ADVERTISEMENT

ಪ್ರತಿಕೂಲ ಹವಾಮಾನ: ಎನ್‌ಡಿಆರ್‌ಎಫ್‌ ತಂಡ ವಾಪಸ್‌

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 19:17 IST
Last Updated 9 ಆಗಸ್ಟ್ 2019, 19:17 IST
   

ಮಂಗಳೂರು: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಪ್ರವಾಹ, ಭೂಕುಸಿತ ಉಂಟಾಗಿರುವ ಸ್ಥಳಗಳಲ್ಲಿ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್‌) 130 ಜನರ ತಂಡವನ್ನು ಕರೆತಂದಿದ್ದ ವಾಯುಪಡೆ ವಿಶೇಷ ವಿಮಾನ ಪ್ರತಿಕೂಲ ಹವಾಮಾನದ ಕಾರಣ ಮಂಗಳೂರಿನಲ್ಲಿ ಇಳಿಯಲಾಗದೇ ಬೆಂಗಳೂರಿಗೆ ತೆರಳಿದೆ.

ದೆಹಲಿಯಿಂದ 130 ಜನರ ಎನ್‌ಡಿಆರ್‌ಎಫ್‌ ತಂಡವನ್ನು ಹೊತ್ತ ವಾಯುಪಡೆ ವಿಶೇಷ ವಿಮಾನ ಶುಕ್ರವಾರ ಸಂಜೆಯ ವೇಳೆಗೆ ಮಂಗಳೂರಿಗೆ ಬಂದಿತ್ತು. ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಲ ವಿಮಾನ ಇಳಿಸಲು ಸಾಧ್ಯವಾಗಲಿಲ್ಲ. ಮಾರ್ಗ ಬದಲಿಸಿದ ಪೈಲಟ್ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಕೊಂಡೊಯ್ದರು.

3,500 ಮೀನುಗಾರರ ರಕ್ಷಣೆ: ಮೀನುಗಾರಿಕೆಗೆ ತೆರಳಿ ಸಮುದ್ರದ ನಡುವೆ ಸಂಕಷ್ಟಕ್ಕೆ ಸಿಲುಕಿದ್ದ 255 ಸಣ್ಣ ಮೀನುಗಾರಿಕಾ ದೋಣಿಗಳನ್ನು ನವ ಮಂಗಳೂರು ಬಂದರು (ಎನ್‌ಎಂಪಿಟಿ) ಮಂಡಳಿ ನೇತೃತ್ವದ ತಂಡ ರಕ್ಷಿಸಿ, ಎನ್‌ಎಂಪಿಟಿಗೆ ಕರೆತರಲಾಗಿದೆ.

ADVERTISEMENT

‘ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಒಟ್ಟು 3,500 ಮೀನುಗಾರರನ್ನು ರಕ್ಷಿಸಲಾಗಿದೆ. ಅವರಿಗೂ ಎನ್‌ಎಂಪಿಟಿ ಆವರಣದಲ್ಲೇ ಆಶ್ರಯ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರಿಂದ ಈ ಕೆಲಸಕ್ಕೆ ಉತ್ತಮ ಸಹಕಾರ ದೊರಕಿದೆ’ ಎಂದು ಎನ್‌ಎಂಪಿಟಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.