ADVERTISEMENT

ಕವಿಗೋಷ್ಠಿಯಲ್ಲಿ 13 ಭಾಷೆಗಳ ಭಾವ ಲಹರಿ

ಕವಿತೆಗಳಲ್ಲಿ ಮಾರ್ನೆಮಿಯ ವೈಭವದ ಚಿತ್ರಣ, ಕರಾವಳಿ ಬದುಕಿನ ಹೂರಣ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 5:08 IST
Last Updated 9 ಅಕ್ಟೋಬರ್ 2024, 5:08 IST
ಬಹುಭಾಷಾ ಕವಿಗೋಷ್ಠಿಯಲ್ಲಿ ಬಾಬು ಪಾಂಗಾಳ ಕೊರಗ ಅವರು ಕವಿತೆ ವಾಚಿಸಿದರು. ಸಿಯಾನಾ ಬಿ.ಎಂ., ಜ್ಯೋತಿ ರವಿರಾಜ್‌, ಚಂದ್ರಾವತಿ ಬಡ್ಡಡ್ಕ, ಪ್ರಮೀಳಾ ರಾಜ್ ಸುಳ್ಯ, ರಾಧಾಕೃಷ್ಣ ಉಳಿಯತ್ತಡ್ಕ, ರಾಜನ್ ಮುನಿಯೂರು, ಶ್ರೀನಿವಾಸ ಪೆರಿಕ್ಕಾನ ಮತ್ತಿತರರಿದ್ದರು
ಬಹುಭಾಷಾ ಕವಿಗೋಷ್ಠಿಯಲ್ಲಿ ಬಾಬು ಪಾಂಗಾಳ ಕೊರಗ ಅವರು ಕವಿತೆ ವಾಚಿಸಿದರು. ಸಿಯಾನಾ ಬಿ.ಎಂ., ಜ್ಯೋತಿ ರವಿರಾಜ್‌, ಚಂದ್ರಾವತಿ ಬಡ್ಡಡ್ಕ, ಪ್ರಮೀಳಾ ರಾಜ್ ಸುಳ್ಯ, ರಾಧಾಕೃಷ್ಣ ಉಳಿಯತ್ತಡ್ಕ, ರಾಜನ್ ಮುನಿಯೂರು, ಶ್ರೀನಿವಾಸ ಪೆರಿಕ್ಕಾನ ಮತ್ತಿತರರಿದ್ದರು   

ಮಂಗಳೂರು: ಇಲ್ಲಿ ಕವಿಗಳು 13 ಭಾಷೆಗಳಲ್ಲಿ ತಮ್ಮ ಭಾವ ಲಹರಿಗೆ ಕವಿತೆಯ ರೂಪ ನೀಡಿದರು. ಕರಾವಳಿಯಲ್ಲಿ ಮಾರ್ನೆಮಿಯ (ಮಹಾನವಮಿ) ಸಡಗರ, ಇಲ್ಲಿನ ಕೌಟುಂಬಿಕ ಬಂಧ, ಪ್ರಾಕೃತಿಕ ನಂಟು, ಆಧುನಿಕತೆಯಿಂದ ಅರ್ಥಕಳೆದುಕೊಳ್ಳುತ್ತಿರುವ ಆಚರಣೆಗಳ ಚಿತ್ರಣಗಳನ್ನು ಕವಿತೆಗಳ ಸಾಲುಗಳಲ್ಲಿ ಪೋಣಿಸಿದರು. ಕವಿಗಳು ಬಳಸಿದ ಭಾಷೆ ಬೇರೆ ಬೇರೆಯಾದರೂ ಭಾವಗಳು ಶೋತ್ರುಗಳ ಎದೆಗಿಳಿದವು.   

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ಮೂಲ್ಕಿ ಮಯೂರಿ ಫೌಂಡೇಷನ್ ವತಿಯಿಂದ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಮಾರ್ನೆಮಿಯ ಬಹುಬಾಷಾ ಕವಿಗೋಷ್ಠಿ’ ಈ ಭಾವ ಮಿಲನಕ್ಕೆ ವೇದಿಕೆ ಒದಗಿಸಿತು.

ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಜೊತೆಗೆ ಕೊರಗ, ಚಿತ್ಪಾವನ, ಹವ್ಯಕ, ಕರಾಡ, ಶಿವಳ್ಳಿ ಭಾಷೆಗಳ ಕವನಗಳನ್ನು ಒಂದೇ ಕಡೆ ಆಲಿಸುವ ಅಪೂರ್ವ ಅವಕಾಶ ಶೋತ್ರುಗಳಿಗೆ ಒದಗಿ ಬಂತು. ಕೊರಗ ಭಾಷೆಯಲ್ಲಿ ಕವಿತೆ ವಾಚಿಸಿದ ಬಾಬು ಕೊರಗ ಪಾಂಗಳ ಬುಡಕಟ್ಟು ಸಮುದಾಯವು ಮಾರ್ನೆಮಿ ಹಬ್ಬವನ್ನು ಹೇಗೆ ಚೋದ್ಯದಿಂದ ಕಾಣುತ್ತದೆ ಎಂಬುದನ್ನು ಕಟ್ಟಿಕೊಟ್ಟರು.

ADVERTISEMENT

ತುಳುವಿನಲ್ಲಿ ಕವಿತೆ ವಾಚಿಸಿದ ಗೀತಾ ಜೈನ್‌, ಮಹಾನವಮಿಯ ವೈಭವ, ಹುಲಿ ಕುಣಿತಗಳ ಅಬ್ಬರಗಳನ್ನು ವರ್ಣಿಸುತ್ತಲೇ ಜನ ಪ್ರಕೃತಿಯಿಂದ ದೂರಾಗುತ್ತಿರುವ ಆತಂಕವನ್ನೂ ತೋಡಿಕೊಂಡರು. ಕಾಡು ನಾಡಾಗಿದ್ದು, ಗುಡ್ಡೆ ಕುಸಿತದಂತಹ ಅವಘಡ ಹೆಚ್ಚಿದ್ದು, ಜನರ ಮನಸ್ಸು ಮಲಿನಗೊಂಡ ರೀತಿಯನ್ನು ವಿವರಿಸಿದರು. ಜನರ ಬದುಕು ಮತ್ತೆ ಬಂಗಾರವಾಗಲಿ, ನೆಲ ಸಿಂಗಾರವಾಗಲಿ ಎಂದು ಹಾರೈಸಿದರು. ಚಂದ್ರಾವತಿ ಬಡ್ಡಡ್ಕ ತಮ್ಮ ಅರೆಭಾಷೆ ಕವಿತೆಯಲ್ಲಿ, ರಾಮನ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ರಾವಣರ ಅಟ್ಟಹಾಸದಿಂದ ಮಹಿಳೆ ಎದುರಿಸುತ್ತಿರುವ ತೊಳಲಾಟಗಳನ್ನು ಬಿಂಬಿಸಿದರು. 

