ADVERTISEMENT

‘ನಡ ಶಾಲೆ’ ನಡೆದು ಬಂದ ದಾರಿ

ಶತಮಾನೋತ್ಸವ ಸಂಭ್ರಮದಲ್ಲಿ ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 7:00 IST
Last Updated 24 ಜನವರಿ 2026, 7:00 IST
₹ 1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕಟ್ಟಡ
₹ 1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕಟ್ಟಡ   

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಪ್ರಕೃತಿಯ ಮಡಿಲಲ್ಲಿ ನೂರು ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣ್ಮನ ಸೆಳೆಯುತ್ತಿದ್ದು, ಸಂಭ್ರಮ ಆಚರಣೆಗೆ ಸಿದ್ಧಗೊಂಡಿದೆ.

ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್‌ಕುಮಾರ್ ಅವರ ಪ್ರಯತ್ನದಿಂದ ₹ 1.5 ಕೋಟಿ ವೆಚ್ಚದಲ್ಲಿ ಎಲ್ಲ ಮೂಲ ಸೌಕರ್ಯಗಳನ್ನೊಳಗೊಂಡ ನೂತನ ಶಾಲಾ ಕಟ್ಟಡ ನಿರ್ಮಾಣವಾಗಿದೆ. ವಿಶಾಲವಾದ ಕ್ರೀಡಾಂಗಣ, ಗ್ರಂಥಾಲಯ, ಪೀಠೋಪಕರಣ, ಶೌಚಾಲಯ, ರಂಗಮಂದಿರವೂ ಇದೆ.

1925ರ ನ.25ರಂದು ನಡಗುತ್ತು ದಿ.ಚಂದಯ್ಯ ಅಜ್ರಿ ಅವರು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ನಡ ಪೆರ್ಮಾಣು ಬಸದಿಯ ವಠಾರದಲ್ಲಿ ಸ್ವಂತ ಖರ್ಚಿನಿಂದ ಪ್ರಾಥಮಿಕ ಶಾಲೆಯನ್ನು ಆರಂಭಿಸಿದರು. ಶಾಲೆಗೆ ಹೊಸ ಕಟ್ಟಡ ನಿರ್ಮಿಸಿ, ಪೀಠೋಪಕರಣಗಳನ್ನೂ ಒದಗಿಸಿ, ಶಿಕ್ಷಕರಿಗೂ ವೇತನ ನೀಡುತ್ತಿದ್ದರು. ಮಳೆಗಾಲದಲ್ಲಿ ದೋಣಿ ಮೂಲಕ ಶಾಲೆಗೆ ನದಿ ದಾಟಿ ಬರಲು ಒಬ್ಬ ಅಂಬಿಗನನ್ನು ನೇಮಕ ಮಾಡಿ ಅಜ್ರಿಯವರೇ ಅವನ ಸಂಬಳ ಕೊಡುತ್ತಿದ್ದರು. ಸುಮಾರು 65 ವರ್ಷ ಅದೇ ಕಟ್ಟಡದಲ್ಲಿ ತರಗತಿಗಳು ನಡೆದವು.

ADVERTISEMENT

ಬಳಿಕ ಸರ್ಕಾರದ ಅನುದಾನದಿಂದ ಸರ್ಕಾರಿ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಾಣವಾಗಿತ್ತು. ಪ್ರಸ್ತುತ ಶಾಲೆಯಲ್ಲಿ 55 ಬಾಲಕರು, 49 ಬಾಲಕಿಯರು ಕಲಿಯುತ್ತಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾ ತಿಳಿಸಿದ್ದಾರೆ.

ಶತಮಾನೋತ್ಸವ: ಶಾಸಕ ಹರೀಶ್ ಪೂಂಜ, ಸ್ಥಳೀಯ ಜನಪ್ರತಿನಿಧಿಗಳು, ಊರಿನ ನಾಗರಿಕರು, ಹಿರಿಯ ವಿದ್ಯಾರ್ಥಿಗಳು, ಪೋಷಕರು ಸೇರಿ ಶಾಲಾ ಶತಮಾನೋತ್ಸವ ಸಮಿತಿ ರಚಿಸಿ, 2025ರ ಆ.23ರಂದು ಶತಮಾನೋತ್ಸವ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಯಿತು.

