ADVERTISEMENT

ಎಂಆರ್‌ಪಿಎಲ್‌ನಲ್ಲಿ ಅಣಕು ಕಾರ್ಯಾಚರಣೆ

ಸುರಕ್ಷತಾ ಕ್ರಮಗಳ ಕುರಿತು ಡಿಸಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:48 IST
Last Updated 19 ಸೆಪ್ಟೆಂಬರ್ 2020, 16:48 IST
ಮಂಗಳೂರಿನ ಎಂಆರ್‌ಪಿಎಲ್‌ ಆವರಣದಲ್ಲಿ ಶನಿವಾರ ತುರ್ತು ಅಣಕು ಕಾರ್ಯಾಚರಣೆ ನಡೆಯಿತು.
ಮಂಗಳೂರಿನ ಎಂಆರ್‌ಪಿಎಲ್‌ ಆವರಣದಲ್ಲಿ ಶನಿವಾರ ತುರ್ತು ಅಣಕು ಕಾರ್ಯಾಚರಣೆ ನಡೆಯಿತು.   

ಮಂಗಳೂರು: ಎಂಆರ್‌ಪಿಎಲ್ ಆವರಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಕಾರ್ಖಾನೆಗಳ ಉಪನಿರ್ದೇಶಕ ರಾಜೇಶ್ ಮಿಶ್ರಿಕೋಟಿ ಮತ್ತಿತರ ಸಮ್ಮುಖದಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಯಿತು.

ತುರ್ತು ಅಣಕು ಕಾರ್ಯಾಚರಣೆ ಎಂಆರ್‌ಪಿಎಲ್‌ನ ಕಚ್ಚಾ ತೈಲ ಭಟ್ಟಿ ಇಳಿಸುವಿಕೆಯ ಘಟಕದಲ್ಲಿ ನಡೆಯಿತು.ಎಲ್‌ಪಿಜಿ ಸೋರಿಕೆಯ ಸಂದರ್ಭದಲ್ಲಿ ಕೈಗೊಳ್ಳುವ ಕ್ರಮಗಳನ್ನು ಪ್ರದರ್ಶಿಸಲಾಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯಡಿ ಕೈಗಾರಿಕೆಗಳ ತುರ್ತು ಸಿದ್ಧತೆಯನ್ನು ಮೌಲ್ಯಮಾಪನ ಮಾಡಲು ಇದು ಸಹಕಾರಿಯಾಗಿದೆ.

ಎಂಆರ್‌ಪಿಎಲ್‌ ತನ್ನ ಅಗ್ನಿಶಾಮಕ ನಿರ್ವಹಣಾ ಸಾಮರ್ಥ್ಯಗಳು ಮತ್ತು ಸಂಪನ್ಮೂಲಗಳನ್ನು ಈ ಸಮಯದಲ್ಲಿ ಪ್ರದರ್ಶಿಸಿತು. ಅಗ್ನಿಶಾಮಕ ಮತ್ತು ಸುರಕ್ಷತೆ ಕಾರ್ಯಾಚರಣೆ ಮತ್ತು ನಿರ್ವಹಣೆ ಮುಂತಾದ ವಿವಿಧ ವಿಭಾಗಗಳು ಚಟುವಟಿಕೆಯಲ್ಲಿ ಭಾಗವಹಿಸಿದ್ದವು.

ADVERTISEMENT

ಅಣಕು ಕಾರ್ಯಾಚರಣೆಯನ್ನು ಆಸಕ್ತಿಯಿಂದ ವೀಕ್ಷಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಪೆಟ್ರೋಲಿಯಂ ಸಂಸ್ಕರಣಾಗಾರಗಳ ಕಾರ್ಯವೈಖರಿಗೆ ಸಂಬಂಧಿಸಿದಂತೆ ವಿವಿಧ ತಾಂತ್ರಿಕ ಮತ್ತು ಸುರಕ್ಷತಾ ಅಂಶಗಳ ಬಗ್ಗೆ ಚರ್ಚಿಸಿದರು. ಸಂಸ್ಕರಣಾಗಾರದ ಒಳಗಿನ ವಿಪತ್ತು ತಗ್ಗಿಸುವಿಕೆ ಮತ್ತು ಸುರಕ್ಷತಾ ನಿರ್ವಹಣೆಯ ಬಗ್ಗೆ ಎಂಆರ್‌ಪಿಎಲ್‌ನಿಂದ ಕೈಗೊಳ್ಳಲಾದ ವಿವಿಧ ತಾಂತ್ರಿಕ ವಿವರಗಳು ಹಾಗೂ ಕಾನೂನಾತ್ಮಕ ನಿಬಂಧನೆಗಳ ಮಾಹಿತಿ ಪಡೆದರು.

ಎಂಆರ್‌ಪಿಎಲ್‌ನ ವ್ಯವಸ್ಥಾಪೊ ನಿರ್ದೇಶಕ ಎಂ.ವೆಂಕಟೇಶ್, ರಿಫೈನರಿ ನಿರ್ದೇಶಕ ಸಂಜಯ್ ವರ್ಮಾ, ಮುಖ್ಯ ಜಾಗೃತ ಅಧಿಕಾರಿ ರಾಜೀವ್ ಕುಶ್ವಾ, ಯೋಜನಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಬಿಎಚ್‌ವಿ ಪ್ರಸಾದ್, ತೈಲಾಗಾರದ ಕಾರ್ಯನಿರ್ವಾಹಕ ನಿರ್ದೇಶಕ ಎಲಾಂಗೋ, ಎಂಆರ್‌ಪಿಎಲ್‌ನ ವಿವಿಧ ವಿಭಾಗಗಳ ಅಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ವಿಜಯ್ ಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮೊಹಮ್ಮದ್ ಜುಲ್ಫಿಕರ್ ನವಾಜ್, ಸುರತ್ಕಲ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಚಂದ್ರಪ್ಪ, ಡಿಸಿ ಕಚೇರಿಯ ಮಾಹಿತಿ ಅಧಿಕಾರಿ ಉಸ್ತುವಾರಿ ಬೀಮಾ ನಾಯಕ್ ಪಾಲ್ಗೊಂಡಿದ್ದರು. ಐಒಸಿಎಲ್, ಎಚ್‌ಪಿಸಿಎಲ್, ಬಿಪಿಸಿಎಲ್, ಒಎಂಪಿಎಲ್, ಪಿಎಂಎಚ್‌ಬಿಎಲ್, ಬಿಎಎಸ್ಎಫ್, ಎಂಎಸ್‌ಇಜೆಡ್‌ ಪ್ರತಿನಿಧಿಗಳು ಅಭಿಪ್ರಾಯಗಳನ್ನು ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.