ADVERTISEMENT

ಪುತ್ತೂರು: ಅಪ್ಪಟ ಕೃಷಿಕನಾಗಿ ಖುಷಿಪಟ್ಟ ಸಂಸದ ಸಂಸದ ನಳಿನ್ ಕುಮಾರ್ ಕಟೀಲ್

ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಿಂದ ಹಡಿಲು ಗದ್ದೆ ಬೇಸಾಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 4:45 IST
Last Updated 14 ಜುಲೈ 2021, 4:45 IST
ಪುತ್ತೂರಿನ ಮಹಾಲಿಂಗೇಶ್ವರ ದೇವಳದ ವತಿಯಿಂದ ನಗರದ ಹೊರವಲಯದ ನೈತ್ತಾಡಿಯಲ್ಲಿರುವ ಹಡೀಲು ಗದ್ದೆ ಬೇಸಾಯ ಕಾರ್ಯದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಪಾಲ್ಗೊಂಡು ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿದರು.
ಪುತ್ತೂರಿನ ಮಹಾಲಿಂಗೇಶ್ವರ ದೇವಳದ ವತಿಯಿಂದ ನಗರದ ಹೊರವಲಯದ ನೈತ್ತಾಡಿಯಲ್ಲಿರುವ ಹಡೀಲು ಗದ್ದೆ ಬೇಸಾಯ ಕಾರ್ಯದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಪಾಲ್ಗೊಂಡು ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿದರು.   

ಪುತ್ತೂರು: ಲುಂಗಿ ತೊಟ್ಟು ಗದ್ದೆಗಿಳಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅಪ್ಪಟ ಕೃಷಿಕನಂತೆ ಕಂಡು ಬಂದರು. ಟ್ರ್ಯಾಕ್ಟರ್‌ ಹಾಗೂ ಜೋಡಿ ಎತ್ತುಗಳ ನೇಗಿಲು ಹಿಡಿದು ಉಳುವ ಮೂಲಕ ಗಮನ ಸೆಳೆದರು. ಜತೆಗೆ ನೇಜಿ ನಾಟಿ ಮಾಡುವ ಮೂಲಕ ಕೆಲಕಾಲ ಕೃಷಿಕರ ಜತೆಯಲ್ಲಿ ಸಂಭ್ರಮಿಸಿದರು.

ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ನಗರದ ಹೊರವಲಯದ ನೈತ್ತಾಡಿಯಲ್ಲಿರುವ ಬಾಳಗದ್ದೆ ಗೋಪಾಲಕೃಷ್ಣ ಭಟ್ ಅವರ ಹಡಿಲು ಗದ್ದೆ ಬೇಸಾಯ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದ ಅವರು, ಬೇಸಾಯ ಪ್ರಕ್ರಿಯೆಯಲ್ಲಿ ಕೆಲಕಾಲ ತೊಡಗಿಸಿಕೊಂಡು ಖುಷಿಪಟ್ಟರು.

ಬಳಿಕ ಮಾತನಾಡಿದ ಸಂಸದರು, ‘‘ಜಿಲ್ಲಾ ಉಸ್ತುವಾರಿ ಸಚಿವರ ಕರೆಯಂತೆ ಹಡಿಲು ಗದ್ದೆಗಳ ಬೇಸಾಯದ ಮೂಲಕ ನಮ್ಮ ಆಹಾರವನ್ನು ನಾವೇ ಉತ್ಪಾದಿಸುವ ಪ್ರಕ್ರಿಯೆ ನಡೆಯುತ್ತಿದೆ. ಪುತ್ತೂರು ಮಹಾಲಿಂಗೇಶ್ವರ ದೇವಳ ಈ ನಿಟ್ಟಿನಲ್ಲಿ ಸಾರಥ್ಯ ವಹಿಸಿದ್ದು, ಈ ಭಾಗದ ಎಲ್ಲಡೆ ಹಡಿಲು ಗದ್ದೆಗಳ ಬೇಸಾಯ ಕಾರ್ಯ ನಡೆಯುತ್ತಿದೆ’ ಎಂದು ಹೇಳಿದರು.

ADVERTISEMENT

ಹಿರಿಯ ಕೃಷಿಕ ಪರಮೇಶ್ವರ ನಾಯ್ಕ್ ಅವರನ್ನು ಗೌರವಿಸಲಾಯಿತು. ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಧಾರ್ಮಿಕ ಪರಿಷತ್ ಜಿಲ್ಲಾ ಸಮಿತಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ರಾಮದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ವೀಣಾ.ಬಿ.ಕೆ, ಪ್ರಧಾನ ಅರ್ಚಕರಾದ ವಿ.ಎಸ್. ಭಟ್, ವಸಂತ ಕೆದಿಲಾಯ, ಎಪಿಎಂಸಿ ಸದಸ್ಯ ಬೂಡಿಯಾರ್ ರಾಧಾಕೃಷ್ಣ ರೈ, ಕುರಿಯ ಉಳ್ಳಾಲ ಮಹಾವಿಷ್ಣು ಮೂರ್ತಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು, ಕಾರ್ಪಾಡಿ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು ಇದ್ದರು.

ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು ಸ್ವಾಗತಿಸಿದರು. ರಾಮಚಂದ್ರ ಕಾಮತ್ ವಂದಿಸಿದರು. ಡಾ.ಸುಧಾ ಎಸ್.ರಾವ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.