ADVERTISEMENT

ಎಂಆರ್‌ಪಿಎಲ್‌: ಸ್ಥಳೀಯರ ಕಡೆಗಣನೆಗೆ ಖಂಡನೆ

ಪ್ರತಿಭಟನೆಯ ಎಚ್ಚರಿಕೆ ನೀಡಿದ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ

​ಪ್ರಜಾವಾಣಿ ವಾರ್ತೆ
Published 23 ಮೇ 2021, 6:24 IST
Last Updated 23 ಮೇ 2021, 6:24 IST
ಮೊಹಿಯುದ್ದೀನ್ ಬಾವಾ
ಮೊಹಿಯುದ್ದೀನ್ ಬಾವಾ   

ಮಂಗಳೂರು: ‘ಎಂಆರ್‌ಪಿಎಲ್‌ನಲ್ಲಿ ಸ್ಥಳೀಯರಿಗೆ ಪ್ರಾಶಸ್ತ್ಯ ನೀಡದೇ ಉತ್ತರ ಭಾರತ ಮೂಲದ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಆರೋಪಿಸಿದ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ, ಬರುವ ದಿನಗಳಲ್ಲಿ ಈ ನೀತಿಯ ವಿರುದ್ಧ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಕೃಷಿಭೂಮಿಯನ್ನು ಪಡೆದು ನಿರ್ಮಾಣವಾಗಿರುವ ಎಂಆರ್‌ಪಿಎಲ್‌ನಲ್ಲಿ ಉದ್ಯೋಗ ನಿರ್ವಹಿಸಲು ಜಿಲ್ಲೆಯಲ್ಲಿ ಸಾಕಷ್ಟು ಅರ್ಹ ವಿದ್ಯಾವಂತರು ಇದ್ದರೂ, ಸ್ಥಳೀಯರನ್ನು ಗಣನೆಗೆ ತೆಗೆದುಕೊಳ್ಳದೆ ನೇಮಕಾತಿ ಮಾಡಿರುವುದು ಖಂಡನೀಯ.ಸರೋಜಿನಿ ಮಹಿಷಿ ವರದಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದಿದ್ದರೂ ಅದನ್ನು ಯಾಕೆ ಜಾರಿಗೆ ತರುತ್ತಿಲ್ಲ’ ಎಂದು ಪ್ರಶ್ನಿಸಿದರು.

184 ಮಂದಿಯಲ್ಲಿ ಕೇವಲ 13 ಮಂದಿ ಕರ್ನಾಟಕದ ಉದ್ಯೋಗಿಗಳನ್ನು ನೇಮಕ ಮಾಡಿದ್ದು, ಅದರಲ್ಲಿ ಉಡುಪಿ, ಕಾರ್ಕಳ, ಮಂಗಳೂರಿನ ತಲಾ ಒಬ್ಬ ಉದ್ಯೋಗಿಯನ್ನು ಸೇರಿಸಲಾಗಿದೆ. ಸ್ಥಳೀಯರ ಜಮೀನು ಪಡೆದು ತಲೆಯೆತ್ತಿರುವ ಎಂಆರ್‌ಪಿಎಲ್ ಸ್ಥಳೀಯರಿಗೆ ತಾರತಮ್ಯ ಎಸಗುತ್ತಿದೆ. ಸ್ಥಳೀಯ ಭತ್ತದ ಗದ್ದೆಗಳಿಗೆ ರಾಸಾಯನಿಕ ತ್ಯಾಜ್ಯ ಬಿಡುತ್ತಿದೆ. ಅದನ್ನು ಪ್ರಶ್ನಿಸುವ ಗೋಜಿಗೂ ಜಿಲ್ಲೆಯ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಈ ಬಗ್ಗೆ ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಪಡಿತರ ವ್ಯವಸ್ಥೆ ಸರಿಪಡಿಸಿ: ಕುಳಾಯಿ ನ್ಯಾಯಬೆಲೆ ಅಂಗಡಿಯಲ್ಲಿ ಜನರು ಬೆಳಿಗ್ಗೆ 7 ಗಂಟೆಗೆ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. 7 ಗಂಟೆಯಿಂದ ಪಡಿತರ ವಿತರಣೆ ನಡೆಯಬೇಕಿದ್ದು, ಶನಿವಾರ ಸರ್ವರ್ ದೋಷದಿಂದ ಒಂದು ತಾಸು ವಿಳಂಬವಾಗಿದೆ. ಪಡಿತರ ಅಂಗಡಿಯಿಂದ ತೆರಳುವಾಗ ರಿಕ್ಷಾ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲಾಡಳಿತ ಆದಷ್ಟು ಬೇಗ ಇದನ್ನು ಸರಿಪಡಿಸಿ ಪಡಿತರ ವಿತರಣೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

‘ಸಂಸದ, ಶಾಸಕರು ರಾಜೀನಾಮೆ ನೀಡಲಿ’

ಎಂಆರ್‌ಪಿಎಲ್‌ನ 224 ಉದ್ಯೋಗದ ನೇಮಕಾತಿಯಲ್ಲಿ ಅವಿಭಜಿತ ಜಿಲ್ಲೆ ಸೇರಿದಂತೆ ಕನ್ನಡ ನಾಡಿಗೆ ಬಹುದೊಡ್ಡ ವಂಚನೆ ಎಸಗಲಾಗಿದೆ. ಉತ್ತರ ಪ್ರದೇಶ, ಬಿಹಾರದಿಂದಲೆ ಕನಿಷ್ಟ ನೂರು ಜನ ಅವಕಾಶ ಪಡೆದಿದ್ದು, ಒಟ್ಟು ನೇಮಕಾತಿ ಪ್ರಕ್ರಿಯೆಯಲ್ಲೆ ಬಹುದೊಡ್ಡ ಅಕ್ರಮ ನಡೆದಿದೆ ಎಂದು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ದೂರಿದ್ದಾರೆ.

ಇಡೀ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ವೈಫಲ್ಯ, ವಂಚನೆಗಳಿಗೆ ಅವಳಿ ಜಿಲ್ಲೆಗಳ ಸಂಸದರಾದ ನಳಿನ್‌ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಹಾಗೂ ಶಾಸಕರು ನೇರ ಕಾರಣರಾಗಿದ್ದು, ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.