ADVERTISEMENT

ಬೆಳಕಿನ ಓಕುಳಿಯಲ್ಲಿ ಮೊಸರು ಕುಡಿಕೆ ವೈಭವ

ಕದ್ರಿ, ಅತ್ತಾವರ, ಕಾವೂರು, ಕೊಟ್ಟಾರ, ತಲಪಾಡಿಯಲ್ಲಿ ಮುಗಿಲುಮುಟ್ಟಿದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 17:04 IST
Last Updated 7 ಸೆಪ್ಟೆಂಬರ್ 2023, 17:04 IST

ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಎರಡು ದಿನಗಳ ಸಡಗರಕ್ಕೆ ಗುರುವಾರ ಮುಸ್ಸಂಜೆ ನಡೆದ ಮೊಸರು ಕುಡಿಕೆ ವೈಭವ ಮೇಳೈಸಿತು. ಕಿಕ್ಕಿರಿದು ಸೇರಿದ್ದ ಜನರು ಬೆಳಕಿನ ಓಕುಳಿಯಲ್ಲಿ ಮಿಂದೆದ್ದರು.

ಕದ್ರಿ ಶ್ರೀಕೃಷ್ಣ ಜನ್ಮಮಹೋತ್ಸವ ಸಮಿತಿ ಆಶ್ರಯದಲ್ಲಿ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯ ನಂತರ ಅಮರಾನ್ ಬ್ಯಾಟರೀಸ್ ಹಂಚಿಕೆದಾರ ಸುನಿಲ್ ಕುಮಾರ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಕತ್ತಲನ್ನು ಸೀಳಿದ ಅಲಂಕೃತ ವಿದ್ಯುದ್ದೀಪಗಳು, ಇವುಗಳ ನಡುವೆ ಸಾಗಿದ ಸ್ತಬ್ದಚಿತ್ರಗಳು, ಬೊಂಬೆ ಕುಣಿತ, ಮೈಸೂರು ಬ್ಯಾಂಡ್, ಪಯ್ಯಟ್ಟಂನ ಚೆಂಡೆ ನಿನಾದ, ವಾದ್ಯ ಮೇಳಗಳು, ಹುಲಿವೇಷ ತಂಡಗಳು ಸಂಭ್ರಮವನ್ನು ಇಮ್ಮಡಿಸಿದವು.

ಮೆರವಣಿಗೆಯು ಕದ್ರಿ ಕಂಬಳದ ಗೋಪಾಲಕೃಷ್ಣ ಮಠಕ್ಕೆ ತಲುಪಿ, ಅಲ್ಲಿಂದ ಶ್ರೀಕೃಷ್ಣ ವಿಗ್ರಹವನ್ನು ಶೋಭಾಯಾತ್ರೆಯಲ್ಲಿ ಕದ್ರಿ ದೇವಸ್ಥಾನಕ್ಕೆ ತರಲಾಯಿತು. ಮೆರವಣಿಗೆಯು ಕದ್ರಿಕಂಬಳ ರಸ್ತೆ, ಮಲ್ಲಿಕಟ್ಟೆ ಮೂಲಕ ಸಾಗಿ ಕದ್ರಿ ದೇವಾಲಯದ ಮೂಲಕ ರಾಜಾಂಗಣ ತಲುಪಿತು.

ADVERTISEMENT

ಕದ್ರಿ ಮಂಜುನಾಥ ದೇವಸ್ಥಾನಕ್ಕೆ ತೆರಳುವ ಮಾರ್ಗದುದ್ದಕ್ಕೂ ಕಟೌಟ್‌ಗಳು ಮಿನುಗುತ್ತಿದ್ದವು. ಅವುಗಳ ನಡುವೆ ಎತ್ತರದ ಕಮಾನುಗಳಿಗೆ ವೈವಿಧ್ಯ ಮೊಸರು ಕುಡಿಕೆಗಳನ್ನು ಕಟ್ಟಲಾಗಿತ್ತು. ಬಾಳೆ ಹಣ್ಣು, ಚಕ್ಕುಲಿ, ಉಂಡೆ, ಸಿಹಿ ತಿಂಡಿಗಳು ಕಮಾನಿನಲ್ಲಿ ತೂಗುತ್ತಿದ್ದವು. ಉತ್ಸಾಹಿ ತಂಡಗಳು ಒಬ್ಬರ ಮೇಲೊಬ್ಬರು ನಿಂತು ಕುಡಿಕೆಗಳನ್ನು ಒಡೆದವು. ರಂಗಿನಾಟವು ನೋಡುಗರಿಗೆ ಮುದ ನೀಡಿತು. ಕದ್ರಿಯ ಹವ್ಯಾಸಿ ಬಳಗದಿಂದ ‘ಶ್ರೀಕೃಷ್ಣ ಲೀಲೋತ್ಸವ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. 

ಅತ್ತಾವರ, ಕಾವೂರು, ಕೊಟ್ಟಾರ, ತಲಪಾಡಿ ಮತ್ತಿತರ ಕಡೆಗಳಲ್ಲೂ ಮೊಸರು ಕುಡಿಕೆ ಉತ್ಸವ ವೈಭವದಿಂದ ನಡೆಯತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.