ADVERTISEMENT

₹8 ಲಕ್ಷ ವೆಚ್ಚದಲ್ಲಿ ಸೂರು ನಿರ್ಮಾಣ: ಮನೆಯ ಕೀಲಿಕೈ ಹಸ್ತಾಂತರ ನಾಳೆ

ಸತೀಶ್ ಕೊಣಾಜೆ
Published 13 ಜೂನ್ 2021, 13:51 IST
Last Updated 13 ಜೂನ್ 2021, 13:51 IST
ನಾರಾಯಣ ಪೂಜಾರಿಯವರ ಹಳೆ ಮನೆ
ನಾರಾಯಣ ಪೂಜಾರಿಯವರ ಹಳೆ ಮನೆ   

ಮುಡಿಪು: ಸರಿಯಾದ ಸೂರಿನ ವ್ಯವಸ್ಥೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದ ನರಿಂಗಾನ ಗ್ರಾಮದ ಶೇಡಿಗುಂಡಿ ನಾರಾಯಣ ಪೂಜಾರಿ ಅವರ ಕುಟುಂಬಕ್ಕೆ ಕೈರಂಗಳ ಶಾರದಾ ವಿದ್ಯಾಗಣಪತಿ ಶಾಲಾ ಸಂಚಾಲಕ ಟಿ.ಜಿ.ರಾಜಾರಾಂ ಭಟ್ ಅವರು ‘ನೆರವಿನ ಆಸರೆ’ ಯೋಜನೆಯಡಿ ದಾನಿಗಳ ಸಹಕಾರದೊಂದಿಗೆ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.

ನಾರಾಯಣ ಪೂಜಾರಿ ಅವರ ಕುಟುಂಬವು ಈ ಹಿಂದೆ ಜೋಪಡಿಯ ರೀತಿಯ ಕಟ್ಟಡದಲ್ಲಿ ವಾಸವಾಗಿತ್ತು. ಮಳೆಗಾಲದಲ್ಲಿ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ಬದುಕು ಸಾಗಿಸುತ್ತಿತ್ತು. ಈ ಬಡ ಕುಟುಂಬಕ್ಕೆ ನೂತನ ಮನೆಯ ನಿರ್ಮಾಣದ ಕನಸು ಇದ್ದರೂ ಆರ್ಥಿಕ ಬಡತನ ಅಡ್ಡಿಯಾಗಿತ್ತು.

ಕನಸಿಗೆ ನೆರವಾದ ಆಸರೆ: ಬಡ ಕುಟುಂಬದ ಸ್ಥಿತಿಗತಿಯನ್ನು ಅರಿತ ಕೈರಂಗಳ ಶಾರದಾ ವಿದ್ಯಾಗಣಪತಿ ಶಾಲಾ ಸಂಚಾಲಕ ಟಿ.ಜಿ.ರಾಜಾರಾಂ ಭಟ್ ಅವರು ಕೋವಿಡ್‌ ಸಂಕಷ್ಟದ ನಡುವೆವೂ ಬಡ ಕುಟುಂಬಕ್ಕೆ ಆಸರೆಯಾಗುವ ಭರವಸೆ ನೀಡಿದ್ದರು. ಇದರಂತೆ ಅವರ ಮುಂದಾಳುತ್ವದಲ್ಲಿ ‘ನೆರವಿನ ಆಸರೆ’ ಯೋಜನೆಯಡಿ ದಾನಿಗಳ ಸಹಕಾರದೊಂದಿಗೆ ಮನೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು.

ADVERTISEMENT

₹ 8 ಲಕ್ಷ ವೆಚ್ಚದ ಮನೆ: ಬಡ ಕುಟುಂಬಕ್ಕೆ ಮನೆ ನಿರ್ಮಿಸಲು ದೋಸೆ ಮನೆ ಶಂಕರ ಭಟ್ ಸ್ಥಳದಾನ ಮಾಡಿದ್ದಾರೆ. ಮನೆ ನಿರ್ಮಾಣದ ಬಹುತೇಕ ಖರ್ಚು ವೆಚ್ಚಗಳನ್ನು ರಾಜಾರಾಂ ಭಟ್ ಅವರೇ ಭರಿಸಿದ್ದು, ಸಹೃದಯಿ ದಾನಿಗಳ ಆರ್ಥಿಕ ಸಹಕಾರದಲ್ಲಿ ಸುಮಾರು ₹ 8 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣಗೊಂಡಿದೆ. ಸ್ಥಳೀಯ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಕೂಡಾ ಶ್ರಮದಾನದ ಮೂಲಕ ಸಹಕಾರ‌ ನೀಡಿದ್ದರು.

ಇದೇ 15ರಂದು ಮನೆಯ ಕೀಲಿ ಕೈ ಹಸ್ತಾಂತರ ನಡೆಯಲಿದ್ದು, ಈ ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ, ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್, ಮಂಗಳೂರು ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಮೋರೆ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.