
ಬಂಟ್ವಾಳ: ಸುಮಾರು 450 ವರ್ಷ ಹಿನ್ನೆಲೆ ಇರುವ ತಾಲ್ಲೂಕಿನ ಬರಿಮಾರು ಕಾನಲ್ತಾಯ ಮಹಾಕಾಳಿ ದೈವಸ್ಥಾನವು 2023ರಲ್ಲಿ ನವೀಕರಣಗೊಂಡು ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ನಡೆದಿದೆ. ಇದೀಗ ಹೊಸ ವ್ಯವಸ್ಥಾಪನಾ ಸಮಿತಿಯು ಅಲ್ಲಿನ ಕಟ್ಟುಪಾಡುಗಳನ್ನು ಉಲ್ಲಂಘಿಸಿ ಲೋಪ ಎಸಗಿದೆ ಎಂದು ಸಮಿತಿ ಮಾಜಿ ಅಧ್ಯಕ್ಷ ಜಗದೀಶ ಎಸ್.ಪೂಜಾರಿ ಆರೋಪಿಸಿದ್ದಾರೆ.
ಬಿ.ಸಿ. ರೋಡಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘40 ವರ್ಷಗಳಿಂದ ಜೀರ್ಣಾವಸ್ಥೆಯಲ್ಲಿದ್ದ ದೈವಸ್ಥಾನದಲ್ಲಿ 2021ರಲ್ಲಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮಾರ್ಗದರ್ಶನದಂತೆ ದೈವಜ್ಞ ಸಿ.ಪಿ. ಗೋಪಾಲಕೃಷ್ಣ ಪಣಿಕ್ಕರ್ ಮೂಲಕ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಲಾಗಿದೆ.
2023ರಲ್ಲಿ ನಡೆದ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಸಂದರ್ಭದಲ್ಲಿ ಭಕ್ತರು ದೈವಗಳಿಗೆ ಮಣೆ- ಮಂಚ ಸಹಿತ ಬೆಳ್ಳಿ ಭಂಡಾರ ಸಮರ್ಪಿಸಿದ್ದು, ನೇಮೋತ್ಸವವೂ ನಡೆದಿದೆ. ಅಂದು ತಂತ್ರಿಯವರ ಮಾರ್ಗದರ್ಶನದಲ್ಲಿ ಸಾನ್ನಿಧ್ಯ ನಿರ್ಮಿಸಿ ಪೂಜಾರಿಗಳ ಮೂಲಕ ದೈವಗಳಿಗೆ ಪಂಚಪರ್ವ ಸೇವೆಗಳ ಬಗ್ಗೆ ಕಟ್ಟು- ಕಟ್ಟಳೆ ರೂಪಿಸಲಾಗಿತ್ತು. ಆದರೆ, ಇದೀಗ ಈ ನಿಯಮಾವಳಿ ಮೀರಿ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಮತ್ತು ಶಿವರಾಮ ಭಟ್ ಎಂಬುವರ ಮೂಲಕ ವೈದಿಕ ರೀತಿಯಲ್ಲಿ ಪೂಜೆ ನಡೆಸುವ ಮೂಲಕ ಪೂಜಾರಿ ಮತ್ತು ಗುತ್ತುಬರ್ಕೆಯವರನ್ನು ಕಡೆಗಣಿಸಿ ವ್ಯವಸ್ಥಾಪನಾ ಸಮಿತಿ ಅಪಚಾರ ಎಸಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮೋಹನದಾಸ ಮುಳಿಬೈಲು ಪುರಮಜಲುಗುತ್ತು, ಪೂವಪ್ಪ ಪೂಜಾರಿ ಬರಿಮಾರುಗುತ್ತು, ಸತೀಶ ಪ್ರಭು ಕನ್ನೊಟ್ಟು ಮನೆತನ, ಚಂದ್ರಹಾಸ ಭಾಗವಹಿಸಿದ್ದರು.
‘ಸಾಧಕ ವಿದ್ಯಾರ್ಥಿಗಳು ಪ್ರೇರಣೆಯಾಗಲಿ’
ಮೂಲ್ಕಿ: ಶೈಕ್ಷಣಿಕ ಸಾಧನೆ ಮಾಡಿದವರನ್ನು ಇತರರು ಪ್ರೇರಣೆಯಾಗಿಸಿಕೊಳ್ಳಬೇಕು. ಹಾಗಾದಾಗ ಸಮಾಜಕ್ಕೆ ಶಿಕ್ಷಣದ ಮಹತ್ವ ಅರಿವಾಗುತ್ತದೆ. ಸಾಧಕರನ್ನು ಸಮಾಜವೂ ಗುರುತಿಸಬೇಕು ಎಂದು ಮೂಲ್ಕಿ ಶಾಂಭವಿ ಜೆಸಿಐ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್ ಕೆಂಚನಕೆರೆ ಹೇಳಿದರು.
ಕಾರ್ನಾಡಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮಾಜಿ ಅಧ್ಯಕ್ಷ ಸತೀಶ್ ಕಿಲ್ಪಾಡಿ, ಕಾರ್ಯಕ್ರಮ ನಿರ್ದೇಶಕ ಸುರೇಶ್ ರಾವ್, ಮೊಹಮ್ಮದ್ ಹಬೀಬುಲ್ಲ, ಅಶೋಕ್ ಕುಮಾರ್ ಶೆಟ್ಟಿ, ವಾಸು ಪೂಜಾರಿ ಚಿತ್ರಾಪು, ಅನಿಲ್ ಕುಮಾರ್, ಚಂದ್ರಶೇಖರ್ ಶೆಟ್ಟಿ, ದಿನೇಶ್ ಕೆ.ಶೆಟ್ಟಿ, ಹರ್ಷರಾಜ್ ಶೆಟ್ಟಿ ಜಿ.ಎಂ, ಪ್ರಕಾಶ್ ಸುವರ್ಣ, ಸುನಿಲ್‌ಕುಮಾರ್ ಇದ್ದರು. ಪ್ರಿಯಾಂವೃತ್ ಭಟ್ ಮತ್ತು ಶ್ಯಾಮಲಾ ಕಾಮತ್ ಅನಿಸಿಕೆ ಹಂಚಿಕೊಂಡರು. ಕಾರ್ಯದರ್ಶಿ ಕೇಶವ್ ಸುವರ್ಣ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.