ADVERTISEMENT

ಮೋದಿಗೆ ಪ್ರೇರಣೆಯಾದ ನಾರಾಯಣಗುರು ಬಿಜೆಪಿಗೆ ಬೇಡವಾದರೇ: ಹರೀಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 19 ಮೇ 2022, 2:30 IST
Last Updated 19 ಮೇ 2022, 2:30 IST

ಮಂಗಳೂರು: ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರೇರಣೆಯಾದ ಬ್ರಹ್ಮಶ್ರೀ ನಾರಾಯಣ ಗುರುಗಳು ರಾಜ್ಯ ಸರ್ಕಾರಕ್ಕೆ ಬೇಡವಾದರೇ? ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನಾರಾಯಣ ಗುರು ಮತ್ತು ಪೆರಿಯಾರ್ ಅವರ ಕುರಿತಾದ ಪಠ್ಯಭಾಗವನ್ನು ಕೈಬಿಟ್ಟಿದ್ದು ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2022ರ ಏ.4ರಂದು ಶಿವಗಿರಿ ಯಾತ್ರೆಯ 90ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ‘ಮನುಜಕುಲ ಒಂದೇ ಎನ್ನುವ ನಾರಾಯಣ ಗುರುಗಳ ಬೋಧನೆಯ ಸಂದೇಶಗಳನ್ನು ಜನರು ಅನುಸರಿಸಿದರೆ ಜಗತ್ತಿನ ಯಾವುದೇ ಶಕ್ತಿಯೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಅವರದೇ ಆಡಳಿತ ನಡೆಸುವ ರಾಜ್ಯ ಬಿಜೆಪಿ ಸರ್ಕಾರ ನಾರಾಯಣ ಗುರುಗಳ ಪಠ್ಯವನ್ನೇ ಕೈಬಿಟ್ಟಿದೆ. ಹಾಗಿರುವಾಗ ಮೋದಿ ಭಾಷಣದ ಹೇಳಿಕೆ ನಾಟಕೀಯವೇ ಎಂದು ಪ್ರಶ್ನಿಸಿದ್ದಾರೆ.

ಸಮಾಜ ಸುಧಾರಕ ನಾರಾಯಣ ಗುರು ಹಾಗೂ ಪೆರಿಯಾರ್ ಅವರ ಸಂದೇಶಗಳಿರುವ ಪಠ್ಯ ಭಾಗವನ್ನು ಪಠ್ಯ ಪರಿಷ್ಕರಣ ಸಮಿತಿ ಕೈಬಿಟ್ಟಿರುವುದು ಖಂಡನೀಯ. ಇದು ಸ್ಥಾಪಿತ ಹಿತಾಸಕ್ತಿಗಳ ಓಲೈಕೆ ಮಾಡುವ ಬಿಜೆಪಿ ಸರ್ಕಾರದ ಮುಖವಾಡವನ್ನು ಅನಾವರಣಗೊಳಿಸಿದೆ. ಕೂಡಲೇ ಶಿಕ್ಷಣ ಸಚಿವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಬೇಕು. ಮಹಾನ್ ನಾಯಕರ ಪಠ್ಯ ಕೈಬಿಟ್ಟಿದ್ದರೆ ಕೂಡಲೇ ಸೇರ್ಪಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿರೋಧವನ್ನು ಎದುರಿಸಬೇಕಾದೀತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.