ADVERTISEMENT

ಮಂಗಳೂರು: ಕಡಲಲ್ಲಿ ಮೂಡಿದ ತಿರಂಗಾ ರಂಗು

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬೋಟ್ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 14:24 IST
Last Updated 12 ಆಗಸ್ಟ್ 2022, 14:24 IST
ಮಂಗಳೂರಿನ ದಕ್ಕೆಯಲ್ಲಿ ಬೋಟ್‌ ರ್‍ಯಾಲಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಚಾಲನೆ ನೀಡಿದರು.
ಮಂಗಳೂರಿನ ದಕ್ಕೆಯಲ್ಲಿ ಬೋಟ್‌ ರ್‍ಯಾಲಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಚಾಲನೆ ನೀಡಿದರು.   

ಮಂಗಳೂರು: ದಣಿವಿಲ್ಲದ ದುಡಿಮೆಯಲ್ಲಿ ದಿನದ ಖುಷಿ ಕಾಣುವ ಕಡಲ ಮಕ್ಕಳಿಗೆ ಶುಕ್ರವಾರ ವಿಶೇಷ ಸಂಭ್ರಮ. ದಕ್ಕೆಯಲ್ಲಿ ಮೈಚಾಚಿ ನಿಂತಿದ್ದ ತಮ್ಮ ಬೋಟ್‌ಗಳನ್ನು ಅಲಂಕರಿಸುವ ಸಡಗರ. ಬಾಳೆಗಿಡಗಳು, ತೋರಣದಿಂದ ಶೃಂಗರಿಸಿದ್ದ ಬೋಟ್‌ಗಳ ತುದಿಯಲ್ಲಿ ಭಾರತದ ತ್ರಿವರ್ಣ ಧ್ವಜ ಬಾನೆತ್ತರಕ್ಕೆ ಹಾರಾಡುತ್ತಿತ್ತು. ಅಲಂಕೃತ ಬೋಟ್‌ಗಳು ಕಡಲ ಅಲೆಯಲ್ಲಿ ಬಣ್ಣದ ತ್ರಿವರ್ಣದ ರಂಗು ಮೂಡಿಸಿದವು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೀನುಗಾರಿಕಾ ಇಲಾಖೆ, ಕರಾವಳಿ ಕಾವಲು ಪಡೆ ಹಾಗೂ ಮೀನುಗಾರಿಕಾ ಸಂಘಗಳ ಸಹಯೋಗದಲ್ಲಿ ದಕ್ಕೆಯಲ್ಲಿ 75 ಬೋಟ್‌ಗಳ ರ್‍ಯಾಲಿ ನಡೆಯಿತು. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ರ್‍ಯಾಲಿಗೆ ಚಾಲನೆ ನೀಡಿದರು. ‘ಜಿಲ್ಲೆಯ ಮತ್ಸ್ಯೋದ್ಯಮ ಹೆಚ್ಚಿನ ಪ್ರಗತಿ ಸಾಧಿಸಲಿ. ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ 75 ಬೋಟ್‌ಗಳಿಗೆ ರಾಷ್ಟ್ರ ಧ್ವಜವನ್ನು ಕಟ್ಟಿ ದೇಶಾಭಿಮಾನವನ್ನು ಪಸರಿಸುವ ಕೆಲಸ ನಡೆಯುತ್ತಿರುವುದು ಸಂತಸದ ವಿಚಾರ. ಎರಡು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಮತ್ತೆ ಗರಿಗೆದರಿದೆ. ಈ ವರ್ಷ ಮತ್ಸ್ಯೋದ್ಯಮ ಹೆಚ್ಚು ಪ್ರಗತಿ ಕಾಣಲಿ’ ಎಂದು ಅವರು ಆಶಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್, ಉಪ ನಿರ್ದೇಶಕಿ ಸುಶ್ಮಿತಾ, ರೇವತಿ, ರೇಖಾ, ಕರಾವಳಿ ಕಾವಲು ಪಡೆಯ ಅಧಿಕಾರಿಗಳು, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್‌ ಕುಮಾರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.