ಆರೋಗ್ಯ ಉಚಿತ ತಪಾಸಣಾ ಶಿಬಿರ, ಕ್ರೀಡಾಕೂಟ, ಪ್ರತಿಭಾಕಾರಂಜಿ ಸ್ಪರ್ಧೆ, ಶ್ರಮದಾನ, ಅಂಗವಿಕಲ ವಿದ್ಯಾರ್ಥಿಗಳಿಗೆ ನೆರವು ನೀಡಲಾಗಿದೆ.

ಶಾಲಾ ರಂಗಮಂದಿರ, ಪ್ರವೇಶದ್ವಾರ ಮತ್ತು ನಾಮಫಲಕ, ಹೊಸಕಟ್ಟಡದ ಎದುರು ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಗಳನ್ನು ಸಾರ್ವಜನಿಕರು ಹಾಗೂ ದಾನಿಗಳ ಸಹಕಾರದೊಂದಿಗೆ ಪೂರ್ಣಗೊಳಿಸಲಾಗಿದೆ. ಜ.25ರಂದು ಭಾನುವಾರ ಶತಮಾನೋತ್ಸವದ ಸಮಾರೋಪ ನಡೆಯಲಿದ್ದು, ಸಿದ್ಧತೆಗಳು ನಡೆಯುತ್ತಿವೆ.

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಶತಮಾನೋತ್ಸವ ಸಮಿತಿ ಅಧ್ಯಕ್ಷ ಬಿ.ಮುನಿರಾಜ ಅಜ್ರಿ, ಕಾರ್ಯಾಧ್ಯಕ್ಷ ಶಶಿಕಿರಣ್ ಜೈನ್, ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಶ್ರದ್ಧಾ, ಕೋಶಾಧಿಕಾರಿ ಸಯ್ಯದ್ ಹಬೀಬ್ ಸಾಹೇಬ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರಣೇಂದ್ರ ಕುಮಾರ್, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜನಾರ್ದನ ನಾಯ್ಕ ನೇತೃತ್ವದಲ್ಲಿ ವಿವಿಧ ಸಮಿತಿಗಳ ಸದಸ್ಯರು ಸಿದ್ಧತೆಗಳಲ್ಲಿ ನಿರತರಾಗಿದ್ದಾರೆ.

ಸ್ಥಳೀಯ ಭಾಷೆ, ಸಂಸ್ಕೃತಿ ರಕ್ಷಣೆ ಕಾರ್ಯಗಾರ ನಾಳೆ

ಉಜಿರೆ: ಮಂಗಳೂರಿನ ಕರಾವಳಿ ವಿಕಿಪೀಡಿಯಾ ಯೂಸರ್ ಗ್ರೂಪ್ ಹಾಗೂ ಉಜಿರೆಯ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ಜ.24ರಂದು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿ ರಕ್ಷಣೆ ಕುರಿತ ವಿಕಿಪೀಡಿಯಾ ಸಂಪಾದನಾ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಟಿ.ಎನ್.ಕೇಶವ ಅವರು ಬೆಳಿಗ್ಗೆ 9.30ಕ್ಕೆ ಕಾರ್ಯಾಗಾರ ಉದ್ಘಾಟಿಸುವರು. ಕಾಲೇಜಿನ ಉಪಪ್ರಾಂಶುಪಾಲೆ ಪ್ರೊ.ಕೆ.ಪಿ.ನಂದಕುಮಾರಿ ಅಧ್ಯಕ್ಷತೆ ವಹಿಸುವರು ಎಂದು ಕಾರ್ಯಕ್ರಮದ ಸಂಯೋಜಕ, ಕನ್ನಡ ಉಪನ್ಯಾಸಕ ದಿವಾಕರ ಕೆ. ತಿಳಿಸಿದ್ದಾರೆ.

₹ 1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕಟ್ಟಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.