ADVERTISEMENT

ಕೇರಳದಿಂದ ಮತ್ತೆ ಕರ್ನಾಟಕದತ್ತ ನಕ್ಸಲರು

ದಕ್ಷಿಣ ಕನ್ನಡ– ಕೊಡಗು ಗಡಿಯಲ್ಲಿ ಶೋಧ ಕಾರ್ಯ ಚುರುಕು; 3 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2024, 8:16 IST
Last Updated 9 ಏಪ್ರಿಲ್ 2024, 8:16 IST
<div class="paragraphs"><p>ದಕ್ಷಿಣ ಕನ್ನಡ ಜಿಲ್ಲೆಯ ಐನೆಕಿದು ಗ್ರಾಮದಲ್ಲಿ ಈಚೆಗೆ ಕಾಡಿನಂಚಿನ ಮನೆಗೆ ಶಂಕಿತ ನಕ್ಸಲರು&nbsp; ಭೇಟಿ ನೀಡಿದ ಬಳಿಕ ಎಎನ್ಎಫ್‌ ಸಿಬ್ಬಂದಿ ಇಲ್ಲಿನ ಕಾಡುಗಳ ಮೇಲೆ ಡ್ರೊನ್‌ ಹಾರಿಸುವ ಮೂಲಕ ನಿಗಾ ಇಟ್ಟಿದ್ದರು</p></div>

ದಕ್ಷಿಣ ಕನ್ನಡ ಜಿಲ್ಲೆಯ ಐನೆಕಿದು ಗ್ರಾಮದಲ್ಲಿ ಈಚೆಗೆ ಕಾಡಿನಂಚಿನ ಮನೆಗೆ ಶಂಕಿತ ನಕ್ಸಲರು  ಭೇಟಿ ನೀಡಿದ ಬಳಿಕ ಎಎನ್ಎಫ್‌ ಸಿಬ್ಬಂದಿ ಇಲ್ಲಿನ ಕಾಡುಗಳ ಮೇಲೆ ಡ್ರೊನ್‌ ಹಾರಿಸುವ ಮೂಲಕ ನಿಗಾ ಇಟ್ಟಿದ್ದರು

   

ಮಂಗಳೂರು: ದಶಕದಿಂದ ಈಚೆಗೆ ಕೇರಳ– ತಮಿಳುನಾಡು ಗಡಿ ಪ್ರದೇಶದ ಕಾಡುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಶಂಕಿತ ನಕ್ಸಲರು ಮತ್ತೆ ಕರ್ನಾಟಕದತ್ತ ಮುಖಮಾಡಿದ್ದಾರೆ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ರಾಜ್ಯದ ದಕ್ಷಿಣ ಕನ್ನಡ–ಕೊಡಗು ಜಿಲ್ಲೆಗಳ ಗಡಿ ಪ್ರದೇಶದ ಕಾಡಿನಂ‌‌‌ಚಿನ ಕೆಲವು ಮನೆಗಳಿಗೆ ಶಂಕಿತ ನಕ್ಸಲರ ತಂಡವು ಭೇಟಿ ನೀಡಿ, ಆಹಾರ ಸಾಮಗ್ರಿ ಕೊಂಡೊಯ್ದಿದೆ.

ADVERTISEMENT

ಕಡಮಕಲ್ಲು ಸಮೀಪದ ಕೂಜಿಮಲೆ ಅಂಗಡಿಗೆ ಮಾರ್ಚ್‌ 16ರಂದು ಭೇಟಿ ನೀಡಿದ್ದ ನಾಲ್ವರು, ದಿನಸಿ ಸಾಮಗ್ರಿ ಖರೀದಿಸಿದ್ದರು. ಅವರು ನಕ್ಸಲರು ಇರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಇದಾದ ಬಳಿಕ ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ವ್ಯಾಪ್ತಿಯ ಐನೆಕಿದು ಗ್ರಾಮದ ಕಾಡಿನಂಚಿನ ಮನೆಯೊಂದಕ್ಕೆ ಮಾರ್ಚ್‌ 23ರಂದು ಸಂಜೆ ನಾಲ್ವರು ಭೇಟಿ ನೀಡಿದ್ದರು. ಇಬ್ಬರು ಮಹಿಳೆಯರು, ಇಬ್ಬರು ಪುರುಷರನ್ನು ಒಳಗೊಂಡ ತಂಡವು ಆ ಮನೆಯಿಂದ ಊಟ, ಅಕ್ಕಿ, ಸಕ್ಕರೆ ಪಡೆದು ಕಾಡಿನತ್ತ ತೆರಳಿತ್ತು. ಕೂಜಿಮಲೆಯಲ್ಲಿ ಕಾಣಿಸಿಕೊಂಡ ತಂಡವೇ ಐನೆಕಿದು ಗ್ರಾಮಕ್ಕೂ ಭೇಟಿ ನೀಡಿದ್ದು ದೃಢಪಟ್ಟಿತ್ತು.

ನಕ್ಸಲರ ತಂಡವೊಂದು ಪುಷ್ಪಗಿರಿ ರಕ್ಷಿತಾರಣ್ಯ ಪ್ರದೇಶದಲ್ಲಿ ಓಡಾಡುತ್ತಿರುವುದು ಖಚಿತವಾಗುತ್ತಿದ್ದಂತೆಯ ನಕ್ಸಲ್ ನಿಗ್ರಹ ಪಡೆಯ (ಎಎನ್ಎಫ್‌) ಈ ಪ್ರದೇಶದಲ್ಲಿ ಶೋಧ ಕಾರ್ಯವನ್ನು (ಕೂಂಬಿಂಗ್‌) ಚುರುಕುಗೊಳಿಸಿತ್ತು. ಬಿಸಿಲೆ, ಕಡಮಕಲ್ಲು, ಸಂಪಾಜೆ, ಕರಿಕೆ ಮೊದಲಾದ ಕಡೆಯೂ ಹುಡುಕಾಟ ನಡೆಸಿತ್ತು.

