ADVERTISEMENT

ಪಠ್ಯದಿಂದ ನಾರಾಯಣಗುರು ಹೊರಕ್ಕೆ

ವಿವಿಧ ಮುಖಂಡರಿಂದ ವಿರೋಧ: ಸೇರ್ಪಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಮೇ 2022, 3:15 IST
Last Updated 19 ಮೇ 2022, 3:15 IST
ನಾರಾಯಣ ಗುರು
ನಾರಾಯಣ ಗುರು   

ಮಂಗಳೂರು: ಎಸ್ಸೆಸ್ಸೆಲ್ಸಿ ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ವಿಷಯವನ್ನು ಕೈಬಿಟ್ಟಿರುವುದು ಸಮಾಜಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಕೈಬಿಟ್ಟು ಅವಮಾನ ಮಾಡಲಾಗಿತ್ತು. ಈಗ ಪಠ್ಯದಿಂದ ಕೂಡ ಅವರ ಚಿಂತನೆಗಳನ್ನು ಕೈಬಿಟ್ಟಿರುವುದು ಖಂಡನೀಯ. ಸರ್ಕಾರ ಇದನ್ನು ಸರಿಪಡಿಸದಿದ್ದರೆ ಕಾಂಗ್ರೆಸ್‍ನಿಂದ ಚಳವಳಿ ನಡೆಸಲಾವುದು’ ಎಂದರು.

ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣಕ್ಕೆ ಒತ್ತು ನೀಡಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿದ್ದ ನಾರಾಯಣಗುರುಗಳ ಹೆಸರನ್ನು ಮಂಗಳೂರು ರೈಲು ನಿಲ್ದಾಣಕ್ಕೆ ಇಡಬೇಕೆಂಬ ಮನವಿಗೆ ಕೇಂದ್ರ ಸರ್ಕಾರದಿಂದ ಇನ್ನೂ ಸ್ಪಂದನೆ ದೊರಕಿಲ್ಲ. ಕೋಟಿ ಚೆನ್ನಯರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಇಡಬೇಕೆಂಬ ಒತ್ತಾಯಕ್ಕೂ ಮನ್ನಣೆ ದೊರಕಿಲ್ಲ ಎಂದು ಆರೋಪಿಸಿದರು.

ADVERTISEMENT

ಕ್ರಾಂತಿಕಾರಿ ಬಸವಣ್ಣ, ಪೆರಿಯಾರ್ ಅವರ ಹೆಸರನ್ನೂ ಪಠ್ಯದಿಂದ ಕೈಬಿಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೊಸದಾಗಿ ಯಾರ ಮಾಹಿತಿಗಳು ಪಠ್ಯ ಸೇರಿವೆ ಎಂಬ ಬಗ್ಗೆ ಮಾಹಿತಿ ಹೊಂದಿರುವ ಶಿಕ್ಷಣ ಸಚಿವರಿಗೆ, ಕೈಬಿಡಲಾಗಿರುವ ಬಗ್ಗೆ ಮಾಹಿತಿ ಇರುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ‘ಹೊಸ ಪಠ್ಯಪುಸ್ತಕಗಳು ಮುದ್ರಣವಾಗಿ ಬರುವಾಗ ಇವರೆಲ್ಲರ ವಿಚಾರ ಒಳಗೊಂಡ ಪಾಠ ಇರಬೇಕೆಂಬುದು ನಮ್ಮ ಒತ್ತಾಯ’ ಎಂದರು. ಪ್ರಮುಖರಾದ ಉಮೇಶ್ ದಂಡಕೇರಿ, ಅಬ್ದುಲ್ ಸಲೀಂ, ಸಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ಟಿ.ಕೆ. ಸುಧೀರ್, ರಮಾನಂದ ಪೂಜಾರಿ, ಹೇಮತ್ ಪೂಜಾರಿ, ಸವಾನ್ ಜೆಪ್ಪು, ನಝೀರ್ ಬಜಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.