ADVERTISEMENT

ಸ್ವರ ಕುಡ್ಲ ಸಂಗೀತ ಸ್ಪರ್ಧೆ: ಆಯೂಷ್‌ ಪ್ರೇಮ್‌ ಪ್ರಥಮ

ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ 17ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 5:43 IST
Last Updated 27 ಸೆಪ್ಟೆಂಬರ್ 2024, 5:43 IST
ಕಾರ್ಯಕ್ರಮದಲ್ಲಿ ರಾಜಾರಾಮ್‌ ಭಕ್ತ, ಗುಡ್‌ವಿಲ್‌ ಫ್ರೆಡ್ರಿಕ್ಸ್‌ ಹಾಗೂ ಕೆ.ಸಿ.ಬಶೀರ್‌ ಅವರನ್ನು ಸನ್ಮಾನಿಸಲಾಯಿತು. ತೋನ್ಸೆ ಪುಷ್ಕಳ ಕುಮಾರ್‌, ಕೇಶವ ಕನಿಲ, ರಾಧಾಕೃಷ್ಣ ಭಟ್‌, ಲತೀಫ್‌ ಗುರುಪುರ, ಚಂದ್ರಹಾಸ ಶೆಟ್ಟಿ, ಲಾರೆನ್ಸ್ ಡಿಸೋಜ, ದೀಪಕ್‌ರಾಜ್ ಉಳ್ಳಾಲ್‌, ವಾಲ್ಟರ್ ನಂದಳಿಕೆ, ದೇವದಾಸ್ ಕೊಲ್ಯ, ನಿರುಪಮಾ ಪ್ರಸಾದ್‌ ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ರಾಜಾರಾಮ್‌ ಭಕ್ತ, ಗುಡ್‌ವಿಲ್‌ ಫ್ರೆಡ್ರಿಕ್ಸ್‌ ಹಾಗೂ ಕೆ.ಸಿ.ಬಶೀರ್‌ ಅವರನ್ನು ಸನ್ಮಾನಿಸಲಾಯಿತು. ತೋನ್ಸೆ ಪುಷ್ಕಳ ಕುಮಾರ್‌, ಕೇಶವ ಕನಿಲ, ರಾಧಾಕೃಷ್ಣ ಭಟ್‌, ಲತೀಫ್‌ ಗುರುಪುರ, ಚಂದ್ರಹಾಸ ಶೆಟ್ಟಿ, ಲಾರೆನ್ಸ್ ಡಿಸೋಜ, ದೀಪಕ್‌ರಾಜ್ ಉಳ್ಳಾಲ್‌, ವಾಲ್ಟರ್ ನಂದಳಿಕೆ, ದೇವದಾಸ್ ಕೊಲ್ಯ, ನಿರುಪಮಾ ಪ್ರಸಾದ್‌ ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ   

ಮಂಗಳೂರು: ಆಯೂಷ್‌ ಪ್ರೇಮ್‌ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಸಂಗೀತ ಕಲಾವಿದರ ಒಕ್ಕೂಟವು ಇಲ್ಲಿ ಗುರುವಾರ ಏರ್ಪಡಿಸಿದ್ದ ‘ಸ್ವರ ಕುಡ್ಲ ಸೀಸನ್‌ 6’ ಸಂಗೀತ ಸ್ಪರ್ಧೆಯಯ ವಿಜೇತರಾಗಿ ಹೊರಹೊಮ್ಮಿದರು.

ಸ್ನೇಹಿತ್ ಸುರೇಂದ್ರನ್‌ ಅವರು ರನ್ನರ್ ಅಪ್ ಬಹುಮಾನ ಪಡೆದರು. ಮೂರನೇ ಬಹುಮಾನವನ್ನು ಮಹೇಂದ್ರ ಶೆಟ್ಟಿ ಹಾಗೂ ಪ್ರಣತಿ ಕೂಳೂರು ಹಂಚಿಕೊಂಡರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 90 ಸಂಗೀತ ಕಲಾವಿದರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಧ್ವನಿ ಪರೀಕ್ಷಾ ಹಂತ ಹಾಗೂ ಸೆಮಿಫೈನಲ್‌ ಸುತ್ತುಗಳ ಬಳಿಕ 12 ಮಂದಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಪುರಭವನದಲ್ಲಿ ಗುರುವಾರ ಏರ್ಪಡಿಸಿದ್ದ ಒಕ್ಕೂಟದ 17ನೇ ವಾರ್ಷಿಕೋತ್ಸವದಲ್ಲಿ ಗಣ್ಯರು ಬಹುಮಾನ ವಿತರಿಸಿದರು. 