ಆ ಬಳಿಕ ಕಡಬ ಪೊಲೀಸ್ ಠಾಣೆ ವ್ಯಾಪ್ತಿಯ ಕೊಂಬಾರು ಗ್ರಾಮದ ಚೇರು ಪ್ರದೇಶದ ಮನೆಯೊಂದಕ್ಕೆ ಏ. 4ರಂದು ರಾತ್ರಿ ಶಂಕಿತ ನಕ್ಸಲರ ತಂಡ ಭೇಟಿ ನೀಡಿತ್ತು. ಆ ಮನೆಯಲ್ಲೇ ಊಟ ಮಾಡಿದ್ದ ತಂಡ ದಿನಸಿ ಸಾಮಗ್ರಿಗಳನ್ನೂ ಪಡೆದುಕೊಂಡು ಹೋಗಿತ್ತು ಎನ್ನುತ್ತಾರೆ ಸ್ಥಳೀಯರು.

ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ 2012ರಲ್ಲಿ ಶಂಕಿತ ನಕ್ಸಲರ ಚಲನವಲನ ಕಂಡು ಬಂದಿತ್ತು. ಚೇರು ಕಾಡಿನಲ್ಲಿ 2012ರ ಸೆ.4ರಂದು ಎಎನ್‌ಎಫ್‌ ಸಿಬ್ಬಂದಿ, ಯುವಕನೊಬ್ಬನನ್ನು ಹತ್ಯೆ ಮಾಡಿದ್ದರು. ಮೃತ ವ್ಯಕ್ತಿಯನ್ನು ಶಂಕಿತ ನಕ್ಸಲ್‌ ಯಲ್ಲಪ್ಪ ಎಂದು ಗುರುತಿಸಲಾಗಿತ್ತು. ಬಳಿಕ ಈ ಪ್ರದೇಶದಲ್ಲಿ ಎಎನ್‌ಎಫ್‌ ನಿಗಾ ಹೆಚ್ಚಿಸಿದ್ದರಿಂದ ನಕ್ಸಲ್‌ ಚಟುವಟಿಕೆ ಕ್ರಮೇಣ ಕಡಿಮೆಯಾಗಿತ್ತು. 2019ರಲ್ಲಿ ಸುಬ್ರಹ್ಮಣ್ಯ ಪ್ರದೇಶಗಳಲ್ಲಿ ಶಂಕಿತ ನಕ್ಸಲರ ತಂಡ ಮತ್ತೆ ಕಾಣಿಸಿಕೊಂಡಿತ್ತು. 

‘ದಶಕದಿಂದ ಈಚೆಗೆ ರಾಜ್ಯದ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನಕ್ಸಲ್‌ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗಿತ್ತು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿಯಲ್ಲಿ ಈಗ ಮತ್ತೆ ನಕ್ಸಲರು ಕಾಣಿಸಿಕೊಂಡಿದ್ದು, ಈ ಬಗ್ಗೆ ಸುಬ್ರಹ್ಮಣ್ಯ, ಕಡಬ ಹಾಗೂ ಮಡಿಕೇರಿ ಗ್ರಾಮಾಂತರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈ ಪ್ರದೇಶಗಳಲ್ಲಿ ಕೂಂಬಿಂಗ್ ತೀವ್ರಗೊಳಿಸಿದ್ದೇವೆ. ಕೇರಳ–ತಮಿಳುನಾಡು ಗಡಿಯ ಕಾಡುಗಳಲ್ಲಿ ಸಕ್ರಿಯವಾಗಿದ್ದ ನಕ್ಸಲರ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವರೂ ಇದ್ದರು. ಅವರು ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ’ ಎಂದು ನಕ್ಸಲ್‌ ನಿಗ್ರಹ ಪಡೆಯ ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ‘ಪ್ರಜಾವಾಣಿ‘ಗೆ ತಿಳಿಸಿದರು.   

‘ಎಎನ್‌ಎಫ್‌ನ 25 ಮಂದಿಯ ತಂಡ ಕೂಂಬಿಂಗ್‌ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಜಿಲ್ಲಾ ಪೊಲೀಸರೂ ನಮಗೆ ನೆರವಾಗುತ್ತಿದ್ದಾರೆ’ ಎಂದರು.

ದಕ್ಷಿಣ ಕನ್ನಡ– ಕೊಡಗು ಗಡಿ ಭಾಗದಲ್ಲಿ ಕಾಣಿಸಿಕೊಂಡ ನಕ್ಸಲರು ಶೋಧ ಕಾರ್ಯ ಚುರುಕುಗೊಳಿಸಿದ ಎಎನ್‌ಎಫ್‌

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ನಕ್ಸಲ್ ಚಟುವಟಿಕೆ ಮತ್ತೆ ಗರಿಗೆದರಿದೆ. ಈ ಬಗ್ಗೆ ಸರ್ಕಾರ ಮೃದು ಧೋರಣೆ ತಳೆಯುವ ಬದಲು ಸಮಾಜ ವಿರೋಧಿ ಶಕ್ತಿಗಳನ್ನು ಸದೆಬಡಿಯಬೇಕು

- ವಿ.ಸುನಿಲ್ ಕುಮಾರ್‌ ಕಾರ್ಕಳ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.