ADVERTISEMENT

ಮೂಡುಬಿದಿರೆ ಪುರಸಭೆಯಿಂದ ವಾಟ್ಸ್‌ಆ್ಯಪ್‌ ಸಂಖ್ಯೆ ಬಿಡುಗಡೆ

ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ₹ 10 ಸಾವಿರದವರೆಗೆ ದಂಡ 

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 4:11 IST
Last Updated 25 ನವೆಂಬರ್ 2025, 4:11 IST
ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಕೋಟೆಬಾಗಿಲಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಎಸೆದ ಕಸ
ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಕೋಟೆಬಾಗಿಲಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಎಸೆದ ಕಸ   

ಮೂಡುಬಿದಿರೆ: ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ಪರಿಸರ ಮಾಲಿನ್ಯ ಉಂಟು ಮಾಡುವವರನ್ನು ಪತ್ತೆ ಹಚ್ಚಿ ಅಂಥವರ ವಿರುದ್ಧ ದಂಡ ವಿಧಿಸುವ ಪ್ರಕ್ರಿಯೆ ಪುರಸಭೆಯಿಂದ ಆರಂಭವಾಗಿದೆ. ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲು ವಾಟ್ಸ್‌ಆ್ಯಪ್‌ ಸಂಖ್ಯೆ ಬಿಡುಗಡೆ ಮಾಡಿದೆ.

ಕಸ ಸಂಗ್ರಹಿಸುವ ಪುರಸಭೆ ವಾಹನ ಮನೆ ಮನೆಗೆ ತೆರಳುತ್ತಿದ್ದರೂ ಕೆಲವರು ವಾಹನಕ್ಕೆ ಕಸ ನೀಡದೆ ಮನೆಯ ಅಕ್ಕಪಕ್ಕದಲ್ಲಿ ಎಸೆಯುತ್ತಿದ್ದಾರೆ. ಇನ್ನು ಕೆಲವರು ಮನೆಯಲ್ಲಿ, ಹೋಟೆಲ್‌ನಲ್ಲಿ ಉತ್ಪತ್ತಿಯಾಗುವ ಕಸ, ತ್ಯಾಜ್ಯವನ್ನು ಪುರಸಭೆ ವಾಹನಕ್ಕೆ ನೀಡದೆ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಿದ್ದಾರೆ. ಈ ಬಗ್ಗೆ ಇತ್ತೀಚಿನ ಪುರಸಭೆ ಸಾಮಾನ್ಯ ಸಭೆಯಲ್ಲೂ ಗಂಭೀರ ಚರ್ಚೆ ನಡೆದಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿತ್ತು.

ಈ ಬಗ್ಗೆ ಕಾರ್ಯಪ್ರವೃತ್ತರಾದ ಪುರಸಭೆ ಅಧಿಕಾರಿಗಳು ಪುರಸಭೆ ವ್ಯಾಪ್ತಿಯ ಪ್ರಮುಖ 15 ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಸ ಎಸೆಯುವವರ ಮೇಲೆ ನಿಗಾ ಇಟ್ಟಿದ್ದಾರೆ. ಪುರಸಭೆ ಕಚೇರಿಯಲ್ಲಿ ಇದರ ನಿಯಂತ್ರಣ ವ್ಯವಸ್ಥೆ ಇದ್ದು, ಆಗಾಗ್ಗೆ ಪರಿಶೀಲಿಸಲಾಗುತ್ತಿದೆ.

ADVERTISEMENT

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪುರಸಭೆಯು ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ಕಂಡು ಬಂದರೆ ಅದರ ಫೊಟೊ ತೆಗೆದು ಪುರಸಭೆಯ ಅಧಿಕೃತ ವಾಟ್ಸ್‌ಆ್ಯಪ್‌  ಸಂಖ್ಯೆ 9632187159ಗೆ ಕಳುಹಿಸಿಕೊಡುವಂಥೆ ಸಾರ್ವಜನಿಕರನ್ನು ಕೇಳಿಕೊಂಡಿದೆ. ಈ ರೀತಿ ಕಸ ಎಸೆದವರನ್ನು ಪತ್ತೆ ಹಚ್ಚಿ ಅವರಿಗೆ ಗರಿಷ್ಠ ₹ 10 ಸಾವಿರದವರೆಗೆ ದಂಡ ವಿಧಿಸಲು ಪುರಸಭೆ ಮುಂದಾಗಿದೆ. ಈಗಾಗಲೇ ಐದು ಪ್ರಕರಣಗಳಲ್ಲಿ ದಂಡ ವಿಧಿಸಿದೆ. ಈ ಬಗ್ಗೆ ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿಡಲಾಗುವುದು. ದಂಡ ಪಾವತಿಸದೆ ಇದ್ದರೆ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.