ADVERTISEMENT

‘ನಾಳೆ ಮೂಡುಬಿದಿರೆ ಕಂಬಳ: 280 ಜೋಡಿ ಕೋಣಗಳ ನಿರೀಕ್ಷೆ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 7:57 IST
Last Updated 16 ಡಿಸೆಂಬರ್ 2023, 7:57 IST
ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿ ಶುಕ್ರವಾರ ನಡೆದ ಕಂಬಳ ಸಿದ್ಧತೆ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು
ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿ ಶುಕ್ರವಾರ ನಡೆದ ಕಂಬಳ ಸಿದ್ಧತೆ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು   

ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ 21ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ ಡಿ.17ರಂದು ನಡೆಯಲಿದ್ದು ಸುಮಾರು 280 ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಿಗ್ಗೆ 7 ಗಂಟೆಗೆ ಚೌಟರ ಅರಮನೆಯ ಕುಲದೀಪ್ ಅವರು ಕಂಬಳವನ್ನು ಉದ್ಘಾಟಿಸಲಿದ್ದು, ಅಲಂಗಾರು ಮಹಾಲಿಂಗೇಶ್ವರ ದೇವಳದ ಅರ್ಚಕ ಈಶ್ವರ ಭಟ್, ಅಲಂಗಾರು ಚರ್ಚ್‌ ಧರ್ಮ ಗುರು ವಾಲ್ಟರ್ ಡಿಸೋಜ, ಪುತ್ತಿಗೆ ಮಸೀದಿಯ ಮೌಲಾನ ಝಿಯಾವುಲ್ಲ್ ಹಕ್ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ ಎಂದರು.

ಸಂಜೆ 5 ಗಂಟೆಗೆ ನಡೆಯುವ ಸಭಾಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಗಾಲಿ ಜನಾರ್ದನ ರೆಡ್ಡಿ, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಬರೋಡ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ಬಹುಭಾಷಾ ಸಿನಿಮಾ ನಟ ಸುಮನ್ ತಲ್ವಾರ್, ಮಾಣಿ ಮಹಾಬಲ ಶೆಟ್ಟಿ, ಕಂಬಳ ಕೋಣಗಳ ಹಿರಿಯ ಯಜಮಾನ ಸಾಣೂರು ಸುಂದರ ಆಚಾರ್ಯ, ಕಂಬಳದ ಬರಹಗಾರ ಸಂಕಪ್ಪ ಶೆಟ್ಟಿ, ಗಂತಿನಲ್ಲಿ ಸಹಕರಿಸುತ್ತಿರುವ ದಾಮಣ್ಣ ಕಡಂದಲೆ ಅವರನ್ನು ಸನ್ಮಾನಿಸಲಾಗುವುದು ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಹೇಳಿದರು.

ಶೂನ್ಯ ತ್ಯಾಜ್ಯ ಕಂಬಳ: ಒಂಟಿಕಟ್ಟೆ ಕಂಬಳವನ್ನು ಶೂನ್ಯ ತ್ಯಾಜ್ಯ ಕಂಬಳವನ್ನಾಗಿ ಆಯೋಜಿಸಲು ನಿರ್ಧರಿಸಲಾಗಿದ್ದು, ಕಂಬಳದ ವ್ಯಾಪಾರಿಗಳು ಏಕಬಳಕೆಯ ವಸ್ತುಗಳ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ತಿಳಿಸಿದರು.

ಕಂಬಳ ಸಮಿತಿ ಪ್ರಮುಖರಾದ ರಂಜಿತ್ ಪೂಜಾರಿ, ಜಗದೀಶ್ ಅಧಿಕಾರಿ, ನಾಗರಾಜ ಪೂಜಾರಿ, ಈಶ್ವರ್ ಕಟೀಲ್, ಸುನಿಲ್ ಆಳ್ವ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.