ADVERTISEMENT

ದ.ಕ: ರೈಲು ಸಂಪರ್ಕದ ಸಮಸ್ಯೆ ನಿವಾರಿಸುವಂತೆ ಕೋರಿಕೆ

ಸಚಿವ ಸೋಮಣ್ಣಗೆ ಪತ್ರ ಬರೆದ ಸಂಸದ ಕ್ಯಾ.ಬ್ರಿಜೇಶ್ ಚೌಟ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 5:15 IST
Last Updated 12 ಜುಲೈ 2024, 5:15 IST
ಕ್ಯಾ. ಬ್ರಿಜೇಶ್ ಚೌಟ
ಕ್ಯಾ. ಬ್ರಿಜೇಶ್ ಚೌಟ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲು ಸೇವೆಯಲ್ಲಿಯ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮ ವಹಿಸಬೇಕು ಎಂದು ಕೋರಿ ಸಂಸದ ಕ್ಯಾ.ಬ್ರಿಜೇಶ್ ಚೌಟ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದಿದ್ದಾರೆ. 

‘ಕೊಂಕಣ ರೈಲ್ವೆ ನಿಗಮವನ್ನು (ಕೆಆರ್‌ಸಿಎಲ್)  ಭಾರತೀಯ ರೈಲ್ವೆಯ ಜೊತೆ ವಿಲೀನ ಮಾಡಬೇಕು ಎಂಬುದು ಕೊಂಕಣ ತೀರದ ಪ್ರಯಾಣಿಕರ ಬಹುಕಾಲದ ಬೇಡಿಕೆ. ಸ್ವತಂತ್ರ ಸಂಸ್ಥೆಯಾಗಿರುವ ಕೆಆರ್‌ಸಿಎಲ್ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದೆ. ಮುಖ್ಯ ರೈಲ್ವೆ ಮೂಲಸೌಕರ್ಯಗಳಿಗೆ ಇತರ ವಲಯಗಳನ್ನು ಅವಲಂಬಿಸಬೇಕಾಗಿದೆ. ಈ ಸಮಸ್ಯೆ ನಿವಾರಿಸಲು ಈ ವಿಲೀನ  ಅವಶ್ಯ‘ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

‘ಮಂಗಳೂರು-ಬೆಂಗಳೂರು ರೈಲು ಮಾರ್ಗವನ್ನು ಮೇಲ್ದರ್ಜೆಗೇರಿಸುವ ಅನಿವಾರ್ಯ ಇದೆ. ಈ ಮಾರ್ಗದಲ್ಲಿ ಶಿರಾಡಿ ಘಾಟಿ ಪ್ರದೇಶದ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಬೇಕಾಗಿದೆ. ಮಂಗಳೂರು ಮತ್ತು ಬೆಂಗಳೂರು ನಡುವಿನ ಸರಕು ಸಾಗಣೆ ವೃದ್ಧಿಗೆ ಮತ್ತು ಪ್ರಯಾಣಿಕರ ರೈಲು ಸೇವೆ ಹೆಚ್ಚಳಕ್ಕೆ ಈ ಅಧ್ಯಯನ ಅತ್ಯಗತ್ಯ.  ಸುಬ್ರಹ್ಮಣ್ಯ–ಸಕಲೇಶಪುರದ ಘಾಟಿ ಪ್ರದೇಶದ ಸಾಮರ್ಥ್ಯ ವೃದ್ಧಿಗಾಗಿ ರೈಲು ನಿಲುಗಡೆಗೆ ಪರ್ಯಾಯ ಹಳಿ (ಸೈಡಿಂಗ್) ನಿರ್ಮಿಸಲು ಕ್ರಮವಹಿಸಬೇಕಿದೆ’ ಎಂದು ಅವರು ವಿವರಿಸಿದ್ದಾರೆ. 

ADVERTISEMENT

‘ಅನುಷ್ಠಾನಗೊಳ್ಳುತ್ತಿರುವ ರೈಲು ಮೂಲಸೌಕರ್ಯ ವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲು ಹಾಗೂ ರೈಲ್ವೆ ಇಲಾಖೆಗೆ ಸಂಬಂಧಿಸಿ ಈ ಪ್ರದೇಶದ ಇನ್ನಿತರ ಬೇಡಿಕೆಗಳ ಈಡೇರಿಕೆಯ ಬಗ್ಗೆ ಚರ್ಚಿಸಲು ಮಂಗಳೂರಿನಲ್ಲಿ ಸಭೆ ನಡೆಸಲು ಉದ್ದೇಶಿಸಿದ್ದೇವೆ.  ಸಭೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ದಕ್ಷಿಣ ರೈಲ್ವೆ, ನೈರುತ್ಯ ರೈಲ್ವೆ, ಕೊಂಕಣ ರೈಲ್ವೆ, ಮಂಗಳೂರು ನಗರ ಪಾಲಿಕೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ  ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಜೊತೆ ಸಮಾಲೋಚನ ನಡೆಸಲು ನಿರ್ಧರಿಸಿದ್ದೇವೆ. ಈ ಸಭೆಯಲ್ಲಿ ಸಚಿವರಾದ ತಾವೂ ಭಾಗವಹಿಸಬೇಕು’ ಎಂದು ಅವರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.