ADVERTISEMENT

ನರೇಗಾ ಗ್ರಾಮಸಭೆ: ಕಮಿಶನ್‍ಗೆ ಅವಕಾಶವಿಲ್ಲ : ಧನಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 11:26 IST
Last Updated 14 ಡಿಸೆಂಬರ್ 2018, 11:26 IST
ಗುರುಪುರ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಮಾತನಾಡಿದರು.
ಗುರುಪುರ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಮಾತನಾಡಿದರು.   

ಬಜ್ಪೆ: ನರೇಗಾ ಯೋಜನೆಯಲ್ಲಿ ಗುತ್ತಿಗೆ ಅಥವಾ ಕಮಿಶನ್‍ಗೆ ಅವಕಾಶವಿಲ್ಲ ಎಂದು ಸಾಮಾಜಿಕ ಪರಿಶೋಧನಾ ಮಂಗಳೂರು ತಾಲ್ಲೂಕು ಸಂಯೋಜಕಿ ಧನಲಕ್ಷ್ಮಿ ತಿಳಿಸಿದರು.

ಗುರುಪುರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ನಡೆದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ(ನರೇಗಾ) 2018-19ರ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ನರೇಗಾ ಆರಂಭಿಸಿದ್ದು, ಇದು ಕಾರ್ಮಿಕರ ಹಕ್ಕು. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿಯೊಂದಿಗೆ ದಿನಗೂಲಿ ಮೂಲಕ ಬಡವರ ಬದುಕಿಗೆ ಆಧಾರವಾಗಿದೆ. ಕೂಲಿಹಣ ಸರ್ಕಾರದಿಂದ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ ಎಂದು ತಿಳಿಸಿದರು.

ADVERTISEMENT

ಗುರುಪುರ ಹೋಬಳಿಯಲ್ಲಿ ನರೇಗಾ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಸದುಪಯೋಗವಾಗಿದೆ ಮತ್ತು ಅತೀ ಹೆಚ್ಚು ಕಾಮಗಾರಿ ನಡೆದಿದೆ. ಯೋಜನೆಯ ನಾಲ್ಕು ಪ್ರವರ್ಗಗಳಲ್ಲೂ ಕಾಮಗಾರಿ ನಡೆದಿರುವುದು ವಿಶೇಷ ಎಂದು ಸಭೆಯ ನೋಡೆಲ್ ಅಧಿಕಾರಿ ಗುರುಪುರ ಹೋಬಳಿ ಕೃಷಿ ಅಧಿಕಾರಿ ವಿ. ಎಸ್. ಕುಲಕರ್ಣಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ ಮಾತನಾಡಿ, ‘ಯೋಜನೆಯಲ್ಲಿ ಕೃಷಿಕರು, ಮನೆ ಕಟ್ಟುವವರಿಗೆ ಸರ್ಕಾರದ ಅನುದಾನ ಸಿಗುತ್ತದೆ. ಬಡಜನರ ಕಲ್ಯಾಣದ ಯೋಜನೆಯಾಗಿದೆ’ ಎಂದರು.

‘ನರೇಗಾ ಯೋಜನೆಯ ಎಲ್ಲ ಕಾಮಗಾರಿಗಳಿಗೆ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿದೆ’ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ತಿಳಿಸಿದರು.

ಸಿಬ್ಬಂದಿ ಸುದರ್ಶನ್ ಹಿಂದಿನ ಸಾಲಿನ ನರೇಗಾ ಫಲಾನುಭವಿಗಳ ಮಾಹಿತಿ ಹಾಗೂ ಲೆಕ್ಕಪತ್ರ ಓದಿದರು. ಗ್ರಾಮಪಂಚಾಯಿತಿ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾಗಿ ರೇಖಾಮಣಿ, ಸಂಧ್ಯಾಲಕ್ಷ್ಮಿ ಮತ್ತು ಸ್ವಾತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.