ADVERTISEMENT

ಕಾರ್ಯಕ್ರಮದಲ್ಲಿ ಉಡುಪಿಯ ಸಂಗೀತ ಕಲಾವಿದ ರಾಜಾರಾಮ ಭಕ್ತ, ಕೀಬೋರ್ಡ್‌ ವಾದಕ ಗುಡ್‌ವಿಲ್‌ ಫ್ರೆಡ್ರಿಕ್ಸ್‌ ಹಾಗೂ ಗಿಟಾರ್‌ ವಾದಕ ಕೆ.ಸಿ.ಬಶೀರ್‌ ಅಹ್ಮದ್‌ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಕುಕ್ಕುಂದೂರು ಚಂದ್ರಶೇಖರ ಶೆಟ್ಟಿ, ‘ಒಕ್ಕೂಟವು ಪ್ರತಿವರ್ಷವೂ ಜಾತಿ ಮತ ಭೇದವಿಲ್ಲದೇ ಕಲಾವಿದರನ್ನು ಗುರುತಿಸಿ ಸನ್ಮಾನ ಮಾಡುತ್ತಿದೆ. ಕಲಾವಿದರ ಮಕ್ಕಳಿಗೆ ವಿದ್ಯಾನಿಧಿ ವಿತರಿಸುತ್ತಿದೆ. ಮುಂದಿನ ಪೀಳಿಗೆಗೆ ಸಂಗೀತ ಕಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇಂತಹ ಕಾರ್ಯ ಮುಂದುವರಿಯಲಿ’ ಎಂದು ಹಾರೈಸಿದರು.

ದೈಜಿವರ್ಲ್ಡ್‌ ಮೀಡಿಯಾ ಸ್ಥಾಪಕ ವಾಲ್ಟರ್ ನಂದಳಿಕೆ, ‘ಕಲಾವಿದರು ಅಶಕ್ತರಲ್ಲ. ಅಶಕ್ತಿ ಎಂಬುದು ಮಾನಸಿಕ ಚಿಂತನೆ ಮಾತ್ರ. ಕಲೆ ಒಂದು ಸಶಕ್ತ ಮಾಧ್ಯಮ. ಕಲೆಯನ್ನು ಮಣಿಸಲು ಯಾರಿಗೂ ಸಾಧ್ಯವಿಲ್ಲ. ಕಲಾವಿದರಿಗೆ ಸಿಗುವ ಗೌರವ ಘನತೆ, ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವ ಶ್ರೀಮಂತರಿಗೂ ಸಿಗದು.  ಶ್ರೀಮಂತರು ಹಣ ತೆತ್ತು ಪ್ರಚಾರ ಪಡೆದರೆ, ಕಲೆಯೇ ಕಲಾವಿದರಿಗೆ ಗೌರವ ತಂದುಕೊಡುತ್ತದೆ’ ಎಂದರು.

‘ಭಾರತೀಯರಲ್ಲಿ ಒಗ್ಗಟ್ಟು ಕಡಿಮೆ. ಆದರೆ ಕಲಾವಿದರ ಒಕ್ಕೂಟ ಇದಕ್ಕೆ ಅಪವಾದ. ಒಗ್ಗಟ್ಟಿನಿಂದ ಏನೆಲ್ಲ ಮಾಡಬಹುದು ಎಂಬುದಕ್ಕೆ ಈ ಒಕ್ಕೂಟವೇ ಸಾಕ್ಷಿ. ಈ ಐಕ್ಯತೆ ಮುಂದುವರಿಯಲಿ’ ಎಂದು ಹಾರೈಸಿದರು.

ಶ್ರೀಭಗವತಿ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ದೇವದಾಸ ಕೊಲ್ಯ, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ, ನಿರುಪಮಾ ಪ್ರಸಾದ್‌ ಮಾತನಾಡಿದರು.

ಒಕ್ಕೂಟದ ಅಧ್ಯಕ್ಷರಾದ ದೀಪಕ್‌ ರಾಜ್ ಉಳ್ಳಾಲ್‌ ಅಧ್ಯಕ್ಷತೆ ವಹಿಸಿದ್ದರು. ಪ್ಲಾಂಟ್‌ಟೆಕ್‌ ನಿರ್ದೇಶಕ ಲಾರೆನ್ಸ್‌ ಡಿಸೋಜ, ಸಿಂಫನಿ ಮ್ಯೂಸಿಕ್‌ನ ಲಾಯ್‌ ನೊರೊನ್ಹ, ಉದ್ಯಮಿಗಳಾದ ಲತೀಫ್ ಗುರುಪುರ, ಮಹಮ್ಮದ್ ಅಯಾಜ್‌ ಮತ್ತಿತರರು ಭಾಗವಹಿಸಿದ್ದರು.  ಒಕ್ಕೂಟದ ಗೌರವ ಸಲಹೆಗಾರ ತೋನ್ಸೆ ಪುಷ್ಕಳ ಕುಮಾರ್‌ ಸ್ವಾಗತಿಸಿದರು. ಗೌರವ ಸಲಹೆಗಾರ ಜಗದೀಶ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಅಭಿಷೇಕ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಕೇಶವ ಕನಿಲ ಧನ್ಯವಾದ ಸಮರ್ಪಿಸಿದರು. ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.