ADVERTISEMENT

ಹಳೆಯ ವಸ್ತುಗಳ ಸಂಗ್ರಹ ಮಹತ್ತರ ಕಾರ್ಯ: ರೆ.ಡಾ. ರೊನಾಲ್ಡ್‌ ಸೆರಾವೊ

ಸಂತ ಅಂತೋನಿ ಆಶ್ರಮದಲ್ಲಿ ವಸ್ತು ಸಂಗ್ರಹಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 2:30 IST
Last Updated 9 ಸೆಪ್ಟೆಂಬರ್ 2020, 2:30 IST
ಮಂಗಳೂರಿನ ಜೆಪ್ಪು ಸೇಂಟ್‌ ಅಂತೋನಿ ಆಶ್ರಮದ ವಸ್ತು ಸಂಗ್ರಹಾಲಯದಲ್ಲಿ ಜೋಡಿಸಿದ್ದ ಹಳೆಯ ಫೋನ್‌ ಅನ್ನು ರೆ.ಡಾ. ರೊನಾಲ್ಡ್‌ ಸೆರಾವೊ ವೀಕ್ಷಿಸಿದರು.
ಮಂಗಳೂರಿನ ಜೆಪ್ಪು ಸೇಂಟ್‌ ಅಂತೋನಿ ಆಶ್ರಮದ ವಸ್ತು ಸಂಗ್ರಹಾಲಯದಲ್ಲಿ ಜೋಡಿಸಿದ್ದ ಹಳೆಯ ಫೋನ್‌ ಅನ್ನು ರೆ.ಡಾ. ರೊನಾಲ್ಡ್‌ ಸೆರಾವೊ ವೀಕ್ಷಿಸಿದರು.   

ಮಂಗಳೂರು: ವಸ್ತುಗಳು ಹಳೆಯದಾದಂತೆ ಅವುಗಳನ್ನು ಸಂಗ್ರಹಿಸುವುದು ಹೊರೆಯಾಗುತ್ತದೆ. ಹಾಗಾಗಿ ಅವುಗಳನ್ನು ಮಾರಾಟ ಮಾಡಲಾಗುತ್ತದೆ, ಇಲ್ಲವೇ ಕಸವಾಗಿ ಬಿಸಾಡಲಾಗುತ್ತದೆ. ಆದರೆ, ಕೆಲ ವಸ್ತುಗಳನ್ನು ಜೋಪಾನವಾಗಿ ಇಡುವುದು ಮಾನವ ಕುಲಕ್ಕೆ ನಾವು ಅರ್ಪಿಸುವ ಬಹುದೊಡ್ಡ ಕೊಡುಗೆ ಎಂದು ಜೆಪ್ಪು ಸೇಂಟ್‌ ಜೋಸೆಫ್‌ ಅಂತರ ಧರ್ಮಪ್ರಾಂತದ ರೆಕ್ಟರ್ ರೆ.ಡಾ. ರೊನಾಲ್ಡ್‌ ಸೆರಾವೊ ಅಭಿಪ್ರಾಯಪಟ್ಟರು.

ನಗರದ ಜೆಪ್ಪು ಸೇಂಟ್‌ ಅಂತೋನಿ ಆಶ್ರಮದಲ್ಲಿ ವಸ್ತು ಸಂಗ್ರಹಾಲಯ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದ ಅವರು, ಸಂಗ್ರಹಾಲಯಗಳಲ್ಲಿ ಜೋಪಾನವಾಗಿ ಇಟ್ಟ ವಸ್ತುಗಳಿಂದ ಮನುಷ್ಯರು ನಿರ್ದಿಷ್ಟ ಕಾಲದಲ್ಲಿ ಮತ್ತು ಊರಿನಲ್ಲಿ ಜನರು ಯಾವ ರೀತಿ ಜೀವಿಸುತ್ತಿದ್ದರು. ಯಾವ ವಸ್ತುಗಳನ್ನು ಉಪಯೋಗಿಸುತ್ತಿದ್ದರು ಎಂಬುದನ್ನು ತಿಳಿಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಇಂದಿನ ಹಾಗೂ ಭವಿಷ್ಯದ ಮಕ್ಕಳು ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವ ಮೂಲಕ ಹಿಂದಿನ ಕಾಲದಲ್ಲಿ ಜನರ ಜೀವನ ಹೇಗಿತ್ತು ಎಂಬುದನ್ನು ಅರಿಯಲು ಸಾಧ್ಯವಾಗಲಿದೆ. ಇಂತಹ ಕೆಲಸ ಮಾಡಿರುವ ಸೇಂಟ್‌ ಅಂತೋನಿ ಆಶ್ರಮದ ಶ್ರಮ ಶ್ಲಾಘನೀಯ ಎಂದರು.

ADVERTISEMENT

ಆಶ್ರಮದ ನಿರ್ದೇಶಕ ಫಾ. ಒನಿಲ್‌ ಡಿಸೋಜ ಮಾತನಾಡಿ, ವಸ್ತು ಸಂಗ್ರಹಾಲಯದ ಮೊದಲ ಹಂತದ ಕೆಲಸ ಪೂರ್ಣವಾಗಿದ್ದು, ಎರಡನೇ ಹಂತದ ಕೆಲಸ ನಡೆಯಲಿದೆ. ಮಾತೆ ಮೇರಿ ಮತ್ತು ಸೇಂಟ್‌ ಅಂತೋನಿಯವರ ಜೀವನಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗುತ್ತಿದೆ. ಸಂಗ್ರಹಾಲಯದಲ್ಲಿ ಇಡಲು ಯೋಗ್ಯವಾದ ವಸ್ತುಗಳ ಇದ್ದಲ್ಲಿ ಅವುಗಳನ್ನು ಆಶ್ರಮಕ್ಕೆ ನೀಡುವಂತೆ ಮನವಿ ಮಾಡಿದರು.

ಜಾನ್‌ ತಾವ್ರೊ ಅವರಿಗೆ ಹಳೆಯ ವಸ್ತುಗಳನ್ನು ಸಂಗ್ರಹಿಸುವುದು ಒಂದು ಹವ್ಯಾಸ. ಅವರು ಸಂಗ್ರಹಿಸಿದ ವಸ್ತುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಅವುಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಇಡುವ ಬಗ್ಗೆ ಚಿಂತನೆ ನಡೆಸಿದ್ದರು. ಈ ಸಂದರ್ಭದಲ್ಲಿ ಸೇಂಟ್‌ ಅಂತೋನಿ ಆಶ್ರಮದಲ್ಲಿ ವಸ್ತು ಸಂಗ್ರಹಾಲಯ ಮಾಡುತ್ತಿರುವುದನ್ನು ತಿಳಿದು, ತಮ್ಮಲ್ಲಿರುವ ವಸ್ತುಗಳನ್ನು ಆಶ್ರಮದ ವಸ್ತು ಸಂಗ್ರಹಾಲಯಕ್ಕೆ ನೀಡಿದ್ದಾರೆ.

ಸಂಸ್ಥೆಯ ಸಹಾಯಕ ನಿರ್ದೇಶಕ ಫಾ. ರೋಶನ್‌ ಡಿಸೋಜ, ಆಡಳಿತಾಧಿಕಾರಿ ಫಾ.ಆಲ್ಬನ್‌ ರಾಡ್ರಿಗಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.