ಮಂಗಳೂರು: ‘ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಸಮುದಾಯದ ‘ಮೊಗೇರ’ ಜಾತಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ–1ರಲ್ಲಿ ಸ್ಥಾನಪಡೆದಿದ್ದು, ಅವರನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಹುನ್ನಾರ ನಡೆದಿದೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಉಮೇಶಚಂದ್ರ ಆರೋಪಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಹವಾಲು ಆಲಿಸಲು ಇಲ್ಲಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯ ಮೊಲಬೇಟೆಯಾಡುವ ಪರಿಶಿಷ್ಟ ಜಾತಿಯ ಹೆಸರು ‘ಮುಗೇರ’. ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಜಾತಿಯ ಹೆಸರು ‘ಮೊಗೇರ’. ಇಂಗ್ಲಿಷ್‌ನಲ್ಲಿ ಎರಡೂ ಸಮುದಾಯಗಳ ಹೆಸರನ್ನು ಒಂದೇ ರೀತಿ (Moger) ಬರೆಯಲಾಗುತ್ತಿದೆ. ಮೊಗೇರರು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ದುರ್ಬಳಕೆ ಮಾಡಿಕೊಂಡಿದ್ದರು. ಸುಪ್ರೀಂ ಕೋರ್ಟ್‌ವರೆಗೂ ಕಾನೂನು ಹೋರಾಟ ಮಾಡಿ ಅವುಗಳನ್ನು ರದ್ದುಪಡಿಸಲು ಕ್ರಮವಹಿಸಲಾಗಿದೆ’ ಎಂದರು.
‘ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸು ಹಾಗೂ ಅದನ್ನು ಪರಿಷ್ಕರಣೆ ಮಾಡಿದ ರಾಜ್ಯ ಸಂಪುಟ ಸಭೆ ನಿರ್ಣಯದ ಆಧಾರದಲ್ಲಿ ‘ಮೊಗೇರ’ ಜಾತಿಯನ್ನು ಬಲಗೈ– ಛಲವಾದಿ ಗುಂಪಿಗೆ ಸೇರಿಸಲಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಮೊಲಬೇಟೆ ಕಸುಬಿನ ಪರಿಶಿಷ್ಟರಿಗೆ ಮಾತ್ರ ಅನ್ವಯ ಎಂಬುದನ್ನು ಎಲ್ಲೂ ಸ್ಪಷ್ಟಪಡಿಸಿಲ್ಲ. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ‘ಪ್ರಜಾವಾಣಿ’ ಪತ್ರಿಕೆಯ ಆ.22ರ ಸಂಚಿಕೆಯಲ್ಲಿ ಜಾಹೀರಾತು ಪ್ರಕಟಿಸಿದ್ದು, ಅದರಲ್ಲಿ ‘ಮೊಗೇರ್’ ಜಾತಿ ಹೆಸರನ್ನು ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಿಂದ ಕೈಬಿಟ್ಟಿದೆ. ಪ್ರತಿಕ್ರಿಯಿಸಲು 7 ದಿನಗಳ ಕಾಲಾವಕಾಶ ಮಾತ್ರ ನೀಡಲಾಗಿದೆ’ ಎಂದು ಆರೋಪಿಸಿದರು.
‘ರಾಜ್ಯದ ಹಿರಿಯ ಐಎಎಸ್ ಅಧಿಕಾರಿ, ಸಚಿವರೊಬ್ಬರು ಸೇರಿದಂತೆ ಏಳು ಮಂದಿ ಇದರಲ್ಲಿ ಶಾಮೀಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಉಮೇಶ್‌ಚಂದ್ರ ಒತ್ತಾಯಿಸಿದರು.
‘ನೀವು ನನ್ನ ದೂರು ದಾಖಲಿಸಿಕೊಂಡು ಕ್ರಮಕೈಗೊಳ್ಳದಿದ್ದರೆ ಇಲ್ಲೇ ಮಲಗಿ ಧರಣಿ ನಡೆಸುತ್ತೇನೆ’ ಎಂದು ಅವರು ಎಚ್ಚರಿಸಿದರು.
‘ಈ ವಿಚಾರವಾಗಿ ಸರ್ಕಾರದ ಗಮನ ಸೆಳೆಯುತ್ತೇವೆ’ ಎಂದು ಡಿಸಿಪಿ (ಕಾನೂನು ಸುವ್ಯವಸ್ಥೆ) ಎಚ್.ಎನ್. ಮಿಥುನ್ ತಿಳಿಸಿದರು.
ಮಹಿಳೆಯರಿಗೆ ಲೈಂಗಿಕ ಕಿರುಕುಳ: ನಗರದ ಲೇಡಿಗೋಷನ್, ಬಲ್ಮಠ, ವಿಶ್ವವಿದ್ಯಾಲಯ ಕಾಲೇಜುಗಳ ಬಳಿ ಸಂಜೆ ಹೊತ್ತು ಬಸ್‌ಗೆ ಕಾಯುವ ಮಹಿಳೆಯರಿಗೆ ಕೆಲವರು ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರ ದೇಹದ ಮುಟ್ಟಬಾರದ ಸ್ಥಳಗಳನ್ನು ಮುಟ್ಟಿ ಮುಜುಗರ ಉಂಟು ಮಾಡಿದ್ದಾರೆ. ಲೇಡಿಗೋಷನ್ ಆಸ್ಪತ್ರೆ ಬಳಿ ನಶೆಯಲ್ಲಿರುವ ಕೆಲ ವ್ಯಕ್ತಿಗಳು ಮಹಿಳೆಯರ ಮೈಮೇಲೆ ಬೀಳುತ್ತಾರೆ. ಈ ಪ್ರದೇಶಗಳು ಸಿಸಿಟಿವಿ ಕ್ಯಾಮೆರಾದ ಕಣ್ಗಾವಲಿನಲ್ಲೂ ಇಲ್ಲ. ನಗರದಲ್ಲೇ ಈ ರೀತಿ ಆದರೆ ಮಹಿಳೆಯರಿಗೆ ರಕ್ಷಣೆ ಇದೆಯೇ’ ಎಂದು ದಲಿತ ಮುಖಂಡರೊಬ್ಬರು ಪ್ರಶ್ನಿಸಿದರು.
