ಮಂಗಳೂರು: ನೆಲದ ಸಂಸ್ಕೃತಿಯನ್ನು ಪ್ರತಿಫಲಿಸುವ ನಾಗರ ಪಂಚಮಿ ಹಬ್ಬವನ್ನು ತುಳುನಾಡಿನಾದ್ಯಂತ ಭಕ್ತಿ–ಭಾವದಿಂದ ಮಂಗಳವಾರ ಆಚರಿಸಲಾಯಿತು. ನಾಗಬನಗಳು, ನಾಗಾರಾಧನೆ ಕ್ಷೇತ್ರಗಳಿಗೆ ಸಹಸ್ರಾರು ಭಕ್ತರು ಭೇಟಿ ನೀಡಿದರು. ದಿನವಿಡೀ ವಿಶೇಷ ಪೂಜೆ, ಸೇವೆಗಳು ನಡೆದವು.
ಕುಡುಪು ಅನಂತಪದ್ಮನಾಭ ದೇವಸ್ಥಾನದಲ್ಲಿ ಬೆಳಗಿನಜಾವ 4 ಗಂಟೆಯಿಂದಲೇ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಅನಂತಪದ್ಮನಾಭ ದೇವರಿಗೆ ಉಷಾಃಕಾಲದ ಪೂಜೆಯೊಂದಿಗೆ ವಿಶೇಷವಾದ ಪಂಚಾಮೃತ ಅಭಿಷೇಕ, ಸಹಸ್ರನಾಮ ಅರ್ಚನೆ, ಅಷ್ಟೋತ್ತರ ಅರ್ಚನೆ, ಹರಿವಾಣ ನೈವೇದ್ಯದೊಂದಿಗೆ ಮಹಾಪೂಜೆ ಅರ್ಪಿಸಲಾಯಿತು.
ಭಕ್ತರು ನಾಗನಿಗೆ ಪ್ರಿಯವಾದ ಕೇದಿಗೆ ಹೂ, ಸಂಪಿಗೆ, ಹಿಂಗಾರ, ಮಲ್ಲಿಗೆ ಹೂ ಅರ್ಪಿಸಿದರು. ಹರಕೆ ಹೊತ್ತವರು ಚಿನ್ನ, ಬೆಳ್ಳಿ ಹರಕೆ ಒಪ್ಪಿಸಿದರು. ಪಂಚಾಮೃತ, ತಂಬಿಲ ಸೇವೆ ಸಲ್ಲಿಸಿದರು. ಭಕ್ತರಿಂದ ಸುಮಾರು 50 ಸಾವಿರ ಸೀಯಾಳ, 100 ಲೀಟರ್‌ಗೂ ಮಿಕ್ಕಿ ಹಾಲು, 2,500ರಷ್ಟು ಪಂಚಾಮೃತ ಸೇವೆ, 13 ಸಾವಿರದಷ್ಟು ತಂಬಿಲ ಸೇವೆ ಅರ್ಪಣೆಗೊಂಡಿತು ಎಂದು ಅರ್ಚಕರು ತಿಳಿಸಿದರು.
ಮಧ್ಯಾಹ್ನ ಅಂದಾಜು 20 ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಕೆ ನರಸಿಂಹ ತಂತ್ರಿ, ಆನುವಂಶಿಕ ಮೊಕ್ತೇಸರರಾದ ಕೆ. ಮನೋಹರ ಭಟ್, ಕೆ.ಬಾಲಕೃಷ್ಣ ಕಾರಂತ, ಭಾಸ್ಕರ ಕೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರವೀಣ್ ಹಾಜರಿದ್ದರು.
ಶರವು ಮಹಾಗಣಪತಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಪಾಂಡೇಶ್ವರದ ಮಹಾಲಿಂಗೇಶ್ವರ, ರಥ ಬೀದಿಯ ವೆಂಕಟರಮಣ ದೇವಸ್ಥಾನದ ನಾಗನಕಟ್ಟೆ ಮತ್ತಿತರ ಕಡೆಗಳಲ್ಲಿ ವಿಶೇಷ ಪೂಜೆ ನೆರವೇರಿದವು.
ಕುಟುಂಬಗಳ ಸಾಂಪ್ರದಾಯಿಕ ನಾಗಬನಗಳಿಗೆ ತೆರಳಿ ಜನರು ಪೂಜೆ ಸಲ್ಲಿಸಿದರು, ಜಮೀನಿನ ನಾಗಬನಗಳಲ್ಲಿ ತನು ಎರೆದರು.
ಕದ್ರಿಯಲ್ಲಿ ವಿಶೇಷ ಪೂಜೆ
ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರು ನಾಗದೇವರಿಗೆ ಹಾಲು ಸೀಯಾಳ ನಾಗತಂಬಿಲ ಹಾಗೂ ನಾಗ ಪಂಚಾಮೃತಾಭಿಷೇಕ ಸೇವೆ ಸಲ್ಲಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಜೆ. ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ವ್ಯವಸ್ಥಾಪನ ಸಮಿತಿ ಸದಸ್ಯರಾದ ಹರಿನಾಥ್ ರಾಜೇಂದ್ರ ಚಿಲಿಂಬಿ ಉಷಾ ಪ್ರಭಾಕರ್ ಕಿರಣ್ ಕುಮಾರ್ ದಿಲ್‌ರಾಜ್ ಆಳ್ವ ಪ್ರೀತಾ ನಂದನ್ ನಾರಾಯಣ ಕೋಟ್ಯಾನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.