ADVERTISEMENT

ಜನರ ಕಲ್ಯಾಣ ನಿರ್ಲಕ್ಷಿಸಿದ ಕೇಂದ್ರ ಸರ್ಕಾರ

ಉದ್ಯೋಗ ಖಾತರಿ ಅನುದಾನ ಕಡಿತ: ಐವನ್‌ ಡಿಸೋಜ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 13:48 IST
Last Updated 2 ಫೆಬ್ರುವರಿ 2020, 13:48 IST
ಐವನ್‌ ಡಿಸೋಜ
ಐವನ್‌ ಡಿಸೋಜ   

ಮಂಗಳೂರು: ಕೇಂದ್ರ ಸರ್ಕಾರದ ಮಂಡಿಸಿರುವ ಬಜೆಟ್‌ ಜನ ವಿರೋಧಿ ಮತ್ತು ರೈತ ವಿರೋಧಿಯಾಗಿದ್ದು, ಜನರ ಕಲ್ಯಾಣವನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್‌ ಡಿಸೋಜ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಜೆಟ್‌ನಲ್ಲಿ ರಾಜ್ಯಕ್ಕೆ ಮಹತ್ತರ ಕೊಡುಗೆ ಸಿಗಬಹುದು ಎಂಬ ನಿರೀಕ್ಷೆ ಇತ್ತು. ರಾಜ್ಯವನ್ನು ಪ್ರತಿನಿಧಿಸುತ್ತಿರುವ ಹಣಕಾಸು ಸಚಿವರು, 25 ಸಂಸದರು ಮತ್ತು ಪ್ರಭಾವಿ ಮಂತ್ರಿಗಳು ಇದ್ದಾಗ್ಯೂ, ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ. ಬಜೆಟ್ ನಿರಾಶಾದಾಯಕವಾಗಿದೆ’ ಎಂದು ದೂರಿದರು.

ದೇಶದಲ್ಲಿ ರೈತರ ಜನಸಂಖ್ಯೆ 80 ಕೋಟಿಯಾಗಿದ್ದು, ಕೃಷಿ ಕ್ಷೇತ್ರ, ರೈತರ ಅಭ್ಯುದಯಕ್ಕಾಗಿ ಮಹತ್ತರ ಯೋಜನೆಗಳನ್ನು ರೂಪಿಸಿಲ್ಲ. ಹೆಚ್ಚಿನ ಅನುದಾನವನ್ನೂ ಘೋಷಿಸಿಲ್ಲ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸುಗಳ ಬಗ್ಗೆಯೂ ಬಜೆಟ್ ಉಲ್ಲೇಖಿಸಿಲ್ಲ ಎಂದರು.

ADVERTISEMENT

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕಳೆದ ವರ್ಷ ₹71 ಸಾವಿರ ಕೋಟಿ ನೀಡಿದ್ದ ಕೇಂದ್ರ ಸರ್ಕಾರ, ಈ ಬಾರಿಯ ಬಜೆಟ್‌ನಲ್ಲಿ ₹61,500 ಕೋಟಿ ಒದಗಿಸಿದೆ. ಆಹಾರ ಭದ್ರತಾ ಯೋಜನೆಯಡಿ ಸಬ್ಸಿಡಿ ಕಡಿಮೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಜಿಎಸ್‌ಟಿ ಅನುದಾನ ಇನ್ನೂ ₹7 ಸಾವಿರ ಕೋಟಿ ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡಬೇಕಿದೆ. ಕಳೆದ ಆಗಸ್ಟ್‌ನಿಂದ 27 ವಿವಿಧ ಇಲಾಖೆಗಳಿಗೆ ರೂಪದಲ್ಲಿ ರಾಜ್ಯಕ್ಕೆ ಬರಬೇಕಿದ್ದ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯಕ್ಕೆ ನೀಡಬೇಕಿರುವ ₹3,500 ಕೋಟಿ ಬಾಕಿ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಆಸ್ತಿ ಸೃಷ್ಟಿಯಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರು ಕಳೆದ ಹಲವು ತಿಂಗಳುಗಳಿಂದ ವೇತನಕ್ಕಾಗಿ ಕಾಯುವಂತಾಗಿದೆ ಎಂದು ದೂರಿದರು.

ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಅಡಿಕೆ ಮಂಡಳಿಯನ್ನು ರಚಿಸುವ ಬಗ್ಗೆಯೂ ಪ್ರಸ್ತಾಪವಿಲ್ಲ. ಪ್ರತ್ಯೇಕ ಮಂಗಳೂರಿಗೆ ರೈಲ್ವೆ ವಿಭಾಗದ ಬೇಡಿಕೆಯೂ ಈಡೇರಿಲ್ಲ. ಕರಾವಳಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಅನುದಾನ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಈ ಮೂಲಕ ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಕೇಂದ್ರವು ನಿರ್ಲಕ್ಷಿಸಿದೆ ಎಂದು ತಿಳಿಸಿದರು.

‘ತರಾತುರಿಯಲ್ಲಿ ಉದ್ಘಾಟನೆ'

ಪಂಪ್‌ವೆಲ್ ಫ್ಲೈಓವರ್‌ನ ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರತಿಪಕ್ಷಗಳ ಸದಸ್ಯರ ಆರೋಪವನ್ನು ಅಡಗಿಸಲು ಫ್ಲೈಓವರ್ ಅನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗಿದೆ ಎಂದು ಐವನ್‌ ಡಿಸೋಜ ದೂರಿದರು.

ಸರ್ವಿಸ್‌ ರಸ್ತೆ, ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿಯು ಮುಂದಿನ ವಾರ ಮತ್ತೊಮ್ಮೆ ಪಂಪ್‌ವೆಲ್‌ಗೆ ಭೇಟಿ ನೀಡಲಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಪರಿಶೀಲಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.