‘ಈ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಿ ಇಂತಹವರ ಮೇಲೆ ನಿಗಾ ಇಡುತ್ತೇವೆ. ಯಾವುದೇ ಕಾರಣಕ್ಕೂ ಬಿಡುವ ಮಾತೆ ಇಲ್ಲ’ ಎಂದು ಡಿಸಿಪಿ ಮಿಥುನ್ ತಿಳಿಸಿದರು.
ಸಭೆಯಲ್ಲಿ ಸಭೆಯಲ್ಲಿ ಡಿಸಿಪಿ ಕೆ.ರವಿಶಂಕರ್, ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಎಸ್ಪಿ ಎ.ಎಸ್. ಭೂಮರಡ್ಡಿ, ವಿದ್ಯಾಧರ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ದಲಿತ ನಾಯಕರು ಭಾಗವಹಿದ್ದರು.
ಎಸ್.ಸಿ ಮಹಿಳೆಗೆ ಕಿರುಕುಳ– ಕ್ರಮಕ್ಕೆ ಆಗ್ರಹ
ನಗರದ ಅತ್ತಾವರದ ಪರಿಶಿಷ್ಟ ಜಾತಿಯ ಮಹಿಳೆಗೆ ವಿದೇಶದಲ್ಲಿ ನೆಲೆಸಿರುವ ವ್ಯಕ್ತಿ ಹಾಗೂ ಸ್ಥಳೀಯ ಮಹಿಳೆಯೊಬ್ಬರು ಕಿರಕುಳ ನೀಡುತ್ತಿರುವ ಬಗ್ಗೆ ದೂರು ನೀಡಿದರೂ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದಲಿತ ಸಂಘಟನೆಗಳ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು. ದಲಿತ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಸ್ಥಳೀಯ ಮಹಿಳೆ ವಿದೇಶದಲ್ಲಿರುವ ವ್ಯಕ್ತಿಗೆ ನೀಡಿದ್ದಾರೆ. ಆ ವ್ಯಕ್ತಿಯು ಅವ್ಯಾಚ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಮಾನಸಿಕ ಹಿಂಸೆ-ಕಿರುಕುಳ ನೀಡಿದ್ದಲ್ಲದೇ ಜೀವ ಬೆದರಿಕೆಯನ್ನೂ ಒಡ್ಡಿದ್ದಾನೆ. ದೂರು ನೀಡಿದ ಎರಡು ವಾರ ಕಳೆದರೂ ಆರೋಪ ವಿರುದ್ಧ ಕ್ರಮವಾಗಿಲ್ಲ. ಇಂತಹದ್ದೇ ಕಿರುಕುಳ ಬೇರೆ ಜಾತಿಯವರಿಗೆ ಆಗುತ್ತಿದ್ದರೆ ಪೊಲೀಸರು ಸುಮ್ಮನೆ ಬಿಡುತ್ತಿದ್ದರೇ’ ಎಂದು ದಲಿತ ವಮುಖಂಡ ಜಗದೀಶ ಪಾಂಡೇಶ್ವರ ಪ್ರಶ್ನಿಸಿದರು. ‘ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಏಳು ಮಂದಿಯನ್ನು ವಿದೇಶದಿಂದ ಇಲ್ಲಿಗೆ ಕರೆಸಿಕೊಂಡು ಬಂಧಿಸಲಾಗಿದೆ. ಆದರೆ ದಲಿತ ಮಹಿಳೆಗೆ ಈಗಲೂ ಕಿರುಕುಳ ನೀಡುತ್ತಿರುವ ವ್ಯಕ್ತಿಯ ಬಂಧನಕ್ಕೆ ಮೀನಮೇಷ ಏಕೆ’ ಎಂದು ದಲಿತ ಮುಖಂಡರು ಪ್ರಶ್ನಿಸಿದರು.
‘ಡಿ.ಜೆ. ನಿಷೇಧ ಹಿಂಪಡೆಯದಿರಿ’
ಧಾರ್ಮಿಕ ಹಬ್ಬಗಳ ಸಾರ್ವಜನಿಕ ಆಚರಣೆ ಸಂದರ್ಭದಲ್ಲಿ ಡಿ.ಜೆ. ಬಳಕೆಗೆ ಪೊಲೀಸ್ ಇಲಾಖೆ ನಿರ್ಬಂಧ ಹೇರಿದ್ದಕ್ಕೆ ದಲಿತ ಸಂಘಟನೆಗಳ ಪ್ರಮುಖರು ಅಭಿನಂದನೆ ಸಲ್ಲಿಸಿದರು. ಈ ನಿರ್ಬಂಧ ತೆರವಿಗೆ ರಾಜಕಾರಣಿಗಳು ಹಾಗೂ ಪ್ರಭಾವಿಗಳು ಏನೇ ಒತ್ತಡ ಹೇರಿದರೂ ಈ ನಿರ್ಬಂಧವನ್ನು ತೆರವು ಮಾಡಬಾರದು ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.