮೊದಲಿನಂತೆ 10 ತಿಂಗಳಿಗೆ ಏರಿಸಬೇಕು. ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದು, ಗೌರವಧನ ಪಾವತಿಗೆ ಹಣಕಾಸಿನ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದರೂ, ಇನ್ನೂ ಯಾಕೆ ಹಣ ಬಿಡುಗಡೆಯಾಗಿಲ್ಲ’ ಎಂದರು.

ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಶೇ 45ರಷ್ಟು ಶಿಕ್ಷಕರ ಕೊರತೆ ಇದೆ. ಕಾಲೇಜುಗಳಲ್ಲಿ ಶೇ 20ರಷ್ಟು ಮಾತ್ರವೇ ಕಾಯಂ ಉಪನ್ಯಾಸಕರಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಅತಿಥಿ ಶಿಕ್ಷಕರನ್ನೇ ಅವಲಂಬಿಸಿವೆ. ಈ ನಡುವೆ ಎನ್‌ಇಪಿ ಜಾರಿಗೊಳಿಸಿದ್ದು, ಮೂಲ ಸೌಕರ್ಯ ಇಲ್ಲದೆ ಗುಣಮಟ್ಟದ ಶಿಕ್ಷಣ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ADVERTISEMENT

ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿ ಸಂಭವಿಸಿದೆ. ಅಧಿಕಾರಿಗಳು ಈವರೆಗೂ ಹಾನಿಯ ಅಂದಾಜು ಪಟ್ಟಿ ತಯಾರಿಸಿಲ್ಲ. ಕೃಷಿಯನ್ನು ನಂಬಿರುವ ಜನರಿಗೆ ಆದಾಯವೇ ಇಲ್ಲದಂತಾಗಿದೆ. ಮನೆಗಳು ನಾಶವಾಗಿವೆ. ಸೇತುವೆಗಳು ಕೊಚ್ಚಿ ಹೋಗಿವೆ. ಪ್ರಾಕೃತಿಕ ವಿಕೋಪದಿಂದ ನಿರಂತರ ಸಮಸ್ಯೆ ಆಗುತ್ತಿದ್ದರೂ, ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಾಕೆ ಮಾಧವ ಗೌಡ, ಅಕ್ಷಿತ್ ಸುವರ್ಣ, ರತೀಶ್, ರಮೀಝಾ ಬಾನು, ಇಕ್ಬಾಲ್ ಅಹ್ಮದ್ ಮೂಲ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.