ಮಂಜುನಾಥ ಗುಂಡ್ಮಿ ಅವರ ಕುಂದಾಪುರ ಕನ್ನಡದ ಕವಿತೆ ಕರಾವಳಿಯ ಶ್ರಮ ಸಂಸ್ಕೃತಿಗೆ ಕನ್ನಡಿ ಹಿಡಿಯಿತು. ಜ್ಯೋತಿ ರವಿರಾಜ್ ಅವರ ಹವ್ಯಕ‌ ಕವಿತೆಯಲ್ಲಿ ಕೂಡು ಕುಟುಂಬದ ಸಡಗರದ ವರ್ಣನೆ ಇತ್ತು. ಹಬ್ಬಕ್ಕಾಗಿ ಬರುವ ಮನೆ ಮಕ್ಕಳು ಮೊಬೈಲ್‌ಗಳಲ್ಲಿ ಕಳೆದು ಹೋಗುತ್ತಿರುವ ನೋವಿನ ಛಾಯೆ ಇತ್ತು. ಪ್ರಮೀಳಾ‌ರಾಜ್ ಸುಳ್ಯ ಕನ್ನಡ ಕವಿತೆಯಲ್ಲಿ,ಆಕೃತಿ ಭಟ್ ಶಿವಳ್ಳಿ ಭಾಷೆಯ ಕವಿತೆಯಲ್ಲಿ, ಶ್ರೀನಿವಾಸ ಪೆರಿಕ್ಕಾನ ಅವರು ಕರಾಡ ಭಾಷೆಯ ಕವನದಲ್ಲಿ ನವರಾತ್ರಿಯ ಸಡಗರ ವರ್ಣಿಸಿದರು. ಸಿಯಾನ ಬಿ.ಎಂ. ತಮ್ಮ ಬ್ಯಾರಿ ಕವನದಲ್ಲಿ, ಕೆಟ್ಟದ್ದನ್ನು ಅಳಿಸಿ ಒಳಿತು ಪಸರಿಸುವ ನವರಾತ್ರಿಯ ಮಹತ್ವ ವಿವರಿಸಿದರು. ಚಿತ್ಪಾವನ ಭಾಷೆಯ ಕವನದಲ್ಲಿ ಗೋ‌ವಿಂದ ದಾಮ್ಲೆಯವರು ಅಂಗವಸ್ತ್ರದ ಮಹಿಮೆಯನ್ನು ಬಣ್ಣಿಸಿದರು.

ಫ್ಲೇವಿಯಾ ಕ್ಯಾಸ್ಟಲಿನೊ ಹಾಗೂ ಫೆಲ್ಸಿ ಲೋಬೊ ಕೊಂಕಣಿಯಲ್ಲಿ, ರಾಜನ್ ಮುನಿಯೂರು ಮಲಯಾಳದಲ್ಲಿ, ಶರ್ಮಿಳಾ ಬಜಕೂಡ್ಲು ಮರಾಟಿ ಭಾಷೆಯಲ್ಲಿ ಕವನ ವಾಚಿಸಿದರು. ಅಧ್ಯಕ್ಷತೆ ವಹಿಸಿದ್ದ ಕವಿ ರಾಧಾಕೃಷ್ಣ ಉಳಿಯತ್ತಡ್ಕ ಕೇರಳದಲ್ಲಿ ಯುವತಿಯ ಆತ್ಮಹತ್ಯೆ ಮಾಡಿಕೊಂಡಾಗ ಆಡಳಿತ ವ್ಯವಸ್ಥೆ ಹೇಗೆ ಕಣ್ಣಿದ್ದೂ ಕುರುಡಾಯಿತು ಎಂಬುದನ್ನು ಕವಿತೆಯ ಮೂಲಕ ಕಟ್ಟಿಕೊಟ್ಟರು.

ಸಾಹಿತಿ ನಿಕೇತನ ಅವರು ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌, ಮಯೂರಿ ಫೌಂಡೇಷನ್ ಅಧ್ಯಕ್ಷ ಜಯ ಕೆ.ಶೆಟ್ಟಿ ಮುಂಬೈ, ತುಳು ಪರಿಷತ್ ಅಧ್ಯಕ್ಷ ಪ್ರಭಾಕರ ನೀರುಮಾರ್ಗ, ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ, ಕರಾವಳಿ ಲೇಖಕಿಯರ ಹಾಗೂ ವಾಚಕಿಯ ಸಂಘದ ಉಪಾಧ್ಯಕ್ಷೆ ಅರುಣಾ ನಾಗರಾಜ್‌, ಪ್ರಧಾನ ಕಾರ್ಯದರ್ಶಿ ಯಶೋದಾ ಮೋಹನ್‌ ಭಾಗವಹಿಸಿದ್ದರು.  

13 ಭಾಷೆಗಳಲ್ಲಿ ಕವನಗಳ ವಾಚನ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಗಳ ಕವಿಗಳು ಭಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.