ADVERTISEMENT

ದೇಶದ್ರೋಹಿ ಚಟುವಟಿಕೆಗೆ ಕಾಂಗ್ರೆಸ್ ಪ್ರೇರಣೆ: ನಳಿನ್‌ ಕುಮಾರ್ ಕಟೀಲ್

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 12:53 IST
Last Updated 22 ಫೆಬ್ರುವರಿ 2020, 12:53 IST
ನಳಿನ್‌ಕುಮಾರ್‌ ಕಟೀಲ್
ನಳಿನ್‌ಕುಮಾರ್‌ ಕಟೀಲ್   

ಪುತ್ತೂರು: ‘ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ದೇಶದ್ರೋಹಿ ಹೇಳಿಕೆಗಳನ್ನು ನೀಡುವ ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದರು.

ಇಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಿಎಎ ವಿರುದ್ಧ ಪ್ರತಿಭಟನೆಯ ಹೆಸರಿನಲ್ಲಿ ದೇಶದ್ರೋಹಿ ಹೇಳಿಕೆಗಳನ್ನು ನೀಡುವ, ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ನಡೆಸುವ ಕೆಲಸವು ನಿರಂತರವಾಗಿ ನಡೆಯುತ್ತಿದೆ. ಜನತೆಯನ್ನು ದಾರಿ ತಪ್ಪಿಸುವ ಕೆಲಸವು ನಕ್ಸಲ್, ಕಮ್ಯುನಿಸ್ಟ್ ವಿಚಾರಧಾರೆಯ ಮೂಲಕ ಆಗುತ್ತಿದೆ. ಇದಕ್ಕೆ ಪ್ರೇರಣೆ ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ’ ಎಂದು ಆಪಾದಿಸಿದರು.

‘ಈ ದೇಶದಲ್ಲಿ ಹುಟ್ಟಿ ಬೆಳೆದು, ಆಹಾರ, ಗಾಳಿ ಸ್ವೀಕರಿಸಿ ಇನ್ನೊಂದು ದೇಶಕ್ಕೆ ಜೈಕಾರ ಹಾಕುವುದು, ಅದರಲ್ಲೂ ಪಾಕಿಸ್ತಾನಕ್ಕೆ ಜೈಕಾರ ಹಾಕುವುದು ದೇಶದ್ರೋಹವಾಗಿದೆ. ಆಕೆಯ (ಅಮೂಲ್ಯ) ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇದರ ಹಿಂದೆ ಯಾರಿದ್ದಾರೆ? ಎಂಬುವುದನ್ನೂ ಪತ್ತೆ ಮಾಡಿ, ಸಂಘಟಕರ ವಿರುದ್ಧವೂ ಕ್ರಮಕೈಗೊಳ್ಳಬೇಕು’ ಎಂದು ‘ಪಾಕಿಸ್ತಾನ ಜಿಂದಾಬಾದ್ ಎಂಬ ಅಮೂಲ್ಯ ಘೋಷಣೆ’ ಕುರಿತು ಅವರು ಪ್ರತಿಕ್ರಿಯಿಸಿದರು.

ADVERTISEMENT

‘ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ, ಯಾರೂ ಇಂತಹ ಕೆಲಸ ಮಾಡದಂತೆ ನೋಡಿಕೊಳ್ಳುವ ಅಗತ್ಯವಿದೆ. ನಾಲ್ವರಿಗೆ ಕಠಿಣ ಶಿಕ್ಷೆಯಾದರೆ, ಮುಂದೆ ಯಾರೂ ಇಂತಹ ಪ್ರಕ್ರಿಯೆಯಲ್ಲಿ ಗುರುತಿಸಿಕೊಳ್ಳಲಾರರು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.