ADVERTISEMENT

ಮಂಗಳೂರು ಬಂದರಿಗೆ ಮೊಬೈಲ್‌ ಸ್ಕ್ಯಾನರ್‌

ಕಸ್ಟಮ್ಸ್‌ ಬೆಂಗಳೂರು ವಲಯದ ಮುಖ್ಯ ಆಯುಕ್ತ ಎ.ಕೆ.ಜ್ಯೋತಿಷಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 10:27 IST
Last Updated 9 ಜುಲೈ 2019, 10:27 IST

ಮಂಗಳೂರು: ನವ ಮಂಗಳೂರು ಬಂದರಿನ ಮೂಲಕ ನಡೆಯುವ ವಹಿವಾಟಿನಲ್ಲಿ ಕಳ್ಳಸಾಗಣೆ ಪತ್ತೆಹಚ್ಚಲು ₹ 30 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮೊಬೈಲ್‌ ಅಳವಡಿಸಲಾಗುತ್ತಿದೆ ಎಂದು ಕಸ್ಟಮ್ಸ್‌ ಬೆಂಗಳೂರು ವಲಯದ ಮುಖ್ಯ ಆಯುಕ್ತ ಎ.ಕೆ.ಜ್ಯೋತಿಷಿ ತಿಳಿಸಿದರು.

ನಗರದ ಹಳೆ ಬಂದರು ಪ್ರದೇಶದ ಹಳೆಯ ಕಸ್ಟಮ್ಸ್‌ ಕಚೇರಿಯ ನವೀಕೃತ ಕಟ್ಟಡವನ್ನು ಮಂಗವಾರ ಉದ್ಘಾಟಿಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಹೊಸ ಸ್ಕ್ಯಾನರ್‌ ಖರೀದಿ ಮುಗಿದಿದೆ.ಎರಡು ತಿಂಗಳೊಳಗೆ ಅದನ್ನು ಅಳವಡಿಸುವ ಕೆಲಸ ಮುಗಿಯಲಿದೆ. ಯಂತ್ರದ ಪೂರೈಕೆ, ಅಳವಡಿಕೆ, ನಮ್ಮ ಸಿಬ್ಬಂದಿಗೆ ತರಬೇತಿ ಮತ್ತು ಹತ್ತು ವರ್ಷಗಳ ನಿರ್ವಹಣೆಗಾಗಿ ₹ 30 ಕೋಟಿ ವ್ಯಯಿಸಲಾಗುತ್ತಿದೆ’ ಎಂದರು.

ಸರಕು ಪರಿಶೀಲನಾ ಕೇಂದ್ರದಲ್ಲಿ ಮೊಬೈಲ್‌ ಸ್ಕ್ಯಾನರ್‌ ಅಳವಡಿಸಲಾಗುವುದು. ಈಗ ‘ರಿಸ್ಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’ ಮೂಲಕ ಶಂಕಿತ ಸರಕುಗಳನ್ನು ಗುರುತಿಸಿ, ಬಿಚ್ಚಿ ಶೋಧಿಸಲಾಗುತ್ತಿದೆ. ಮೊಬೈಲ್‌ ಸ್ಕ್ಯಾನರ್‌ ಅಳವಡಿಕೆ ಬಳಿಕ ಯಂತ್ರವೇ ಶಂಕಿತ ಸರಕುಗಳನ್ನು ‍ಪತ್ತೆಮಾಡಿ, ಮಾಹಿತಿ ನೀಡುತ್ತದೆ. ಆ ಬಳಿಕ ಹೆಚ್ಚಿನ ಶೋಧ ನಡೆಸಲಾಗುತ್ತದೆ. ಇದರಿಂದ ಮಾನವ ಹಸ್ತಕ್ಷೇಪ ಮತ್ತು ಶ್ರಮದ ಬಳಕೆ ಕಡಿಮೆಯಾಗುತ್ತದೆ ಎಂದು ವಿವರಿಸಿದರು.

ADVERTISEMENT

ಕಸ್ಟಮ್ಸ್‌ ಹೌಸ್‌ ನಿರ್ಮಾಣ: ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್‌) ಬಳಿ ಕಸ್ಟಮ್ಸ್‌ ಹೌಸ್‌ ನಿರ್ಮಾಣವಾಗಲಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ ಜಮೀನು ಮಂಜೂರಾಗಿದ್ದು, ಈ ಆರ್ಥಿಕ ವರ್ಷದ ಅಂತ್ಯದೊಳಗೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ದೊರಯಲಿದೆ ಎಂದು ಜ್ಯೋತಿಷಿ ತಿಳಿಸಿದರು.

‘ಬೆಂಗಳೂರಿನಲ್ಲಿ ಪ್ರತ್ಯೇಕ ಕಸ್ಟಮ್ಸ್‌ ಕೇಂದ್ರವಿಲ್ಲ. ಕೆಐಎಎಲ್‌ ಮೂಲಕ ವಹಿವಾಟು ನಡೆಸುವವರು ಮತ್ತು ಪ್ರಯಾಣಿಕರು ಕಸ್ಟಮ್ಸ್‌ಗೆ ಸಂಬಂಧಿಸಿದ ವಿಷಯಗಳಿಗೆ ಕ್ವೀನ್ಸ್‌ ರಸ್ತೆಯ ಕಸ್ಟಮ್ಸ್‌ ಕಚೇರಿಗೆ ಬರಬೇಕಾದ ಅನಿವಾರ್ಯತೆ ಇದೆ. ಇದನ್ನು ತಪ್ಪಿಸಲು ವಿಮಾನ ನಿಲ್ದಾಣದ ಸಮೀಪವೇ ಕಸ್ಟಮ್ಸ್‌ ಕೇಂದ್ರ ನಿರ್ಮಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.